ತೇಲಿಬಿಡುವೆನು ಹಾಳಿ ಹಡಗಗಳ, ಹುಡುಗರಾ-
ಟದೊಳೆಂತು ಅಂತು, ಕಾರ್‍ಮೋಡ ಕತ್ತಲೆ ಕವಿದ
ಹೊತ್ತು ಹೊರಪಾಗಿ ಬೆಳಗುವವರೆಗೆ, ಮನೆಯ ಕಸ-
ವನೆ ಸರಕು ಮಾಡಿ; ಕೆರೆಕಾಲುವೆಯನೊಂದು ಗೊಳಿ-
ಸುವ ಜಲಾದ್ವೈತದೀ ಕೆಂಪು ಹೊಳೆಯಲಿ, ಹಳ್ಳ-
ಹಿಡಿದು ಹೋಗಲಿ. ಹುಚ್ಚು ಮಳೆಗಾಳಿಗಳಿಗೀಡೆ
ಹುಲು ಹಡಗ? ಲಾಭ ಹಾನಿಯ ಲೆಕ್ಕ ಹೊತ್ತಿಗೆಯೊ-
ಳಿರಲಿ, ಬೆರಗಲಿ ಮೆಚ್ಚಿ ಕುಣಿದಾಡಿದುದೆ ಬಂತು.
ಒಡಲು ಉಡಿಗೆಗಳಂತೆ ಮಾಸಿ ಪಿಸಿವದು; ಉಸಿರು
ಹಸಿವೆ ನೀರಡಿಕೆಯಲಿ ಕುಸಿಯುವದು; ಬಗೆಯು ಗಂ-
ಧರ್‍ವನಗರಗಳನ್ನು ಕಟ್ಟಿ, ಬರಿದೊರೆ ಹರಿಸಿ,
ಮುಗಿಲ ಮಲ್ಲಿಗೆಯ ಕೊಯ್ದೀಡಾಡಿ ಮೂಸಿ, ಚಿ-
ತ್ತದ ಭಿತ್ತಿಯಲಿ ಮೂಡಿದಂಥ ಚಿತ್ರಗಳಲ್ಲಿ
ಜೀವಕಳೆದುಂಬಿ, ಸ್ವರ್‍ಗವ ಹಡೆದು ಪಡೆಯುತಿದೆ.
*****