ಪಟೇಲ್ ಪುಟ್ಟಸಿದ್ದಪ್ಪ ನಾಯಕನ ಮನೆಯಲ್ಲಿ ಅಂದು ಅಮಲ್ದಾರ್ರಿಗೆ ಔತಣ. ತಾಲ್ಲೋಕಿನ ದಣಿಯೆಂದು ಅಮಲ್ದಾರ್ರಿಗೆ ಗೌರವವಾದರೆ, ಆಗರ್ಭ ಶ್ರೀಮಂತನೆಂದು ಪಟೇಲನಿಗೆ ಗೌರವ. ಸಾಲದೆ ದಿವಾನ್ ಪೂರ್ಣಯ್ಯನವರನ್ನೂ ತಮ್ಮ ಮನೆಗೆ ಕರೆದುಕೊಂಡು ಬಂದು ಫಲತಾಂಬೂಲ ಒಪ್ಪಿಸಿದ ಮನೆತನ ಎಂದು ಪಟೇಲನಿಗೆ ಸ್ವಾಭಿಮಾನ, ಜೊತೆಗೆ ತುಂಬಿದ ಮನೆ. ಬೇಕು ಅಂದರೆ ಆ ಮನೆಯಲ್ಲಿ ಒಂದು ತಾಲೋಕು ಕಚೇರೀನ ಇಡಬಹುದು ಅಷ್ಟು ದೊಡ್ಡ ಮನೆ. ಅದಕೆ ತಕ್ಕ ಐಶ್ವರ್ಯ. ಅವನು ಸೈ ಅಂದರೆ ಒಬ್ಬಿಬ್ಬರು ಅಮಲ್ದಾರರನ್ನಲ್ಲ ಸಬ್ಡಿವಿಜನ್ ಆಫೀಸರ್ಗಳನ್ನು ಸಂಬಳಕ್ಕಿಟ್ಟುಕೊಳ್ಳಬಹುದು. ಎನ್ನುವಷ್ಟು ಭಾರಿಯ ಕುಳ – ಅಷ್ಟೇನು ಅಲ್ಲಿಗೆ ಯಾರು ಬಂದರೇನು? ಐದು ಸಾವಿರ ಚಲ್ಲರೆ ತನ್ನ ಸ್ವಂತ ಕಂದಾಯ ಕಟ್ಟುವ ಧಣಿಯನ್ನು ಗೌರವಿಸದೆ ಇರುವುದೆಂತು? ಆ ಸುತ್ತುಮುತ್ತಿನಲ್ಲಿ ಯಾರೂ ಅವನ ಎದುರು ನಿಂತು ಮಾತನಾಡು ತ್ತಿರಲಿಲ್ಲ. ಮಾತನಾಡಲೇಬೇಕಾಗಿ ಬಂದಿ “ಬುದ್ಧಿ” ಎಂದು ಕೈಮುಗಿದು ಮಾತು.
ಅಮಲ್ದಾರ್ರು ಸ್ವಜಾತಿಯೆಂದು ನಾಯಕನಿಗೆ ಅಭಿಮಾನ ಇಮ್ಮಡಿಯಾಗಿತ್ತು. ಆಗ ಮೇಲಿನ ಅಧಿಕಾರಗಳೆಲ್ಲ ಹಾರುವರಿಗೆ ತಪ್ಪಿದರೆ ಮುಸಲ್ಮಾನರಿಗೆ ಮೀಸಲಾಗಿದ್ದ ಕಾಲ. ಅದರಿಂದ ಪೂರ್ವ ಸಂಧ್ಯೆಯ ನಕ್ಷತ್ರಗಳಂತೆ ಅಲ್ಲೊಬ್ಬರು ಇಲ್ಲೊಬ್ಬರು ಇತರರು ಬಂದರೆ ಅವರವರ ಜಾತಿಯವರು ಸಹಜವಾಗಿ ಅಭಿಮಾನ ಪಡುವರು. ಅವೊತ್ತಿನ ಔತಣಕ್ಕೆ ಊರೂ ಕಾಡೂ ಎರಡೂ ಕಾಣಕೆ ಕೊಟ್ಬಿದ್ದುವು. ಕುರಿ ಕೋಳಿ ಜೊತ ಜಿಂಕೆ ನವಿಲೂ ಬಂದಿದ್ದವು. ಅಲ್ಲದೆ ವಿಲಾಯಿತಿ ಯಿಂದ ಬಂದ ಬಾಟಲಿ ದೇವತೆಯೂ ಗುಟ್ಟಾಗಿ ಕಾದಿದ್ದಳು.
ಹೆಸರಿಗೆ ಅಮಲ್ದಾರ್ರ ಔತಣ. ನಿಜವಾಗಿ ಊರಿಗೆಲ್ಲಾ ಔತಣ. ಬಡವರು ಬಗ್ಗರು.ಇರಲಿ, ಹಾರುವರಿಂದ ಹೊಲೆಯರವರೆಗೆ ಎಲ್ಲರಿಗೂ ಔತಣ. ಮಜಬೂತಾದ ಊಟ. ಸುಮಾರು ಸಾವಿರ ಜನದ ಮೇಲೆ ಆ ದಿನ ಊಟವಾಗಿದೆ.
