ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು?
ಹರಿಯುವ ಹೊಳೆಗಳ ಜುಳುಜುಳು ರವದಲಿ
ಸಿರಿಗನ್ನಡದ ಮಾರ್ದನಿಯು
ತುಳುಕುವ ಕಡಲಿನ ಅಲೆಮೊರೆತದಲಿ
ಸವಿಗನ್ನಡದ ನುಣ್ದನಿಯು
ಗಿಳಿ ಕಾಜಾಣ ಉಲಿಯುವ ಸ್ವರಗಳು
ನಲುಗನ್ನಡ ಸಿರಿಸಂಕೇತ
ಪ್ರಕೃತಿ ಮಿಡಿಯುವ ಶೃತಿ ಲಯ ತಾಳ
ನವ ‘ಕರ್ನಾಟಕ ಸಂಗೀತ’
ಗುಡಿಗೋಪುರಗಳ ಓಂಕಾರದಲಿ
ತಿಳಿಗನ್ನಡದ ಶುಭ ದನಿಯು
ಶೋಭಿತ ಬನಗಳ ಝೇಂಕಾರದಲಿ
ಚೆಲುಗನ್ನಡದ ಗೆಲುದನಿಯ
ಹಸಿರಿನ ಮಡಿಲಲಿ ನಗುತಿಹ ಹೂಗಳು
ಮಧುಗನ್ನಡಕೆ ಮಣಿಮಕುಟ
ಪಸರಿಹ ಬುವಿಯಲಿ ಕರ್ನಾಟಕ ನೆಲೆ
ಶಾಂತ ಸಮೃದ್ಧಿಗೆ ಸಿರಿದೋಟ
*****