ಸುಮಾರು ಇನ್ನೂರು ವರ್‍ಷಗಳ ಹಿಂದಿನ ಕಥೆಯಿದು. ಬಲು ಸುಂದರ ನಾಡು ಕೇರಳದ ಕೊಚ್ಚಿನ್‌ನಲ್ಲಿ ಒಬ್ಬ ನಂಬೂದಿರಿ ಪಾಡ್ ವಾಸವಾಗಿದ್ದ.
ಈತ ಸರಳ ಸಜ್ಜನ ಉದಾರಿ ದಯಾಪರ ಸೌಮ್ಯ ವ್ಯಕ್ತಿಯಾಗಿದ್ದ. ಈತ ಒಂದು ಸುಂದರವಾದ ಗಿಳಿಯೊಂದನ್ನು ಸಾಕಿದ್ದ. ಈ ಗಿಳಿಯೊಂದಿಗೆ ಮೂರು ಹೊತ್ತು ಮಾತನಾಡುವುದು, ಕಾಲ ಕಳೆಯುವುದು, ಆಟ ಆಡುತ್ತಾ ಕಾಲ ಕಳೆಯುತ್ತಿದ್ದ.
ಗಿಳಿಯು ಮಾತನಾಡುವುದನ್ನು ಕೇಳಿ, ಹಾಡುವುದನ್ನು ಕೇಳಿ ನಲಿನಲಿದಾಡುವುದನ್ನು ಕಂಡು, ಮನೆಯ ಯಜಮಾನನೇನು ನೆರೆಹೊರೆಯವರೂ ಗಿಳಿಯ ವರ್‍ತನೆಗೆ ಮಾರು ಹೋಗಿದ್ದರು.
ಗಿಳಿಯನ್ನು ಬಿಟ್ಟು ಮನೆಯವರು, ಮನೆಯವರನ್ನು ಬಿಟ್ಟು ಗಿಳಿಯು ಅರೆಘಳಿಗೆ ಇರುತ್ತಿರಲಿಲ್ಲ. ಗಿಳಿಗೆ ನಿತ್ಯ ಬಾಳೆಹಣ್ಣು, ದ್ರಾಕ್ಷಿ, ಸೇಬು, ಸೀಬೆ, ಸಪೋಟ, ಮೂಸಂಬಿ, ಕಿತ್ತಲೆ, ಮಾವು, ಹಲಸು…. ಹೀಗೆ ನಾನಾ ತರತರದ ಹಣ್ಣುಹಂಪಲು ನೀರು ಇತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಎಲ್ಲರೂ ನೋಡಿಕೊಳ್ಳುತ್ತಿದ್ದರು.
ಹೀಗಿರಲಾಗಿ… ಒಂದು ದಿನ ಕಳ್ಳಬೆಕ್ಕೊಂದು ಉಪಾಯ ಮಾಡಿ ಮುದ್ದಿನ ಸುಂದರವಾದ ಗಿಳಿಯನ್ನು ರಾತ್ರೋರಾತ್ರಿ ಕೊಂದು ತಿಂದುಬಿಟ್ಟಿತು. ಮನೆಯ ಯಜಮಾನ ನಂಬೂದಿರಿ ಪಾಡ್ ಮೊದಲುಗೊಂಡು ಮನೆಯ ಜನರೂ ನೆರೆಹೊರೆಯವರೂ ಅತ್ತರು. ಕಳ್ಳ ಬೆಕ್ಕನ್ನು ಜಗ್ಗ ಶಪಿಸಿದರು. “ಚೆಂದದಿ ಅಂದದಿ ಸಾಕಿದ್ದ ಗಿಳಿಯನ್ನು ಕಳ್ಳ ಬೆಕ್ಕಿಗೆ ಕೊಟ್ಟು ಬಿಟ್ಟೆವಲ್ಲಾ….?” ಎಂದು ಎರಡು ಮೂರು ದಿನ ರೋಧಿಸಿದರು.
ಆ ಗಿಳಿಯ ಹೆಸರಿನಲ್ಲಿ ಸಂತಾಪಸಭೆ ಜರುಗಿಸಿದರು. ಮೂರು ದಿನದ ತಿಥಿ, ಹಾಗೂ ಶ್ರಾದ್ಧವನ್ನು ಹಮ್ಮಿಕೊಂಡರು. ಶಾಸ್ತ್ರೋಕ್ತವಾಗಿ ಗಿಳಿಗೆ ವಿಧಿವಿಧಾನದಂತೆ ೧೬ ಜನ ಬ್ರಾಹ್ಮಣರಿಗೆ ಊಟ ಬಡಿಸಿದರು.
ಇದು ಪ್ರತಿ ವರ್‍ಷ ಗಿಳಿಯ ಹೆಸರಿನಲ್ಲಿ ಶ್ರಾದ್ಧ ಏರ್‍ಪಡಿಸಿ ಊಟ ಬಡಿಸುವ ಪರಂಪರೆ, ಸಂಪ್ರದಾಯ, ವಿಧಿವಿಧಾನ ಇಂದಿಗೂ ಮುಂದುವರೆದು ಕೊಂಡು ಬಂದಿದೆ.
ಗಿಳಿ ಶ್ರಾದ್ಧವನ್ನು ಇಂದಿಗೂ ಕೈಬಿಟ್ಟಿಲ್ಲ. ಈಗ ಎರಡು ಜನ ಬ್ರಾಹ್ಮಣರಿಗೆ ಮಾತ್ರ ಊಟ ಬಡಿಸುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವರು.
ಪ್ರಾಣಿ-ಪಕ್ಷಿ-ಮನುಷ್ಯರೆಲ್ಲ ಒಂದೇ! ಮಾನವೀಯ ಸಂಬಂಧ ಮುಖ್ಯ ಅಲ್ಲವೇ?
*****