ಮಾನವನ ಮಂಕುಗವಿಸುವ ಯೋಚನೆಗೆ ಮರುಗಿ
ಹೊರಹರಿದನವನು ಅಂತರವ ಕ್ಷಮಿಸಿ,
ಗೆಲಿಲಿಯನ್ ಗಲಭೆ ಗೊಂದಲಗಳಲ್ಲಿ;
ಬ್ಯಾಬಿಲೋನಿನ ನಕ್ಷತ್ರಪ್ರಭೆ ಸೃಷ್ಟಿಸಿತು
ಆಕಾರವಿರದ ಕಲ್ಪಕ ಕತ್ತಲನ್ನು;
ಸತ್ತ ಕ್ರಿಸ್ತನ ನೆತ್ತರಿನ ಕಂಪು ಕೊಚ್ಚಿತು
ಎಲ್ಲ ದೈವಿಕ ಸಹನಶೀಲತೆಯನು
ವ್ಯರ್‍ಥಗೊಳಿಸಿತು ಡೋರಿಕ್ ಶಿಸ್ತುಗಳನು.
ಹಿರಿದೆಂದು ಮಾನವನು ಭಾವಿಸಿದ್ದೆಲ್ಲ
ಉಳಿವುದೊಂದೇ ಹಗಲು ಅಥವ ಗಳಿಗೆ;
ಪ್ರೇಮ ನೀಡುವ ಸೌಖ್ಯ ಪ್ರೇಮವನೆ ತಿನ್ನುವುದು,
ಕುಂಚವೇ ಚಿತ್ರಕನ ಕನಸುಗಳನು,
ವಂದಿಘೋಷಣೆ ಅವನ ವೈಭವವ ಮುಗಿಸುವುದು,
ಸೈನಿಕನ ನಡೆ ಅವನ ಶಕ್ತಿಯನ್ನು;
ಇರುಳಲ್ಲಿ ಜ್ವಾಲೆಯಾಡುವುದೆಲ್ಲ ಬೆಳೆದದ್ದು
ಹೀರಿ ಮಾನವ ಹೃದಯಸಾರವನ್ನು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
(೪) ಬ್ಯಾಬಿಲೋನಿನ ಜ್ಯೋತಿಶ್ಯಾಸ್ತ್ರ
(೫) ‘ಆಕಾರವಿಲ್ಲದ ಕಲ್ಪಕ ಕತ್ತಲು’ ಕ್ರಿಶ್ಚಿಯನ್ ಧರ್‍ಮವನ್ನು ಸೂಚಿಸುತ್ತದೆ. ಅದನ್ನು ಹಾಗೆ ಬಣ್ಣಿಸಿದವನು ಪ್ರೊಕ್ಲಸ್ ಎಂಬ ದಾರ್‍ಶನಿಕ. ಇವನು ನವ ಪ್ಲೆಟಾನಿಕ್ ಪಂಥದವನು.
ಡೋರಿಕ್ ಶಿಸ್ತು – ಗ್ರೀಕರ ಶಿಸ್ತು