ಕಲವಧುವಿನೊಲು, ಅಡಕದಲಿ ನಗುವ ಕೌತುಕ-ಕು-
ತೂಹಲದ ಕಣಿಯ ಕಣ್ಣಲಿ ತೆರೆದು, ’ಮುಗಿಲ ನೀ-
ಲಿಯ ಕುಡಿದು ಬಿಳಿದು ಮಾಡುವೆ’ನೆಂದು ಹಸಿದ ಹ-
ಳ್ಳಿಯ ಹುಡುಗ! ಗುರುವೆನುವ ಗರುವಾಯಿಯಲಿ ನಿಂತಿ-
ರಲು ಇದಿರುಗೊಂಡೆ ನನ್ನನು ನೀನು, ಹುಡುಗ ಹಿಂ-
ಡಿನ ಪುಂಡತನದಿ ಬೆಳೆದವನನ್ನು. ಕನ್ನಡದ
ಕನ್ನಡಿಯು ಬೆಳಗಲಿತ್ತಾಗ, ಕಂಡೆವು ನಮ್ಮ
ರೂಪವನು. ಕನ್ನಡದ ಕಳಸ ಕಣಸಲಿ ಕಂಡೆ.
ಕನ್ನಡದ ಗುಡಿಯ ಕಟ್ಟುವ ಎಳೆಯ ಗೆಳೆಯರೊಳು
ನೀನು ಮೊದಲಿಗ ನನಗೆ. ಸ್ನೇಹ-ಸಿಂಹಾಸನದ
ಶೂನ್ಯ ಪೀಠದಿ ಪಟ್ಟಗಟ್ಟಿ, ಓರಿಗೆ ಜೊತೆಯ
ಎಳೆಯರನು ಎರಡು ಕೈಯಲಿ ತಂದೆ. ಕಲ್ಲ ನಿ-
ಕ್ಕಿದೆ ಅಡಿಗೆ; ಗುಡಿಗೆ ಗತಿ ಇಲ್ಲ. ಎಲ್ಲಿದೆ ಶಕ್ತಿ?
ನಿಬ್ಬೆರಗುಗೊಂಡ ಹೆಬ್ಬಯಲು ಹಬ್ಬಿದೆ ಗೆಳೆಯ!
*****