ದೊಡ್ಡವರದೆಲ್ಲವೂ ದೊಡ್ಡದೆಂಬುವ ಮಾತು
ಸುಳ್ಳಲ್ಲ! ಶ್ರವಣ ಬೆಳಗುಳದಲ್ಲಿ ಒಂದು ಸಾ-
ವಿರ ವರುಷ ನಿಂತ ಗೊಮ್ಮಟ! ವಿಜಯನಗರದ-
ಲ್ಲಿರುವ ಸಾಸಿವೆ ಗಣಪ! ವಿಜಯಪುರದೊಳಗೀಗು
ಆಡಿದ್ದ ನಾಡಾಡಿ ಏಳೇಳು ಸಲ ನಲಿವ
ಗೋಳಗುಮ್ಮಟ! ಚೆನ್ನ ಕೇಶವನ ಕಣ್ಣಿದಿರು
ಕುಣಿಕುಣಿವ ನಲ್ಲರೂಹಿನ ಕಲ್ಲು! ವಿಜಯ ವಿ-
ಠ್ಠಲನ ಪಾಡುವ ಕಂಬ! ಹಳ್ಳಿವಳ್ಳಿಯ ಶಿಲಾಶಾಸನವು!
ಕನ್ನಡರ ಕೈವಾಡದಿಂದ್ರಜಾಲಕೆ ಕಲ್ಲು
ಕುಸುರಿತು! ಶಿಲಾಧ್ಯಾನದಿಂದ ಧೇನಿಸುವವರ
ಚೇತನಕಚೇತನ ಸಮಾಧಿಯೇ ಕವಿದುದೋ?
ಬರಬರುತ ಕಲ್ಲಾದುದೋ? ಚಕ್ರವರ್‍ತಿಗಳ
ಸಿಂಹಪೀಠವು, ಜಗದ್ಗುರುಪೀಠ, ಕಲ್ನಾಟಿ-
ಸಿದ ವೀರರಾಡಿದಾಂಡುಬೊಲವು, ಮಾಸತಿಯ
ನಿಸದಿಗೆಯ ಭೂಮಿ, ಪಾಳ್, ಪಡು, ಬರಡು. ಜಾಗೃತಿಯು
ಘನ,-ಕೃತಿಯು ಘನವು-ವಿಸ್ಮೃತಿಯು ಘನ! ದೊಡ್ಡವರು!
*****