ದುಃಸಾಧ್ಯಸಂಭಾವ್ಯವೆಂಬ ಸೊಲ್ಲಿನ ಗುಲ್ಲು
ಗುಡುಗಾಡುತಿದೆ. ಕನ್ನಡದ ಕನ್ನಡಿಯು ಒಡೆದು
ಬೆಸೆಯ ಬರದಂತೆ ದೆಸೆದೆಸೆಗೆ ಬಿದ್ದಿದೆ. ಹಿಡಿದು
ಕಟ್ಟಬಲ್ಲಾ ಕೈಯೆ ಕಾಣದಿದೆ. ಒಡಹುಲ್ಲು
ಬೆಳೆಯೆ, ಹೂದೋಟ ಹುದುಗಿದೆ ನೆಲದೊಳೆಲ್ಲೆಲ್ಲು.
ದನದ ಜಂಗುಳಿಯಂತೆ ಹಿಂಡಾಗಿ, ಮನ ತಡೆದು
ನಿಂತಿದೆ, ನಿರಾಯಾಸ ಮೆಲಕು ಹಾಕುತ. ಸಿಡಿದು
ಪೂರ್‍ವ ವೈಭವವು ಉಃಶಾಪ ಕೋರುವ ಕಲ್ಲು.
“ಶ್ರೀ ಕನ್ನಡದ ಧೂಳಿ ಬಾಂದೆರೆಯೊಳೋಕುಳಿಯ
ನಾಡೀತು. ಸೂರ್‍ಯ ಮಾಲೆಯ ರಾಸಲೀಲೆಯದು
ಕನ್ನಡದಿ ಒಣ್ಣನೆಯ ಪಡೆದೀತು, ಪರಿಶುದ್ಧ
ಕನ್ನಡರ ಕೀರ್‍ತಿ ನಾಡಿಗೆ ಪ್ರಭಾವಳಿಯ ಕುಡಿ-
ಯೊಡೆಸೀತು. ಓಂ ಸ್ವಸ್ತಿ”- ಯೋಗನಿದ್ರೆಯೊಳಿದ್ದ
ರತ್ನ ಸಿಂಹಾಸನವು ಎದೆಯೊಳೊಡನುಡಿಯುವದು.
*****