ಜನ್ಮ ಜನ್ಮಾಂತರದ ಸತ್ಯ ಸಂಕಲ್ಪವೇ,
ಫಲಹೊಂದು ಕಾಲ ಬಂದಾಗ. ಒಗರಿಳೆದು ಹುಳಿ
ಹೋಗಿ, ಸವಿ ಹವಣುಗೋಳುತಿರೆ, ಬಣ್ಣ ಹೊಂಬಣ್ಣ-
ಕೇರುತಿರೆ, ಬಳುಕಿ ಗಾಳಿಗೆ, ಬೆಂದು ಬಿಸಿಲಿನಲಿ,
ನಾನು ಕಾಯುವೆ; ಹಸಿವ ಎಸರೇರಿ ಕುದಿಬಂದು
ಉಕ್ಕಿ ಹೋಗಲಿ, ಉರುವಲಿಲ್ಲದಲೆ ಉರಿಯುತಿದೆ
ಕಿಚ್ಚು. ಕಡೆಯುತ್ತಲಿದೆ ಸೀರು ಸೆಲೆಯಂತೆ, ಬಂ-
ದಂದು ನೀನಮೃತಫಲ. ಹುಸಿಯೆ ಅಸಿವಸಿ ಸಾಕು.
ಇಂದೆ ಬರುವೆಯೊ ಏನೊ ಎಂದು ತವಕದ ಬಯಕೆ,
ನೋಂತು ನೀರೆಯು ನಲ್ಲನೆಲ್ಲಿ ಬರುವನೊ, ಸಕಲ
ಸಿಂಗಾರ ಸಲಕರಣೆ ಸರಿಯಿರಲಿ ಎನುತ, ದಿನ-
ದಿನವು, ಹಗಲಿರುಳು ಅಣಿಗೊಳ್ಳುವಂತೆ, ಹಸಿಯಾಸೆ
ತೊಳೆಯುತಿದೆ; ಹುಸಿಮುನಿಸ ಕಳೆಯುತಿದೆ; ಬಗೆಯ ಹಿ-
ಗ್ಗಲಿಸುತಿದೆ; ತನ್ನ ಒಳಹೊರಗೆ ಬೆಳಗುತ್ತಲಿದೆ.
*****