ನಾಯಕನು ಊಟವಾದ ಮೇಲೆ ಅಮಲ್ದಾರ್ರನ್ನು ದಿವಾನ್ಖಾನೆಗೆ ಕರೆತಂದನು. ಹೊಸದಾಗಿ ಬಂದಿದ್ದ ‘ಗುಳೋಪು’ ದೀಪ ಪ್ರಕಾಶಮಾನ ವಾಗಿ ಉರಿಯುತ್ತಿದೆ. ದಂತದ ಕೆಲಸ ಮಾಡಿರುವ ಬಾಗಿಲನ್ನು ದಾಟಿ ಒಳಗೆ ಬಂದರೆ ಅಂಗೈಯ ದಪ್ಪದ ಹಸರು ರತ್ನ ಕಂಬಳಿ. ಕಾಲಿಟ್ಟರೆ ಮಾಸೀತು ಎನ್ನುವಂತಹ ಸೊಗಸಾದ ಕೆಲಸದ್ದು. ಅಮಲ್ದಾ ರರು ತಮ್ಮ ಜನ್ಮದಲ್ಲಿ ಅಂತಹ ರತ್ನಗಂಬಳಿ ನೋಡಿರಲಿಲ್ಲ.
ಬಾಗಿಲ ಎದುರಿಗೆ ಎರಡು ಚೌಕಿಗಳ ಮೇಲೆ ಕೆಂಕಾಪಿನ ಕುತ್ತನಿ ಮೆತ್ತೆ; ಅದಕ್ಕೆ ತಕ್ಕಂತೆ ಒರಗುದಿಂಬು. ಗಾಳಿಯ ಪೊರೆ ಎನ್ನುನಂತಹ ಬಿಳಿಯ ಮಲ್ಲಿನ ಮುಸುಕು ಹಾಕಿದೆ. ಗರಿ ಮುರಿಯದೆ ಮಡಿ ಆ ಮಲ್ಲು ದೊಡ್ಡ ವರ ಬಳಿ ಹೆದರುತ್ತ ಕುಳಿತುಕೊಳ್ಳುವ ಬಡವರ ಹಾಗೆ, ಹೆದರಿಕೊಂಡು ಗೌರವವನ್ನೆಲ್ಲ ಒರಗು ದಿಂಬು ಮೆತ್ತೆ ಗಳಿಗೆ ಬಿಟ್ಟು ಇನು ಹಗುರವಾಗಿ ಎರದು ಕೊನೆಯಲ್ಲಿ ಕುಳಿತು ಕೊಳ್ಳುವ ಇಬ್ಬನಿಯ ಹನಿಯ ಹಾಗೆ ಕುಳಿತಿದೆ. ಆ ಎರಡು ಸುಖಾ ಸನಗಳ ನಡುವೆ ಓಂದು ಗೇಣೆತ್ತರದ ದಂತದ ಕಾಲುಮಣೆಯ ಮೇಲೆ ಒಂದು ಚಿನ್ನದ ತಟ್ಟೆ, ಅದೂ ಬಡವರ ಮನೆಯ ತಳಿಗೆಯನ್ನು ಅಗಲ ವಿದೆ. ಅದರಲ್ಲಿ ಬೆಳ್ಳಿಯ ತಗಡುಗಳು ಎನ್ನುವಂತಿರುವ ಚಿಗುರೆಲೆ. ಅದರ ನಡುವೆ ಅಂದವಾಗಿ ಓರಣವಾಗಿ ಒಪ್ಪವಾಗಿ ಇಟ್ಟಿರುವ ಕುಂದಣದ ಸಣ್ಣ ತಟ್ಟೆಯಲ್ಲಿ ಚಿನ್ನದ ರೇಕು ಒತ್ತಿರುವ ಉಜ್ಜಡಿಕೆ. ಅದರ ಮೇಲೆ ಮತ್ತೊಂದು ಕುಂದಣದ ಕುಪ್ಪಿ! ಅದರಲ್ಲಿ ಕಾಚಿನಿಂದ ಹಿಡಿದು ಕಸ್ತೂರಿಯವರೆಗೆ ಎಲ್ಲಾ ಸರಂಜಾಮೂ ಹಾಕಿ ಪನ್ನೀರಿನಲ್ಲಿ ಕಲಸಿರುವ ಕೆನೆ ಸುಣ್ಣ. ಆ ಎರಡು ಆಸನಗಳಿಗೂ ಅಷ್ಟು ದೂರದಲ್ಲಿ ಒಂದು ಬೆಳ್ಳಿಯ ಕಂಬದ ಮೇಲೆ ಒಂದು ಚಿನ್ನದ ಆನೆ. ಅದಕ್ಕೆ ಅಂದವಾದ ರತ್ನ ಖಚಿತವಾದ ಗೌಸು ಆನೆ ಸೊಂಡಿಲು ಎತ್ತಿಕೊಂಡಿದೆ. ಸೊಂಡಿಲಿನಲ್ಲಿ ಒಂದು ಧೂಪದಾನಿಯನ್ನು ಹಿಡಿದಿದೆ. ಅದಕ್ಕೆ ನಾಲ್ಕೇ ನಾಲ್ಕು ಊದು ಬತ್ತಿಗಳನ್ನು ಸೆಕ್ಕಿದೆ. ಯಾವ ಕಡ್ಡಿಯೂ ದಪ್ಪ ಹಂಚಿಕಡ್ಡಿಗಿಂತ ದಪ್ಪಗಿಲ್ಲ. ಅದರಿಂದ ಬರುತ್ತಿರುವ ಹೊಗೆಯೂ ಅಷ್ಟು ದಪ್ಪವಾಗಿಲ್ಲ. ಆದರೂ ಪರಿಮಳ ಮಾತ್ರ ಮೂಗಿಗೆ ಇರಲಿ, ಕೈ ಹಾಗೆಂದರೆ ಸಿಕ್ಕುವುದೇನೋ ಅನ್ನುವಷ್ಟು ಮಂದವಾಗಿ ಹರಡಿದೆ.
