ಎಲೆ ಸುಹೃದ, ಸರ್‍ವ ಭೂತಾಂತರಸ್ಥನೆ, ನರನ
ನಾರಾಯಣನೆ, ನಿನ್ನ ಮೈತ್ರಿಯ ಉಗಾಭೋಗ
ಉಸಿರು ಈ ಹಕ್ಕಿಯಲಿ; ತುಂಬು ಜೀವವ ದೇವ.
ಯುಗಜುಗದ ಪರಿಪಾಕದಿಂದ ಬರಲಿರುವಂಥ
ಸ್ನೇಹಸಾರದ ಹದವನರಿವೆವೇ? ಕ್ಷಣಜೀವಿ-
ಗಳು ನಾವು, ಕಣ್ಣ ಆಚೆಗೆ ಕಾಣದಿರುವ ಕುರು-
ಡರು. ತನ್ನದಲ್ಲದುದು ತಲೆಯೆತ್ತಿತೆಂದು ತಲೆ-
ಕೆಡಿಸಿಕೊಳ್ಳುವ ಮೂಢ-ಜಡ-ಮಂದ ಪ್ರಾಣಿಗಳು.
ನಾಳೆ ಬರುವದು ಬರಲಿ, ಹೃದಯ ಪುಷ್ಕರಣಿಯಲಿ
ಮಳೆ ನೀರು, ಹೊಳೆ ನೀರು, ಕೊಳೆ ನೀರು, ಕೊಚ್ಚಿ ಬರ-
ದಿರಲಿಂದು, ನಾಡಾಡಿ ಹಕ್ಕಿಗಳ ಕೂಡಿ ಕಲೆ
ಬೆರೆತಿರಲು, ಕುಡಿದುದೇ ತೀರ್‍ಥವೆನದಿರುವಂತೆ
ಕರುಣಿಸೆಲೆ ಉತ್ತರೋತ್ತರವನು. ಹಿಮಾಲಯದ
ಮಾನಸ ಸರೋವರದ ಗಂಗೆ ಕಲಕಿದುದುಂಟೆ?
*****