ಪತ್ರಿಕೆಗಳು ಸುದ್ದಿ ಮಾಡಿದವು
ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು
ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ
ರಾತ್ರಿ ಕತ್ತಲೆಯಲಿ ನಡದೇ ಹೋಯ್ತು
ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ
ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ
ಮೆಟ್ರೋ ಮಹಿಳೆಯರ ಮೈಯಲ್ಲಿ ನಡುಕ.
ಜಾಗತಿಕ ಗ್ರಾಹಕರ ನೇರ ಸಮರ್‍ಪಕ
ಕಾಲ್ ಸೆಂಟರ್‌ಗಳ ಲೋಕ ಭಾವನಾತ್ಮಕ
ಹೈಟೆಕ್ ಸಂಸ್ಕೃತಿಗಳ ಹಿಂದೆ ಅಡಗಿರುವ
ನೂರಾರು ಗೈರತ್ತು-ಶಿಸ್ತಿನ ಕೊಕ್ಕುಗಳು
ದಾಟಲಾಗದು ಡೆಡ್‌ಲೈನ್‌ಗಳು
ಜೀವ ಹೋದರೂ ಸರಿಯೇ
ಹೊತ್ತಲ್ಲದ ಹೊತ್ತಿನಲ್ಲಿ ನಿರಂತರ ದುಡಿತ
ಮಾನಸಿಕ ಒತ್ತಡ, ರಕ್ಷಣೆ ಕೇಳಿದರೆ
ಕೆಲಸ ಹೋಗುವ ಭಯ
ದುಡಿಯಲೇಬೇಕಿದೆ ಹೊಟ್ಟೆಪಾಡಿದೆಯಲ್ಲ?
ಸಮಾನತೆಯ ಸೂತ್ರದಲ್ಲಿ ಬಂಧಿಸಿಯಾಗಿಸಿ
ಅವಳನು ಆಪತ್ತಿನ ಬಾಯಿಗೆ ದೂಡುವುದೇಕೆ?
ಜೀವನದಿಯಾಗಿ ತುಂಬಿ ಹರಿದವಳು
ಕರ್‍ಮ ಕಾಂಡಗಳ ಸಹಿಸಿ ಬತ್ತಬೇಕೇಕೆ?
ಸೂರ್‍ಯಶಿಕಾರಿಗೆ ಹೊರಟವಳ
ದಾರಿಗೆ, ಅಡ್ಡಗೋಡೆಗಳ ಒಡ್ಡುವುದೇಕೆ?
ಎಲ್ಲ ಸಾದಿಸಲು ಹೊರಟವಳಿಗೆ
ಇಲ್ಲವಾಗಿಸುವ ಹುನ್ನಾರವೇಕೆ?
ಅವಳ ಶ್ರಮ ಕಂಪನಿಗಳ ಲಾಭಕ್ಕಲ್ಲವೇ?
ಇರಲಿ ನಮ್ಮವನೇ ಚಾಲಕ ನಮ್ಮದೇ ಕಂಪನಿ
ವಿದೇಶಿಯರ ಲಾಭಕ್ಕೆ ಇನ್ನೆಷ್ಟು ಬಲಿಗಳು?
ಕತ್ತಲೆಯ ಗೋರಿಯಿಂದ ಎದ್ದು ಬಾರಮ್ಮ
ಅವರ ಪಾತಕದ ಒಂದೊಂದು ಬಿಲ್ಲೆಯ
ಲೆಕ್ಕವನೂ ಬಿಡದೇ ಕೇಳು ಬಾರಮ್ಮ
ಇಲ್ಲವಾದರೆ ಹೆಣ್ಣಗಳು ಹೇಗೆ ದುಡಿದಾರು?
ಭೂಮಿ ಮೇಲೆ ತಮ್ಮ ತುತ್ತನ್ನು
ತಾವು ಹೇಗೆ ಗಳಿಸಿಯಾರು?
*****