ಆ ದಿವಾನ್ಖಾನೆಯಲ್ಲಿ ಆ ಆಸನದಲ್ಲಿ ಹೋಗಿ ಕುಳಿತುಕೊಂಡಾಗ ಅಮಲ್ದಾರನಿಗೆ ತಾನು ಸ್ವರ್ಗದಲ್ಲಿ ಇದ್ದೇನೋ ಅನ್ನಿಸಿತು. ಇಷ್ಟು ವೈಭವಸಂಪನ್ನನಾದ ಈ ಶ್ರೀಮಂತನನ್ನು ಏನೆಂದು ಮಾತನಾಡಿಸಬೇಕು ಎಂದು ತೋರದೆ “ಏನು ಸ್ವಾಮಿ ತಾವೇನು ಪಟೇಲರೋ, ಹಿಂದಿನ ಪಾಳೆಯಗಾರರೋ? ತಮ್ಮನ್ನು ಎಲ್ಲರೂ ಬುದ್ಧಿ ಬುದ್ಧಿ ಅನ್ನೋದು ತಪ್ಪೇನೂ ಅಲ್ಲ? ” ಎಂದು ಆರಂಭಿಸಿದನು.
ನಾಯಕನು ತುಂಬಿ ವಿಶಾಲವಾಗಿರುವ ನೀರಿನ ಹರಹುಳ್ಳ ಭಾರಿಯ ಕೆರೆಯು ಶಾಂತವಾಗಿರುವಾಗ ನಗುನ ಹಾಗೆ ನಕ್ಕು “ತಾವು ಅಂದದ್ದು ನಿಜ. ನವಾಬರ ಹಿಂದಿನ ಕಾಲದಲ್ಲಿ ನಾವು ಪಾಳೆಯಗಾರರು. ಈಗ ಏನೋ ಕಸ್ತೂರೀ ಕಟ್ಟಿದ ಬಟ್ಟೆ. ಹಿಂದೆ ವಿಜಯನಗರದವರು ಹಾಕಿಕೊಟ್ಟ ಶಾಸನಗಳೂ ಅವೆ ಅತ್ತಾಗಿ ಕೊಳ್ಳೇಗಾಲದಿಂದ ಹಿಡಿದು ಪಡುವಲಾಗಿ ಆನೇಕಾಡು ಬಳಸಿಕೊಂಡು, ನಂಜನಗೂಡು, ಚಾಮುಂ ಡೇಶ್ವರಿಬೆಟ್ಟ, ಸಂಗಮ, ಸೋಸಲೆ, ತಲಕಾಡು, ಮುಡುಕತೊರೆಬೆಟ್ಟ, ಶಿವನಸಮುದ್ರ, ಎಲ್ಲಾ ಬಳಸಿದ ಈ ದೇಶವೆಲ್ಲಾ ನನ್ನದಂತೆ! ನಮ್ಮ ಮನೆಗೆ ಆನೇಕಾಡಿನ ಪಾಳೆಯಗಾರರ ಮನೆ ಅಂತ ಹೆಸರಂತೆ. ಅದೆಲ್ಲ ಹೋಗಿ ಈಗ ಹಿಂಗದೆ. ಕಾವೇರಮ್ಮ ಇಲ್ಲವಾ? ಹಂಗೆ. ಆಗ ಆಷಾಢಮಾಸದ ತುಂಬುಹೊಳೆ; ಈಗ ಮಾಗಮಾಸ. ಅಷ್ಟೇ!”
“ಆನೇಕಾಡಿನ ಪಾಳೆಯಗಾರರು ಅಂತಲೇ ನಿಮ್ಮ ಮನೆತನ?”
