ಆನೆ, ಮುದ್ದಾನೆ, ಮದ್ದಾನೆ ಬಂದಿತು ತಾನೆ,
ಮುದಿಯಾನೆ! ಕಳೆದಿರಲು ಯೌವ್ವನದ ಹೊರಮಿಂಚು
ಅನುದಿನವು ಸಿಂಹಗಳಿಗಿಂತು ಕೊನೆವರೆಗಂಜು-
ತುತ್ತಮಾಂಗದ ಮುತ್ತು ಮುಗಿದಿರಲು, ಹಿರಿಬೇನೆ
ಮುದವ ಹದಗೆಡಿಸಿರಲು, ಕೊಳದ ಬಳಿ ಬಂದಾನೆ
ಸಾಯ್ವ ಪಣ ತೊಟ್ಟಿತದು ಹೊಳೆಯೆ ಮಸಣದ ಹೊಂಚು
ಮೆಲ್ಲನೈದಿತು ತಾನು ಮೆಚ್ಚಿರುವ ಹೊನಲಂಚು
ಕಂಡು ಮುಳುಗಿರಲೆಂದು ಏಕೆ ಈ ವಿಧಿ ಕಾಣೆ!
ಕೊಳದ ಬಳಿಯಲಿ ಹರಿದ ಹೊನಲಿನಲಿ, ಕನಲಿರುವ
ಗಜಗಳೆಣಿಕೆಯ ಮೀರಿ ಸಂದಿಹವು : ಇದು ಒಂದು !
ಒಂದು ಕ್ಷಣ, ಮಾರ್‍ಮಲೆವ ನೀರ ನಿಟ್ಟಿಸಿನೋಡಿ
ತ್ವೇಷದಲಿ ಕರವೆತ್ತಿ ಆನೆ ಘೀಳಿಟ್ಟಂದು,-
ನಡುಗುವವು, ಆಜನ್ಮ ಆನೆಯನು ಪೀಡಿಸಿಹ
ಸಿಂಹಗಳು, ಕೊನೆಗೊಮ್ಮೆ ಬೆದರಿ ದಿಕ್ಕೆಟ್ಟೋಡಿ!
*****