ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ
ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ
ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ
ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ
ಅಂಗ ಅಂಗದಲಿ ಆ ಅನಂಗನಾಡುವನು ಮಂಗನಾಟ
ಉಬ್ಬು ತಗ್ಗುಗಳ ಹೊಳಪು ಮಿಂಚುಗಳ ಎಂಥ ಮಾಯ ಮಾಟ
ಅಂಕು ಡೊಂಕುಗಳ ರಂಟೆ ಹೊಡೆವ ಕಾಮಣ್ಣ ರೈತನಂತೆ
ಹರೆಯ ಬಂದು ಹರಗುವುದು ನೆಲವ ಅರಳುವದು ಹೂವಿನಂತೆ
ಕುಂಟು ಕುರುಡು ಕಪ್ಪೆಂಬ ಕರಿಕೆ ಕಳೆದಿಡುವ ಕಾಲವಣ್ಣ
ಕತ್ತೆ ಕೂಡ ಸೆಳೆಯುವುದು ಕೆಳೆಯ ಮೈತುಂಬಿ ಮೋಡಿ ಬಣ್ಣ
ಕಾಯುತಿಹುದು ಹಗಲಿರುಳು ನೆಲವು ಕಾಮನೆಯ ಬೇಸಗೆಯಲಿ
ಕಾಯುತಿಹಳು ತಾ ಕೆಂಪು ಕರಿಯ ಹೊಲಪಟ್ಟೆ ಹಾಸುಗೆಯಲಿ
ರವ ಸಿಂಚಿಸುವ ಸೊಗದ ಮಿಂಚಿಸುವ ಧಾರೆಧಾರೆ ಸುರಿಸಿ
ಎನುತ ತೆರೆದು ಎದೆಬಟ್ಟಲನ್ನು ರಾತ್ರಿ ದೀಪವುರಿಸಿ
ಕತ್ತಲಿನ ಮೋಡ ಹಿತ್ತಲಲ್ಲಿ ಮಿಂಚಿನಲಿ ಕಣ್ಣು ಹೊಡೆದು
ಗಾಳಿಯಲಿ ಸುದ್ದಿ ಕಳಿಸುವನು ರಾಯ ಗುಡುಗಿಂದ ಕದವ ಬಡಿದು
ಗಂಡು: ಬಲಿತಂಥ ಬೀಜ ಹೊರ ಬರುವ ತವಕ ಜಿಗಿಯುತಿಹುದು
ಆ ನೆಲವು ಹಸನು ಈ ಮಣ್ಣು ಬಣ್ಣ ಮಣ್ಣಾಗೆ ಅವಸರಿಹುದು
ಈ ಹೂವು ಚೆಂದ ಆ ಹೂವು ಗಂಧ ಮುತ್ತಿಡಲು ಹಾರುತಿಹುದು
ಈ ಹಣ್ಣು ಸವಿಯು ಆ ಹಣ್ಣು ಜೇನು ರಸಗಡಲಲೀಜುತಿಹುದು
ಕಾಯಿಯಲಿ ಒಗರು ಬಾಯಿಯಲಿ ನೀರು ನನ್ನನ್ನು ಮುಟ್ಟಬೇಡ
ದೋರೆಯಲಿ ಹುಳಿಯು ಬಾಯಿಯಲಿ ನೀರು ಚಪ್ಪರಿಸಿ ನೋಡಬೇಡ
ಮಾಗಿ ಮಲೆತು ಗಮಗಮಿಸಿ ಕರೆಯೆ ಓಗೊಡದ ರಸಿಕನಾರು
ಹಣ್ಣು ಬಂದು ಕಣ್ಣಿನಲಿ ಕುಣಿಯೆ ಬಾಯ್ತೆರೆಯದವನು ಯಾರು
ಹುಚ್ಚು ಹಸಿವು ಇದು ಹಚ್ಚ ಹಸಿರು ಹುಚ್ಚಾಗಿ ಬಿಡುವುದಾಗ
ಬಯಕೆಯಲ್ಲೆ ಕಚ್ಚಾಡಿ ಮೆಚ್ಚಿ ಅದು ದಾರಿ ಬಿಡುವುದಾಗ
ಹಸಿರು ಹಸಿರು ಆಯೆಂದು ನೂರು ಕಡೆ ಹರಿಯುತಿಹುದು ಹರೆಯ
ದಾರಿ ತಪ್ಪಿ ಅಡವಿಯಲಿ ಅಲೆದು ತಾ ಮರೆಯುತಿಹುದು ಪರಿಯ
ಒಂದೆ ಹಣ್ಣು ಹಸಿವಿಂಗಿಸಲಿಕೆ ಸಾಕಾದರೇನು ಬಾಯಿ
ಬಣ್ಣ ಬಣ್ಣ ನೂರಾರ ಕಂಡು ಸುರಿಸಿಹುದು ಜೊಲ್ಲು ನಾಯಿ
ದುಂಬಿಯಾಗಿ ಹೂ ಹೂವ ತಿರುಗಿ ಮೂಸೇನು ಗಂಧಗಾಳಿ
ಚೆಂದ ನೋಡಿ ಮರುಳಾಗಿ ಮತ್ತಿನಲಿ ಮುತ್ತೇನು ಹೊರಳಿ ಹೊರಳಿ
ಹೂವಿನೊಡಲ ನಾ ಸೇರಿ ಜೇನ ಹೀರೇನು ಪ್ರೇಮದಿಂದ
ಕಾವಿನಲ್ಲಿ ಕಳೆಗೂಡಿ ಹೂವು ಹುಡಿ ಮೈಗೆ ಬಳಿಯುವಂದ
ಹಳದಿ ಕೆಂಪು ನೇರಳೆಯು ಕಿತ್ತಿಳೆಯು ನೀಲಿ ಚೆಂಗುಲಾಬಿ
ಬಣ್ಣದೋಕುಳಿಯು ಕಣ್ಣ ತುಂಬುತಿರೆ ತೋಟದಲ್ಲಿ ಹರವಿ
****
ನೀರ ಬಂದು ತಬ್ಬುವನು ನೀರೆಯನು ಸೃಷ್ಟಿಗಾಯ್ತು ನಾಂದಿ
ಕಾದ ಒಡಲು ತಾ ತಣ್ಣಗಾಗಿ ರಸ ಜೇನಿನೂಟ ಹೊಂದಿ
ಆಗೀಗ ಮಳೆಯ ಋತು ಸ್ಪರ್ಶದಿಂದ ಮಾಗಿತ್ತು ಮಾಂಸ ಮೈಯಿ
ಪ್ರಿಯತಮನು ಬರಲು ಒಂದೊಂದು ಬಾಗಿಲನು ತೆರೆದು ನಿಂತ ಮೈಯಿ
ಒಡಲಿನೊಡೆಯ ಬರುತಾನೆ ಬಂದು ಬೀಜವನು ಬಿತ್ತುತಾನೆ
ಹದಬೆದೆಯ ನೋಡಿ ಹೃದಯವನೆ ತೋಡಿ ಮುಖವನ್ನು ಮುತ್ತುತಾನೆ
ಹೆಣ್ಣು ಗಂಡು ಹಣ್ಣಾಗುತಾವೆ ತಿನುತಾವೆ ಯಾವೊ ಬಾಯಿ
ಮಣ್ಣಿನೊಡೆಯ ಕಣ್ಣಾಗುತಾನೆ ಕುಣದಾವೆ ಮನಸು ಮೈಯಿ
*****