” ಹೌದು, ಪಾದ! ಅಕೋ! ಅದೋ! ಆ ಆನೆಯೇ ನಮ್ಮ ಗುರುತು. ಪಾದ!”
“ನೀವು ಪಾದಗೀದ ಅನ್ನಬೇಡೀಪ್ಪ. ಅದಿರಲಿ, ಪ್ರಿನ್ ಆಫ್ ವೇಲ್ಸ್ ಬರೋದು ಗೊತ್ತೇನು ನಿಮಗೆ? ?
“ಅದೇನೋ ಎಲ್ಲರೂ ಅಂತಿದ್ದಾರೆ.”
“ನಿಜ… ಏಪ್ರಿಲ್ವೇಳೆಗೆ ಬರುತ್ತಾರೆ. ನನ್ನ ಅಲ್ಲಿಗೆ ಡೆಪ್ಯೂಟ್ ಮಾಡಿದ್ದಾರೆ. ಸಾಹೇಬರಿಗೆ ಹೇಳ್ತೀನಿ. ತಾವೂ ಬರುತ್ತೀರ? ಪ್ರಿನ್ಸ್ ಆಫ್ ವೇಲ್ಸ್ರಿಗೆ ತಮ್ಮನ್ನು ಭೇಟೀ ಮಾಡಿಸೋ ಹಂಗೆ ಹೇಳ್ತೀನಿ. ಮಹಾರಾಜರೂ ಬರುತ್ತಾ್ರೆ?”
“ಚಕ್ರವರ್ತಿಗಳ ಮಕ್ಕಳು: ಚಕ್ರವರ್ತಿಗಳಾಗೋರು! ಅವರೆಲ್ಲಿ ನಾವೆಲ್ಲಿ ಪಾದ?”
“ಅವರು ದೊಡ್ಡವರು ನಿಜ. ಹಾಗೆಂದು ಇಲ್ಲಿಯ ದೊಡ್ಡ ಮನುಷ್ಯರನ್ನು ನೋಡಬೇಡವೆ ? ಅಷ್ಟೇನು? ತಮ್ಮ ಈ ರತ್ನದುಂಗುರ ಗಳೂ ಕಪ್ಪ ಹಾಕಿಕೊಂಡಿರುವ ಕೈಹಿಡಿದು ಕುಲುಕೋಕೆ ಅವರಿಗೆ ಅದೃಷ್ಟವಿರ ಬೇಡವೆ ? ”
“ಉಂಟೇ ಬುದ್ದಿ! ಎಷ್ಟಾಗಲಿ ಅವರು ದೇವರ ಹಂಗೆ. ನಮ್ಮ ಮಹಾರಾಜರು ಅಂದರೆ ಸಾಕ್ಷಾತ್ ದೇವರೇ! ಅವರಂಥವ ರಿಂದಲೂ ಕೈಮುಗಿಸಿಕೊಂಡು ಅವರಮೇಲೂ ತಮ್ಮ ಅಧಿಕಾರನಡೆ ಸೋರು ಎಂದರೆ ಸಾಮಾನ್ಯವೆ? ಏನೋ ನೋಡಿ”,
“ಇನ್ನೇನೂ ಇಲ್ಲ ಬುದ್ದೀ ! ನಾನೂ ನಿಮ್ಮನ್ನು ಬುದ್ದಿ ಅಂತಲೇ ಅಂದುಬಿಡುತೀನಿ ಹೋಗಿ. ನೀವು ಈ ದಿನ ನಮಗೆ ಮಾಡಿದ ಈ ಮರ್ಯಾದೆಗೆ ನಾನು ಏನೂ ಮಾಡಬೇಡವೆ ? ತಾವೇ ಹೇಳಿ, ಈ ಖೆಡ್ಡಾ ಅರೇಂಜ್ಮೆಂಟಗೆ ನನ್ನ ಸ್ಪೆಷಲ್ ಡ್ಯೂಟಿಗೆ ಹಾಕಿದ್ದಾರೆ. ತಾವು ಕ್ಯಾಂಪಿಗೆ ಬಂದು ನನ್ನ ಜೊತೆಯಲ್ಲಿ ಇದ್ದುಬಿಡಿ. ಸಮಯನೋಡಿ ನಾನೂ ಕೆಲಸ ಸಾಧಿಸಿ ಬಿಡುತ್ತೇನೆ.
“ಏನೋ ತಾವು ಎಷ್ಟೇ ಆಗಲಿ ಪ್ರಭುಗಳು. ತಮ್ಮ ಇಷ್ಟ ಹಾಗೆ ಇದ್ದರೆ ನಡೆದುಹೋಗಲಿ. ಆಯಿತು. ಈಗ ತಮಗೆ ತಾಂಬೂಲ ಆಗುತ್ತಲೂ ಮತ್ತೆ ಸಂಗೀತದ ಏರ್ಪಾಟು ಮಾಡೋ ಣವೋ ಹೇಗೆ?”
