ಕೆಲವು ಪರಿವಾಳಗಳು ಮಡಿಗೆ ಶ್ರೇಷ್ಠ ಜಾಗವೆಂದು ಗುಡಿ ಗೋಪುರದಲ್ಲಿ ವಾಸವಾಗಿದ್ದವು. ಮತ್ತೆ ಕೆಲವು ಪಾರಿವಾಳಗಳು ಅಲ್ಲೇ ಅನತಿ ದೂರದಲ್ಲಿದ್ದ ಪಾಳು ಕೋಟೆಯಲ್ಲಿ ನೆಲೆಗೊಂಡಿದ್ದವು. ಎರಡು ಗುಂಪೂ ತಪ್ಪದೇ ದಿನವೂ ಗದ್ದೆ, ಹೊಲ, ಬಯಲು, ಹಸಿರಿನಲ್ಲಿ, ತೋಟಗಳಲ್ಲಿ ಆಹಾರ ಆರಿಸುವಾಗ ಒಂದಾಗುತ್ತಿದ್ದವು. ಗುಡಿಯಲ್ಲಿ ಬೀಡು ಬಿಟ್ಟ ಪಾರಿವಾಳಗಳು ಹೆಚ್ಚಳಿಕೆಯಿಂದ ತಮ್ಮ ಮಡಿವಂತಿಕೆಯನ್ನು ತೋರಿಸಿಕೊಂಡು ಪಾಳು ಕೋಟೆಯ ಪಾರಿವಾಳಗಳನ್ನು ದೂರ ಮಾಡುತಿದ್ದವು. ಒಮ್ಮೊಮ್ಮೆ ದಬ್ಬಾಳಿಕೆಯನ್ನೂ ಮಾಡುತ್ತಿದ್ದವು. ಒಂದು ಸಾರಿ ಎರಡು ಗುಂಪುಗಳ ನಡುವೆ ಘರ್‍ಷಣೆಯಾಯಿತು. ಅದರಲ್ಲಿ ಕೆಲವು ರೆಕ್ಕೆ ಪುಕ್ಕ ಕಡಿದು ಬಿದ್ದು ಜೀವವನ್ನೂ ತೆರಬೇಕಾಯಿತು. ಅಷ್ಟರಲ್ಲಿ ಒಂದು ಮುದಿ ಪಾರಿವಾಳ ಘರ್‍ಷಣೆ ನೋಡಿ ದಿಗ್ಭ್ರಾಂತವಾಗಿ ಮುಂದೆ ಬಂದು ಹೇಳಿತು.
“ಗುಡಿ ಗೋಪುರ, ಕೋಟೆ, ಅರಮನೆ, ಎಲ್ಲಿ ವಾಸವಾದರೇನು, ನಾವೆಲ್ಲ ಹಾರುವುದು ಒಂದೇ ಆಕಾಶದಲ್ಲಿ, ನೀವೆಲ್ಲಾ ಇರುವುದು ಒಂದೇ ಭೂಮಿಯಲ್ಲಿ” ಎಂದಾಗ, ಎಲ್ಲಾ ಪಾರಿವಾಳಗಳು ತಲೆ ತೂಗಿದವು.
“ಭೂಮಿ ಬಾನಿನ ಸ್ನೇಹಕ್ಕೆ ಅಂಟಿಕೊಂಡಿವೆ ನಮ್ಮ ಜಂಟಿ ರೆಕ್ಕೆಗಳು” ಎಂದು ಸ್ನೇಹ ಸೂತ್ರದಲ್ಲಿ ಒಂದಾದವು.
*****