ಬಾನ ಬಣ್ಣ ಮಾಗಿಸಿ ಶಶಿ
ಮೂಡುತಿಹನದೋ.
ಸಂಜೆ ಹೂವನೆರಚಿ ಸಾರೆ
ನಮ್ರವಾಗಿ ತಾರೆ ತೋರೆ
ಶರದದಿರುಳ ಕರವ ಪಿಡಿದು
ಏರುತಿಹನದೋ.
ಉದ್ಯಾನದ ಪುಷ್ಪಬೃಂದ
ಲಜ್ಜೆಯ ಸಿರಿ ಹೊಂದಿದಂದ
ತೆಳು ಬೆಳಕಿನ ಮೇಲುದುವನು
ಧರಿಸುವಂತಿದೋ.
ತಮವನುಳಿದುವೆನುವ ತೆರದಿ
ನಿಡಿದು ನೆಳಲ ಬಿಸುಟು ನೆಲದಿ
ತರುಗಳೆದ್ದು ಬೇರೆ ತೆರವ
ತೋರುವಂತಿದೋ.
ನೆಳಲು ಬೆಳಕಿನೆಂಥ ಆಟ
ನನಸೆ ಕನಸು ಎನಿಪ ಮಾಟ
ಎಲ್ಲು ಬಿಡುವು ಬೇಟವೆನುವ
ಚೆಂದವಾಯ್ತಿದೋ.
ಜಗದ ಬಣ್ಣ ಮಾಗಿಸಿ ಶಶಿ
ಏರುತಿಹನದೋ.
*****