“ಅಲ್ಲರೀ! ಅವೊತ್ತು ಅದ್ಯಾರೋ ನಮ್ಮೂರಲ್ಲಿ ತಂದಾನಾಪದ ದೋನು ಇದಾನೆ. ತತ್ವ ಬಹಳ ಚೆನ್ನಾಗಿ ಹೇಳುತಾನೆ ಅಂದರಲ್ಲ!”
“ಹೌದು ಮರೆತೇಬಿಟ್ಟಿದ್ದೆ. ಯಾರೋ ಅಲ್ಲಿ! ಮಲ್ಲಣ್ಣನ ಕರೆಯೋ!”
ಮಲ್ಲಣ್ಣ ಬಂದು ಕೈಮುಗಿದ.
” ಏನಯ್ಯಾ ! ದಣಿಗಳಿಗೆ ನಿನ್ನ ತತ್ವ ಕೇಳಬೇಕು ಅನ್ನಿಸದೆ. ನಿನ್ನ ಪುಣ್ಯ ಅಲ್ಲವಾ?”
” ಹೌದು ಬುದ್ಧಿ. ಅಪ್ಪಣೆ ಆದರೆ…? ”
“ಏನು ಹೇಳು.”
“ನಮ್ಮ ಮೊಗ ಮಲ್ಲಿ ಬಾಯಲ್ಲಿ ಬೋ ಚೆನ್ನಾಗಿ ನುಡೀತದೆ ”
” ಅಲ್ಲ ತಣೋ, ಮಲ್ಲಣ್ಣ, ನಿನ್ನ ಹಾಡು ನಾವು ಕೇಳಿದೀವಿ. ಪರವಾಯಿಲ್ಲ… ಆ ಮೊಗದ ಕೈಲಿ ತತ್ತ್ವ ಹೇಳಿಸೋದಾ? ಅದೂ ಇವೊತ್ತು ಮೂಗೋರೋಳ ಸಂಗೀತ ಆಗಿರುವಾಗ ಅದಕ್ಕೆ ಅರ್ಥಗಿರ್ಥ ಇಲ್ಲದಿದ್ದರೆ ಆದೀತಾ? ”
” ಬುದ್ಧಿಯೋರ ಪಾದದಾಣೆ ! ಅದೆಲ್ಲ ಗಿಣಿಮಾತಿನಂಗೆ ಪಾದ! ಗಿಣಿ ಅವರಿವರ ಮಾತುಕೇಳಿ ತಾನೇ ಕಲೀತದೆ! ಹಾಗಂತ ತಮ್ಮಂಥಾ ದಣಿಗಳು ಅದನ್ನು ಕೇಳದೆ ಬಿಟ್ಟಾರಾ ?”
” ನೋಡಿದಿರಾ ಬುದ್ಧಿ ! ನಮ್ಮ ಮಲ್ಲಣ್ಣ ಹಿಂಗೆ ಮಾತಿಗೆ ಮಾತು ಪೋಣಿಸೋದರಲ್ಲಿ ಬೋ ಜಾಣ! ಏನೋ ಮಲ್ಲಣ್ಣ ! ಈ ಜಾಣತನ ಎಲ್ಲಿ ಕಲಿತೆ? ”
“ಏನು ಹೇಳಲಿ ನಿಮ್ಮ ಪಾದಾ! ಆ ತತ್ವ ಹೇಳಿ ಹೇಳಿ ನನ್ನ ಬಾಯೂ ಎಣ್ಣೇ ಅಳೆದ ಮಾನ ಆಗದೆ ಅಷ್ಟೇ ! ಬರೀ ಜಿಡ್ಡೇ ಬುದ್ಧಿ ! ಎಣ್ಣೆ ಇಲ್ಲ. ”
“ಆಗಲಿ, ಕರತತ್ತಾ! ಎರಡು ತತ್ವ ಹೇಳಲಿ. ಆಮೇಲೆ ನೀನು ಹೇಳೋವಂತೆ! ”
“ಆಗಬೋದು ನಿಮ್ಮ ಪಾದಾ!?
“ಆಮೇಲೆ ತಮ್ಮಲ್ಲಿ ಇನ್ನೊಂದು ವಿಚಾರ ಹೇಳಬೇಕಲ್ಲಾ! ಪಟೇಲರೆ ?”
“ಅಪ್ಪಣೆಯಾಗಬೇಕು. ಬುದ್ಧಿ !”
“ನಮಗೆ ಬುದ್ದಿ ಇಲ್ಲಾಪ್ಪಾ! ನಿಜ. ಇನ್ನಾದರೂ ಬುದ್ದಿ ಅನ್ನಬೇಡಿ. ತಾವು ಪಗಡೆ ಬಹಳ ಚೆನ್ನಾಗಿ ಆಡುತ್ತೀರಂತೆ.?
“ಅಂಯ್ ! -ನಾನು ಅಷ್ಟು ಚೆನ್ನಾಗಿ ಆಡೋದೆಲ್ಲಿ ಬಂತು? ಏನೋ ಆಡುತೀನಿ ಹೊತ್ತು ಹೋಗೋಲ್ಲ ಅಂತ! ಈಗ ಪಗಡೇ ಗಂಜೀಫ್ ಎಲ್ಲಾ ಹೋಯಿತು ಬುದ್ದಿ! ಸತ್ತ ಕಾಗದದ ಆಟ ಹೆಚ್ಚಾಗು ತ್ತಾಅದೆ. ಅದರಲ್ಲೂ ಅದು ಯಾವ ಗುಲಾಮ ತಂದನೋ ಆ ಗುಲಾ ಮನ ಆಟ! ಅದೇ ಎಲ್ಲೆಲ್ಲೂ ಆಗುತಾ ನಮ್ಮೋರೆಲ್ಲಾ ಗುಲಾಮರೇ ಆಗುತಾ ಅವರೆ ಬುದ್ದಿ!”
“ಅದು ಹೋಗಲಿ. ನನಗೆ ಪಗಡೇಲಿ ಬಹು ಷೋಕಿ. ನಿಮಗೆ ಗೊತ್ತೋ ? ”
“ಬೇಕಾದರೆ ಯಾರನಾದರೂ ಕರಸೋದು.”
” ನೀವೇ ಆಡಬೇಕೂಂದರೆ? ”
“ನಾವು ಆಡಬೋದು. ಆದಕ್ಕೆ ತಾವು ದಣಿಗಳು ಹೆಂಗೆ ಹೇಳೋದು?”
“ನಾವೇ ಬಲವಂತಮಾಡಿದರೆ? ”
“ಬರಿಕೈಯಲ್ಲಿ ಆಡೋದೆ ಬುದ್ದಿ!”
” ಹಾಗಂತ ನಾವು ಬಳೆ ತೊಟ್ಟುಕೊಳ್ಳೋಣವೆ? ?
“ಹಹಹಾ! ಹಂಗಲ್ಲ. ಏನೂ ಇಲ್ಲದೆ ಆಡಬಾರದು ಬುದ್ಧಿ! ಬರಿಕೈ ನೆಕ್ಕೊಳ್ಳೋರೂ ಉಂಟಾ???
“ಆದೂ ಆಗಲಿ. ನಾವು ಪಗಡೆ ಹಾಕೋಣ. ಮಲ್ಲಣ್ಣನ ತತ್ವ ನಡೀಲಿ. ಆಗಬಹುದಲ್ಲಾ !?
“ಎರಡೇ ಆಟ ಬುದ್ಧಿ !”
“ಎರಡು ಅಂತ ಆರಂಭವಾಗಲಿ.”
“ಹಂಗಲ್ಲ. ನಾಳೆ ಅಷ್ಟುಹೊತ್ತಿಗೇ ಕುದುರೆಮೇಲೆ ಹೋ ಗೋದು ಅದೆ! ಅಲ್ಲದೇ….”
“ಹಂಗೂ ಆಗಲಿ.”
ಮಲ್ಲಣ್ಣ ಮಗಳ ಜೊತೇಲಿ ಏಕನಾದ ತಂದ… ಪಗಡೆಯ
ಕಾಯಿ ಚಾರಿಯೂ ಬಂತು. ಕೆಂಪು ಕಪ್ಪು ಹಸುರು ಕಲ್ಲುಗಳ ಕಾಯಿಗಳು ಚಿನ್ನದ ದಾಳ; ಮೊಕಮಲ್ಲಿನಮೇಲೆ ಕಲಾಪತ್ತಿನ ಕೆಲಸ ಮಾಡಿರುವ ಚಾರಿ.
ತತ್ವಗಳು ಆರಂಭವಾಯಿತು. ಗುರುವಿನ ಸ್ತೋತ್ರವಾಯಿತು. ಶಾರದಾ ಗಣಪತಿಯರು ಬಂದು ಹೋದರು. ಅಮಲ್ದಾರ್ರು ಕೈ ಯಲ್ಲಿ ದಾಳ ಹಿಡಿದವರು ಹಾಗೇ ಕುಳಿತುಬಿಟ್ಟರು. ಐದು ವರ್ಷದ ಮಲ್ಲಿ ಬಹಳ ಭಾರಿಯ ಶಿವಭಕ್ತಳಂತೆ ಮೂರೆಳೆ ವಿಭೂತಿ ಹಣೆಗೆ ಹಚ್ಚಿ ಏಕನಾದ ಕೈಲಿಹಿಡಿದುಕೊಂಡು ತತ್ವ ಹೇಳುತ್ತಿದ್ದಾಳೆ, ಯಾರೋ ಹಿರಿಯ ಅನುಭವಿಗಳ ಬಾಯಲ್ಲಿ ಬಂದಹಾಗೆ ಬರುತ್ತಿದೆ. ಎಲ್ಲರೂ ಬಾಯಲ್ಲಿ ನೊಣಹೋಗುವುದೂ ತಿಳಿಯದೆ ಕೇಳುತ್ತಾ ಇದ್ದಾರೆ.
