ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ!
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ!
ನಮ್ಮ ತಪ್ಪನೆನಿತೊ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ;
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲನೆಮ್ಮೆವು-
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು. ೭
ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,
ತೆನೆಯ ಕೆನೆಯ ಗಾಳಿಯೊ,
ಖಗಮೃಗೋರಗಾಳಿಯೊ,
ನದಿನಗರನಗಾಳಿಯೊ!
ಇಲ್ಲಿಲ್ಲದುದುಳಿದುದೆ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ? ೧೪
ಬುಗರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ?
೧ಪಾಂಡವರಜ್ಞಾತಮಿದ್ದ,
ವಲಲಂ ಕೀಚಕನ ಗೆದ್ದ,
೨ಕುರುಕುಲ ಮುಂಗದನಮೆದ್ದ
ನಾಡು ನೋಡಿದಲ್ಲವೇ?
ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೇ? ೨೧
ಶಕವಿಜೇತನಮರ ೩ಶಾತವಾಹನಾಖ್ಯನೀ ಶಕಂ
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ!
ಚಳುಕ್ಯ ರಾಷ್ಟ್ರಕೂಟರೆಲ್ಲಿ,
ಗಂಗರಾ ಕದಂಬರೆಲ್ಲಿ,
ಹೊಯ್ಸಳ ಕಳಚುರ್ಯರೆಲ್ಲಿ,
ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು? ೨೮
ಜೈನರಾದ ಪೂಜ್ಯಪಾದ ಹೊಂಡಕುಂದ ವರ್ಯರ,
ಮದ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,
೪ಶರ್ವ ಪಂಪ ರನ್ನರ,
ಲಕ್ಷ್ಮೀಪತಿ ಜನ್ನರ,
ಷಡಕರಿ ಮುದಣ್ಣರ,
ಪುರಂದರ ವರೇಣ್ಯರ,
ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ! ೩೫
ಹಳೆಯ ಬೀಡ ೫ಬೇಲನಾಡ ಮಾಡಮೆನಿತೊ ಸುಂದರಂ!
೬ಬಿಳಿಯ ಕೊಳದ ಕಾರಕಳದ ೭ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪಮಿಲ್ಲ;
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನೆಮ್ಮ ತೃಷೆಗೆ ದಕ್ಕಿಸು-
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು! ೪೨
ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚುಪಡಿಯನಾಂತರೆನಿತೊ ತಕ್ಕುದಂ!
ಎನಿತೊ ಹಳೆಯ ಕಾಲದಿಂದ
ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ
ನಿನಗೆ ಮರವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದವುದೆ? ೪೯
ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯಿನೆಬ್ಬಿಸು-
ಹೊಸ ಸುಗಂದದೊಸಗೆಯಿಂದ ಜಗದಿ ಹೆಸರ ಹಬ್ಬಿಸು! ೫೬
ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರತೆಗೊಳವೆ ಕೊರತೆ? ಬತ್ತದು ನಿನ್ನೂಟೆಯು!
ಸೋಲ ಗೆಲ್ಲವಾರಿಗಿಲ್ಲ?
ಸೋತು ನೀನೆ ಗೆದ್ದೆಯಲ್ಲ?
ನಿನ್ನನಳಿವು ತಟ್ಟಲೊಲ್ಲ!-
ತಾಳಿಕೋಟೆ ಸಾಸಿರಂ
ಬಾಹುಬಲದಿ ಮುನೋಬಲದಿ ತಾಯೆ ಗೆಲುನೆ ಭಾಸುರಂ! ೬೩
ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ,
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ,
ನಮ್ಮೆದೆಯಂ ತಾಯೆ ಬಲಿಸು,
ಎಲ್ಲರ ಬಾಯಲ್ಲಿ ನೆಲಸು,
ನಮ್ಮ ಮನಮನೊಂದೆ ಕಲಸು!
ಇದನೊಂದನೆ ಕೋರುವೆ-
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ೭೦
*****
೧ ಧಾರವಾಡ ಜಿಲ್ಲೆಯ ‘ಹಾನಗಲ್ಲು’ ವಿರಾಟನ ರಾಜಧಾನಿ ಎಂದು ಪ್ರಖ್ಯಾತವಿದೆ.
೨ ಗೋಗ್ರಹಣದ ಯುದ್ಧ
೩ ಶಾಲಿವಾಹನ
೪ ಶರ್ವನೆಂದು ನೃಪತುಂಗನ ಹೆಸರು.
೫ ಬೇಲೂರು
೬ ಶ್ರವಣಬೆಳ್ಗೊಳ
೭ ನಿಡುನಿಂದಿರುವ ಗೊಮ್ಮಟ ಮೂರ್ತಿಗಳು