ದೇಹದ ಹೊರಗೆ ಆದ ರೋಗದ ಚಿನ್ಹೆಯನ್ನು ಸರಳವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ದೇಹದ ಒಳಗೆ ಕಾಣಿಸಿಕೊಂಡ ಹುಣ್ಣು ಹೃದಯದ ನರ ತಡೆಯಾಗುವದು. ಮಿದುಳಿನಲ್ಲಿಯ ಕಾಯಿಲೆ, ಜಠರದಲ್ಲಿಯ ಕಾಯಿಲೆಗಳನ್ನು ಕಂಡು ಹಿಡಿಯಲು x ಕಿರಣಗಳಿಂದಲೂ ಸ್ಕ್ಯಾನಿಂಗ್‌ನಿಂದಲೂ ದೇಹದ ಒಳಾಗಿರುವ ರೋಗಾಣುಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಇದೊಂದು ಹೊಸವಿಧಾನವೆಂದರೂ ವೈದ್ಯಲೋಕದಲ್ಲಿ ಈ ವಿಧಾನವು ಹಳೆಯದಾಯಿತು ಎಂದು ಹೇಳಲಾಗುತ್ತದೆ.
ಅದಕ್ಕಾಗಿಯೇ ಕ್ಯಾಲಿಪೋರ್‍ನಿಯಾದ ತಂತ್ರಜ್ಞಾನ ಸಂಸ್ಥೆಯ (ಕಾಲ್ಯೆಕ್) ವಿಜ್ಞಾನಿಗಳು ಹಲವು ವರ್‍ಷಗಳಿಂದ ಪ್ರಯತ್ನಿಸಿ ಒಂದು “ಯಂತ್ರ ಹುಳು” ವನ್ನು ಅಭಿವೃದ್ದಿಪಡಿಸಿದ್ದಾರೆ. ಈಗಾಗಲೇ ಜಗತ್ತಿನ ಹಲವಾರು ಪ್ರಯೋಗಾಲಯಗಳಲ್ಲಿ ಯಂತ್ರಮಾನವರ ತಯಾರಿಕೆ ಯಶಸ್ವಿಯಾಗಿದೆ. ಈ ಯಂತ್ರಹುಳು ಅತ್ಯಂತ ಚಿಕ್ಕದಾಗಿದ್ದು ಸಣ್ಣ ಹುಳುವನ್ನು ಹೋಲುತ್ತವೆ. ಕಾಲ್ಯೆಕ್ ವಿಜ್ಞಾನಿಗಳು ನೆಲದಲ್ಲಿ ವಾಸಿಸುವ ಅನೇಕ ಬಗೆಯ ಹುಳುಗಳ ದೇಹದ ರಚನೆಯನ್ನು ವಿವರವಾಗಿ ಅಧ್ಯಯನ ಮಾಡಿ ಈ ಯಂತ್ರ ಹುಳುವನ್ನು ತಯಾರಿಸಿದ್ದಾರೆ. ಇದು ತನ ಮೈಯ್ಯನ್ನು ಸ್ಪಂಜಿನಂತೆ ಹಿಗ್ಗಿಸಬಲ್ಲ, ಕುಗ್ಗಿಸ ಬಲ್ಲುದ್ದಾಗಿದೆ. ಇದರಲ್ಲಿ ಒಂದು ಚಿಕ್ಕ ಕ್ಯಾಮರ, ರೋಗದ ಪ್ರಮಾಣ, ಯಾವ ಭಾಗದಲ್ಲಿ ರೋಗಾಣುಗಳಿವೆ, ಎಂಬ ವಿಷಯವನ್ನು ಪತ್ತೆ ಹಚ್ಚುತ್ತದೆ. ಇದನು ಗಂಟಲಿನ ಮೂಲಕ ಒಳಬಿಡಲಾಗುತ್ತದೆ. ನಂತರ ಈ ಹುಳು ಕರುಳಿನಲ್ಲಿ ಚಲಿಸುತ್ತಬೇಕಾದ ಜಾಗಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ. ಒಂದರೊಳಗೆ ಒಂದು ಇರುವ ಕೊಳವೆಯಂಥಹ ರಚನೆಯನ್ನು ಈ ಯಂತ್ರಿಕ ಹುಳುವು ಹೊಂದಿದೆ. ಹೊರ ಕೊಳವೆಯು ಪಾರದರ್‍ಶಕದಾಗಿರುತ್ತದೆ. ಇದನ್ನು ಬಲೂನಿನಂತೆ ಬೇಕಾದಾಗ ಹಿಗ್ಗಿಸಿದಾಗ ಅದು ಕರುಳಿನ ಒಳಭತ್ತಿಯನ್ನು ಒತ್ತಿಹಿಡಿದುಕೂಳ್ಳುತ್ತದೆ. ಒಳಕೊಳವೆಯಲ್ಲಿರುವ ಒಂದು ಭಾಗವು ಮುಂದಕ್ಕೆ ಚಲಿಸುವ ಸಾಮರ್‍ಥ್ಯ ಹೊಂದಿದೆ. ಹೀಗೆ ಒಳ ಮತ್ತು ಹೊರ ಕೊಳವೆಗಳ ಕಾರ್‍ಯದಿಂದ ಈ ಯಾಂತ್ರಿಕ ಹುಳುವು ನಮ್ಮ ಕರುಳಿನ ಒಳಗೆ ಸುಗಮವಾಗಿ ಚಲಿಸುತ್ತದೆ. ಹುಳುವನ್ನು ಬೇಕಾದಾಗ ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಮಾಡಬಹುದು. ಒಳಕೊಳವೆಯಲ್ಲಿ ಅತ್ಯಂತ ಸೂಕ್ಷ್ಮಗಾತ್ರದ “ವಿಡಿಯೋ” ಛಾಯಾಗ್ರಾಹಕ ಯಂತ್ರಗಳಿರುತ್ತವೆ. ಇದನ್ನು ದೂರ ಸಂವೇದಿ ತಂತ್ರಜ್ಞಾನದಿಂದ ನಿಯಂತ್ರಿಸಬಹುದು. ಈ ಯಾಂತ್ರಿಕ ಹುಳುವಿನೊಳಗೆ ಇರುವ ಒಂದು ಚಿಕ್ಕಗಾತ್ರದ ಟ್ರಾನ್ಸ್ ಮಿಟರ್, ಮಾಹಿತಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಕಳಿಸುತ್ತದೆ. ಕರುಳಿನ ಆಂತರೀಕ ಪರೀಕ್ಷೆಯನ್ನು ಮಾಡಬೇಕಾದಾಗ ಅಂತಹ ವ್ಯಕ್ತಿಗಳ ಗಂಟಲಿನ ಒಳಗೆ ಈ ಯಾಂತ್ರಿಕ ಹುಳುವನ್ನೂ ಬಿಡಲಾಗುವುದು. ಆ ನಂತರ ಯಂತ್ರೋಪಕರಣಗಳ ನೆರವಿನಿಂದ ಹುಳುವನ್ನು ಬೇಕಾದ ಕಡೆಗೆಲ್ಲ ಚಲಿಸುವಂತೆ ಮಾಡಿ ಬೇಕಿರುವ ಭಾಗದ ಛಾಯಾ ಚಿತ್ರಗಳನ್ನು ಪಡೆದುಕೊಳ್ಳಬಹುದು. ಇಂದು ಜಗತ್ತಿನಲ್ಲಿಯೇ ಮಾರಕವಾದ ಕ್ಯಾನ್ಸರೋಗವನ್ನು ಪತ್ತೆ ಹಚ್ಚುವಲ್ಲಿಯೂ ಸಹ ಇದು ಯಶಸ್ವಿಯಾಗಬಹುದು. ಕ್ಯಾನ್ಸರ್ ಗಡ್ಡೆಗಳ ಇರುವಿಕೆಯನ್ನು ಈ ಯಾಂತ್ರಿಕ ಹುಳುವಿನ ಸಹಾಯದಿಂದ ಗುರುತಿಸಬಹುದು. ಕೆಲವೊಮ್ಮೆ ದೇಹದ ಒಳಗೆ ಇರಬಹುದಾದ ಸಣ್ಣಪುಟ್ಟ ಅಡೆತಡೆಗಳ ನಿವಾರಣೆಗಾಗಿ ಈ ಯಾಂತ್ರಿಕ ಹುಳುವನ್ನು ಬಳಸಿಕೊಳ್ಳಬಹುದು.
ಹಲವಾರು ಉಪಯೋಗಗಳಿಗೆ ಉತ್ತರವಾಗಬಲ್ಲ ಈ ಹುಳುವನ್ನು ವ್ಯಾಪಕವಾಗಿ ಬಳಸುವ ಮೊದಲು ಮತ್ತಷ್ಟು ಸುಧಾರಣೆ ಮಾಡಬೇಕಾಗುತ್ತದೆ.
ಆದರೆ ಈ ಕ್ರಾಂತಿಕಾರಕ ಸಂಶೋಧನೆಯೂ ಕೂಡ ಹಲವಾರು ಸಮಸ್ಯೆಗಳಿಂದ ಮುಕ್ತವಾಗಿಲ್ಲ. ದೇಹದ ಒಳಗೆ ತನ್ನ ಕೆಲಸವನ್ನು ಮುಗಿಸಿದ ನಂತರ ಈ ಹುಳುವನ್ನು ಹೇಗೆ ವಿಸರ್‍ಜಿಸಬೇಕೆಂಬ ಬಗೆಗೆ ಅಂತಿಮ ತಿರ್‍ಮಾನವಾಗಿಲ್ಲ ಅದು ತನ್ನಷ್ಟಕ್ಕೆ ವಿಭಜನೆ ಹೊಂದಿ ಸಣ್ಣ ಹುಳು ತುಣುಕುಗಳಾಗಿ ಮಲವಿಸರ್‍ಜನೆಯೊಂದಿಗೆ ಹೊರ ಹೋಗುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಲಿವೆ. ಹುಳುವನ್ನು ಒಳ ಬಿಡುವಾಗಲೇ ಅದಕ್ಕೊಂದು ಸಪೂರವಾದ ತಂತಿಯನ್ನು ಕಟ್ಟಿ ಕೆಲಸ ಮುಗಿದ ನಂತರ ಅದನ್ನು ಮೆಲ್ಲನೆ ಹೊರಗೆ ಎಳೆದುಕೊಳ್ಳಲು ಸಾಧ್ಯವಿದೆ. ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
*****