ನಾಯಕನಿಗೆ ಆ ಹುಡುಗಿಯ ದುಂಡುದುಂಡಾಗಿ ನೀಳವಾಗಿರುವ ಕೈಗಳು, ನೀಳವಾದರೂ ಮಾಂಸಲವಾದ ಕೆನ್ನೆಗಳು ಮುದ್ದಾದ ಬಾಯಿ, ಆ ಮೂಗು, ಮುಚ್ಚಿದ್ದರೂ ಮೆಚ್ಚಿಕೆಯಾಗುವ ಆ ಕಣ್ಣು, ಎಲ್ಲದಕ್ಕಿಂತ ಅವಳು ಹಚ್ಚಿರುವ ವಿಭೂತಿಯಂತೇ ಬೆಳ್ಳಗಿರುವ ಆ ಬಣ್ಣ ಎಲ್ಲ ಮನಸ್ಸಿಗೆ ಹಿಡಿದಿದೆ. ಮನಸ್ಸು ವರ್ಷಾಂತರಗಳು ಮುಂಡೋಡಿ, “ಈ ಬೊಡ್ಡೀದು ಈಗಲೇ ಹಿಂಗದೆ! ಇನ್ನು ಇವಳಿಗೆ ವಯಸ್ಸು ಬಂದರೆ, ಗಂಡು ಅಂದವ ನೋಡಿ ಬದುಕಬೋದಾ !” ಎಂದು ಯೋಚನೆ ಮಾಡುತ್ತಿದೆ.
ಅಮಲ್ದಾರನಿಗೆ, “ಎಲಾ! ಐದು ವರ್ಷದ ಕಂದಮ್ಮ! ಇವಳ ಬಾಯಲ್ಲಿ ಹೀಗೆ ನುಡೀತದಲ್ಲ! ಹಿಂಗೂ ಉಂಟೆ? ನ್ಯಾಯವಾಗಿ ಈ ವಯಸ್ಸಿನಲ್ಲಿ ಇನ್ನೂ ತೊಸ್ಸ ಪಸ್ಸ ಅಂತ ಮುದ್ದು ಮಾತು ಆಡಿ ಕೊಂಡಿರಬೇಕು” ಎಂದು ಮನಸ್ಸು ಆಶ್ಚರ್ಯಮಗ್ನವಾಗಿ ಹೋಗಿದೆ.
ಮಲ್ಲಣ್ಣನಿಗೆ ಬಹು ಆನಂದವಾಗಿದೆ. ಆದರೆ ಒಂದೇ ಯೋಚನೆ : ಹೆಂಡಿತಿ ಬಂದವಳು ಎಲ್ಲಿ ಕೂತಿದ್ದಾಳೋ ! ಕೇಳುತ್ತಿದ್ದಾಳೋ ಇಲ್ಲವೋ ಅಂತ. ಜೊತೆಗೆ ತನ್ನ ಮಾತು ಗೆದ್ದಿತಲ್ಲಾ ಎಂದು ಅದು ಬೇರೆ ಸಂತೋಷ; ಕಟ್ಟಿದ್ದ ಸಣ ಗೆದ್ದವರ ಮೊಕದ ಮೇಲಿರುವ ಕಳೆ ಇದೆ.
ಹೀಗೆಯೇ ಒಂದು ಗಂಟೆ ಆಯಿತು: ಅಮಲ್ದಾರ್ರು ” ಸ್ವಾಮಿ! ಸಾಕು ಅನ್ನಿ! ಎಷ್ಟೇ ಆಗಲಿ ಮಗು!” ಅಂದು ತಡೆದರು. ಪಟೇಲ ಸನ್ನೇಮಾಡಿ ಒಳಕ್ಕೆ ಕಳುಹಿಸಿ, “ಏನು ಮಲ್ಲಣ್ಣ ಇವಳ ಹೆಸರೇನೋ? ಇಷ್ಟು ದಿವಸ ಅಗದೆ: ನಮ್ಮ ಅರಿಕೇಗೆ ಬಂದೇ ಇಲ್ಲ!” ಎಂದನು.
“ನಮ್ಮ ಮಲ್ಲಿ ಹೆಸರು, ಬುದ್ಧಿ, ಮಲ್ಲಿಕಾಂಬೆ. ದಣಿಗಳ ಕಣ್ಣಿಗೆ ಬಿದ್ದಿಲ್ಲ ಅಷ್ಟೇ! ಅರಮನೇಲಿ ಜನಾನಾನಾಕ್ಕೆಲ್ಲ ಗೊತ್ತು! ಅವಳು ತೊಟ್ಟಿರೋ ಕಲಾಪತ್ತಿನ ಲಂಗ ಕಲಾಪತ್ತಿನ ರವಿಕೆ ಎಲ್ಲಾ ಅರ ಮನೇಲೇ ಅಪ್ಪಣೇ ಆದ್ದು!”
