ಬರೀ ಮಾತುಗಳು ಇವು
ಕೇವಲ ಅರ್ಥಕಳಕೊಂಡ ಶಬ್ದಗಳು
ಬೀಜ ನೆಲದಲ್ಲಿ ಹೂತು ಪಸೆಯೊಡೆದು
ಮೊಳಕೆ ಕಟ್ಟಿ ಬೇರು ಬಿಡುವತನಕ
ಇವು ಅರ್ಥವಿಲ್ಲದ ಕೇವಲ ಮಾತುಗಳು.
ಬರೀ ಮಾತುಗಳು ಇವು
ಉಗುಳಿನ ವಿಷಕ್ಕೆ ನಂಜೇರಿದ
ಮಹಾತ್ಮನ ಶಾಂತಿ ಮಂತ್ರದ ಬೀಜ
ಮೊಳಕೆಯೊಡೆಯಲಿಲ್ಲ ಇಲ್ಲಿ
ಬೇರು ಬಿಟ್ಟು ಬೆಳೆದು ಮರವಾಗಲಿಲ್ಲ.
ಬರೀ ಮಾತುಗಳು ಇವು
ಆರಿತು ನಾಲಿಗೆಯ ಪಸೆ
ಬಂಜೆಯಾಯಿತು ನೆಲದ ಒಡಲು
ಉರಿದಾಯ್ತು ಬೋಳು ಹಾಳುಹಾಳು
ಪಸೆಯಿಲ್ಲ, ತಂಪಿಲ್ಲ, ಬರೀ ಧೂಳು.
ಬರೀ ಮಾತುಗಳು ಇವು
ಅರ್ಥಕಳಕೊಂಡ ಶಾಂತಿಮಂತ್ರ
ಅವಿರತ ಹತ್ಯೆ, ಕೋಮುಲಗಲಭೆಗಳು
ಗಲ್ಲಿ ಗಲ್ಲಿಗಳಲ್ಲಿ ಕೊಲೆಗಳು
ಬೀದಿ ಬೀದಿಗಳಲ್ಲಿ ಅತ್ಯಾಚಾರಗಳು
ಅಮಾಯಕರ ಮೃತ್ಯುಕೂಪಗಳು.
ಶಾಂತಿ…. ಶಾಂತಿ…. ಶಾಂತಿ
ಕಳಿಂಗದಿಂದ – ಕಲ್ಯಾಣದತನಕ
ಏಸುವಿನಿಂದ – ಪೈಗಂಬರತನಕ
ಬುದ್ಧನಿಂದ – ಬಸವನತನಕ
ಧೋ ಎಂದು ಸುರಿಯಲಿ ಶಾಂತಿ ಮಳೆ
ಬೆಳೆಯಲಿ ಸಮೃದ್ಧ ಶಾಂತಿ ಮಳೆ
*****