ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು
ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್
ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು
ರಂಜಾನ್ ಹಬ್ಬದ ಸಣ್ಣ ಗೆರೆಯಂತಹ
ಚಂದ್ರನ ನೋಡಿದ ಮಗಳು ಓಡೋಡಿ ಬಂದು
“ಅಮ್ಮಿ ಈದ್ ಮುಬಾರಕ್” ಹಬ್ಬದ ಚಂದ್ರನ ಕಂಡೆನಮ್ಮಾ
ನಾಳೆ ಬಿರ್ಯಾನಿ, ಶುರಖುರಮಾ ಮಾಡುವೆಯಲ್ಲ?
ಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ
ಝಂ ಝಮ್‌ನಿಂದ ಪವಿತ್ರ ಸ್ನಾನ ಮಾಡುವೆ.
ಮೆಕ್ಕಾದಿಂದ ಬಂದ ಝಂ ಝಮ್ ತೀರ್ಥ ಇಟ್ಟಿರುವೆಯಲ್ಲ
ಎಂದು ಉಲಿದವಳೇ ಎಲ್ಲರಿಗೂ ಮುಬಾರಕ್ ಹೇಳಲು
ಜಿಂಕೆಯಂತೆ ಜಿಗಿಯುತ್ತಾ ಹಾರಿ ಹೋದಳು ಮಗಳು
ಮಗಳ ಸಂಭ್ರಮದ ಕುಣಿದಾಟ ನೋಡಿದ
ಅಮ್ಮಿಯ ಮನದಲ್ಲಿ ಸಂಭ್ರಮ ಮೂಡಿ
ಮರುಕ್ಷಣವೇ ಮಾಯವಾಗಿ ನಿಟ್ಟುಸಿರು ಹೊರಬಿತ್ತು.
ಮಗಳೇ ನಿನ್ನ ಬಾಲ್ಯದ ತುಂಬಾ ಅಮವಾಸ್ಯೆ ಕತ್ತಲು,
ಬೆಳಕಿನ ಬೀಜ ಎಲ್ಲಿಂದ ತರಲಿ ಹೇಳು?
ನಿನ್ನ ಬಾಲ್ಯದ ಹೂ ನಳನಳಿಸಿ ಅರಳುವಾಗಲೇ
ಬೀಡಿ, ಎಲೆ, ಹೊಗೆಸೊಪ್ಪಿನ ಘಾಟು ತಪ್ಪಿಸಲಾಗಲಿಲ್ಲ
ಅಕ್ಷರ ಕಲಿತು ಮನಸು ಅರಳುವ ಸಮಯ
ತುತ್ತಿನ ಚೀಲ ತುಂಬಲು ಎಸಳು ಬೆರಳುಗಳಿಂದ
ಬೀಡಿ ತಂಬಾಕು ತುಂಬಿ ಮಡಚುತ್ತಾ
ಮೊರ ಹಿಡಿದು ಕುಳಿತೆಯಲ್ಲ ನನ್ನೊಂದಿಗೆ
ಬಾಳ ನೊಗಕ್ಕೆ ಹೆಗಲು ನೀಡಿದೆಯಲ್ಲ!
ನನ್ನ ಬಡತನದ ಶಾಪ ನಿನಗೂ ತಟ್ಟಿತೆ ಮಗು
“ಅಬ್ಬಾ”ನ ಅಂತ್ಯವಾಗಿ ಇಂದಿಗೆ ಆರು ವರ್ಷ
ಮುಳ್ಳು ಹಾದಿಯಲ್ಲಿ ಬಾಳ ಪಯಣ ಸಾಗಿತ್ತು.
ಅನಿವಾರ್ಯದ ಬದುಕು ಜಟಕಾ ಬಂಡಿ ನೂಕುತ್ತಾ
ಕರಿಮುಗಿಲ ಮರೆಸುವ ಬುರ್ಖಾಕ್ಕೆ ತೇಪೆ ಹಾಕಿರುವೆ
ಜಿಂಕೆಯಂತೆ ಪುಟಿಯುತ್ತಿದ್ದ ಮಗಳನ್ನು ನೋಡಿ
ಮಗದೊಮ್ಮೆ ಕಿಟಕಿಯಾಚೆಗಿನ ಶೂನ್ಯವನ್ನು ದಿಟ್ಟಿಸಿ
ನಿಟ್ಟುಸಿರಿಟ್ಟ ಅಮ್ಮಿಯ ದೀರ್ಘ ಉಸಿರಿನ ಸದ್ದು
ಮರುಕ್ಷಣವೇ ಕರ್ತವ್ಯ ಜಾಗೃತವಾಯ್ತು
ಪಟಪಟನೆ ಬೀಡಿ ಕಟ್ಟುಗಳ ಹಾಕಿ
ಬೀಡಿ ಕಂಪನಿ ಮಾಲೀಕರಿಗೆ ಮುಟ್ಟಿಸಬೇಕಲ್ಲವೇ?
ಅವನಿಟ್ಟ ಬಿಡಿಕಾಸು ತಂದು ಸಂತೆಗೆ ಹೋದರೆ
ಎಲ್ಲವೂ ದುಬಾರಿ ಒಂದಕ್ಕಾದರೆ ಒಂದಕ್ಕಿಲ್ಲ
ಮಗಳಿಗೆ ಮೆಹಂದಿ ಹೊಸಬಟ್ಟೆ ಎಲ್ಲಿಂದ ತರಲಿ?
ಬಡವರ ರಂಜಾನ್ ಹೀಗೆಯೇ ನೋಡು.
ಯಾವ ಬಾಯಿಯಲ್ಲಿ ಉಲಿಯಲಿ
“ಈದ್ ಮುಬಾರಕ್” ಎಂದು.
*****
ಶುರಖುರಮಾ-ಸೇವಿಗೆ ಪಾಯಸ
ಝಮ್-ಮೆಕ್ಕಾದ ಪವಿತ್ರನೀರು