” ಓಹೋ ! ಹಂಗಾ! ಹಂಗಾದರೆ ನಿಮ್ಮ ಮಲ್ಲಿ ನಮಗೆ ತಿಳೀದೇನೇ ಜನಾನಾವರಿಗೂ ಹತ್ತವಳೆ ಅನ್ನು. ಇನ್ನುಮೇಲೆ ಆಗಾಗ ಬಂದು ನಮಗೂ ಅಷ್ಟು ತತ್ವ ಹೇಳಲಿ ಕಣಪ್ಪ! ಇವಳ ಬಾಯಲ್ಲಿ ಬಲು ಚೆನ್ನಾಗಿ ನುಡೀತದೆ. ?
” ಅಪ್ಪಣೆ ಬುದ್ದಿ!”
ಆ ವೇಳೆಗೆ ಒಳಗಿಂದ ಒಂದು ತಟ್ಟೆಯಲ್ಲಿ ಹತ್ತುರೂಪಾಯಿ, ಒಂದು ಕಲಾಪತ್ತಿನ ಕಿರಿಗೆ ಒಂದು ತಲಾಸತ್ತಿನ ಕಣ, ವೀಳ್ಯ ಬಂತು. ಪಟೇಲನು ಅಮಲ್ದಾರ್ರ ಕೈಯ್ಯಿ೦ದ ಅದನ್ನು ಅವಳಿಗೆ ಕೊಡಿಸಿ, “ಹೋಗು ಮಲ್ಲಿ, ಉಡಿಸಿಕೊಂಡು ಬಂದು ಬುದ್ಧಿಯೋರ ಪಾದಕ್ಕೆ ಬೀಳು? ಎಂದನು.
ಅವಳು ಕಲಾಸತ್ತಿನ ಕಿರಿಗೆ ಉಟ್ಟು ಕೊಂಡು ಪುಟ್ಟ ಗೌರಿಯ ಹಾಗೆ ಬರುತ್ತಿದ್ದರೆ ಪಟೇಲನ ಕಣ್ಣಿಗೆ ಅವಳು ನಿಲುಗೌರಿಯ ಹಾಗೆ ಕಂಡಳು. ಮನಸ್ಸು “ಈ ಹಕ್ಕೀಗೆ ಈಗಲೇ ಒಂದು ಪಂಜರ ಮಾಡಬೇಕು? ಎಂದುಕೊಳ್ಳುತ್ತ ಏನೋ ಯೋಚಿಸುತ್ತಿರುವಾಗ, ಅಮಲ್ದಾರ್ರು “ನಮಗಿರಲಿ ಕಣವ್ವ, ಅಲ್ಲಿ ನೋಡು ನಿಮ್ಮ ಧಣಿಗಳು ಅವರಿಗೆ ಮೊದಲುಮಾಡು. ಇದೆಲ್ಲ ಅವರದಲ್ಲವಾ ?” ಎಂದರು.
ಮಲ್ಲಣ್ಣನು “ಇಬ್ಬರಿಗೂ ಪಾದಮುಟ್ಟಿ ಶರಣುಮಾಡವ್ವ! ಒಬ್ಬರು ದೊರೆಗಳು ಕಳಿಸಿರೋ ಬುದ್ಧಿಗಳು : ಇನ್ನೊಬ್ಬರು ನಮ್ಮನ್ನ ಹೊಟ್ಟೇಲಿಟ್ಟು ಕೊಂಡು ಸಾಕೋ ಬುದ್ದಿಗಳು? ಎಂದನು.
ಮಲ್ಲಿಯು ಇಬ್ಬರಿಗೂ ಸಮಸ್ಕಾರಮಾಡಿ ಬಂದಳು. ಆ ವೇಳೆಗೆ ಎಲ್ಲಿಯೋ ಇದ್ದ ಕೆಂಪಿ ಬಂದು ಅವಳನ್ನು ಎತ್ತಿಕೊಂಡು ಅವಳಿಗೆ ಆಗಿರ ಬಹುದಾದ ದೃಷ್ಟಿದೋಷವನ್ನೆಲ್ಲಾ ಹೀರಿಕೊಳ್ಳುವಂತೆ ಮುತ್ತಿಟ್ಟು, ” ನನ್ನ ಚಿನ್ನಾ! ಸಾವಿರಕಾಲ ಸುಖವಾಗಿರು!” ಎಂದು ನಿವಾಳಿಸಿ ನೆಟಿಕೆ ಮುರಿದು ಕರೆದುಕೊಂಡುಹೋದಳು.
ಅಮಲ್ದಾರ್ರು ” ಬುದ್ದಿಯೋರು ಬರುವಾಗ ಈ ಮಗೂನ ಕರೆತರಬೇಕು ಎಂದರು.
ಪಟೇಲನಿಗೆ ವೈದ್ಯ ಹೇಳಿದ್ದೂ ಹಾಲೂ ಅನ್ನ ರೋಗಿ ಬಯ ಸಿದ್ದೂ ಹಾಲೂ ಅನ್ನ ಎಂಬಂತೆ ಆಯಿತು.
*****
ಮುಂದುವರೆಯುವುದು