ಜೀನನ ಹಾಡು

ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ||
ಅದ್ದಽನ ಬೀಸಽ ಗಿದ್ದಽನ ಕುಟ್ಟ|
ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ||
ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ|
ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ||

ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ||
ಅಂಟಽದ ತೆಳೆಗ ಇಟ್ಟಾನೊ ಜೀನಾ|
ಅಂಟಽಕ ತೆಲಿಕೊಟ್ಟು ಮಲಗ್ಯಾನೊ ಜೀನಾ||

ಮುಕ್ಕ ಮಗಿ ನೀರಾ ಕಾಗಿ ಕುಡಿತಲ್ಲ|
ಕುಳ್ಳ್ಯಾಗಿನ ನುಚ್ಚ ಹದ್ದ ಒಯಿತಲ್ಲ|
ಇನ್ನ್ಯಾನ ಉಳ್ಳೇ ಇನ್ನ್ಯಾನ ತಿಲ್ಲೇ||
* * *

ಉದ ಉದ ಅಂತ ಹೋಗಿ ನಿಂತಾ`ಳೆಲ್ಲ’|
ಉದ ಉದ ಅಂದರ ನೀಡಾಽಣಿಲ್ಲ||

ಓಡ್ಯಾಡಿ ಪುಂಡಿ ಕಟಿಗಿ ಕಿತ್ತ್ಯಾನೊ ಜೀನಾ|
ಎಲ್ಲವನ ಬೆನ್ನ ಬೆನ್ನ ಶಳದಾನೊ ಜೀನಾ||

ಹೊಡಿಬ್ಯಾಡೊ ಜೀನಾ ಹೊಡಿಬ್ಯಾಡೊ ಜೀನಾ|
ಬಂದ ಹಾದೀ ಕೂಡಿ ಹೋಗತೇನೊ ಜೀನಾ||

ಜ್ವಾಳಽದ ಹೊಲಕ ಹೋಗ್ಯಾಳ ಎಲ್ಲ|
ಕಣ್ಣಾನ ಕಾಡೀಗಿ ಉದರ್‍ಸ್ಯಾಳೆಲ್ಲ||

ಹತ್ತಿಯ ಹೊಲಕ ಹೋದಾಳೆಲ್ಲಾ|
ಕೈಮ್ಯಾಲಿನ ಗಂಧಾ ಉದರ್‍ಸ್ಯಾಳೆಲ್ಲಾ||

ಗೋದೀಯ ಹೊಲಕ ಹೋದಾಳೆಲ್ಲಾ|
ಉಡಿಯಾನ ಭಂಡಾರ ಉದರ್‍ಸ್ಯಾಳೆಲ್ಲಾ||

ಕಡ್ಲೀಯ ಹೊಲಕ ಹೋದಾಳೆಲ್ಲಾ|
ಹಣಿಮ್ಯಾಲಿನ ಕೂಕಮ್ಮ ಉದರ್‍ಸ್ಯಾಳೆಲ್ಲಾ||
* * *

ಜ್ವಾಳಽದ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಜ್ವಾಳೆಲ್ಲಾ ಬತ್ತಗಾಡೀಗಿ||

ಹತ್ತೀಯ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲಾ||

ಗೋದೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್‌ತ ಖಂಡ್ಗ ಗೋದೆಲ್ಲಾ ಜೊಳ್ಳಹಾಯಿತಲ್ಲ||

ಕಡ್ಲೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್ತ್‌ ಖಂಡೆಗ್ಕಡ್ಲೆಲ್ಲಾ ಕೊಳ್ಳಿಹಾಯಿತಲ್ಲ||
* * *

ಕಂಬ್ಳೀಯ ಮುಸಕಾ ಹೊಡೆದಾನೊ ಜೀನಾ|
ಜಗಲೀಗಿ ತಲಿಕೊಟ್ಟು ಮಲಗ್ಯಾನೊ ಜೀನಾ||

ಉಣ್ಣೇಳೊ ಜೀನಾ ತಿನ್ನೇಳೊ ಜೀನಾ|
ಇನ್ನೇನ ಉಳ್ಳೇ ಇನ್ನೇನ ತಿಲ್ಲೆ||

ಹೆತ್ತ್ ಖಂಡಗ ಜ್ವಾಳೆಲ್ಲಾ ಬತ್ತ್‌ ಗಾಡೀಗೆ|
ಹೆತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲ||

ಹೆತ್ತ್‌ ಖಂಡಗ ಗೋದೆಲ್ಲಾ ಸೊಳ್ಳೆ ಹಾಯಿತಲ್ಲ|
ಹತ್ತ್‌ ಖಂಡಗ ಕಡ್ಲೆಲ್ಲಾ ಕೊಳ್ಳಿಹಾಯ್ತಲ್ಲ||
****
ಜೀನನ ಹಾಡು

ಇದೊಂದು ಯಕ್ಷಿಣಿಯ ಕಥೆ. ಜೀನನೊಬ್ಬನು ನೈವೇದ್ಯದ ಸಲುವಾಗಿ ತೀರ ತುಸು ಅಡಿಗೆಯನ್ನು ಮಾಡಿಸಿಕೊಂಡು ಎಳ್ಳಾಮಾಸೀ ದಿನ ಹೊಲಕ್ಕೆ ಹೋದನು. ಆ ಇದ್ದಷ್ಟು ಅಡಿಗೆಯನ್ನು ಗುಬ್ಬಿಕಾಗೆಗಳು ತಿಂದುಬಿಡುವವು. ಮೋರೆ ಒಣಗಿಸಿಕೊಂಡು ಕುಳಿತಿರುವ ಜೀನನ ಮುಂದೆ ಒಬ್ಬ ಯಕ್ಷಿಣಿಯು ಬಂದು `ನನ್ನ ನೈವೇದ್ಯವನ್ನು ನನಗೆ ಕೊಡು’ ಎಂದು ಕೇಳುವಳು. ಹೆಸಿದು ಹೊಟ್ಟೆ ಉರಿಯುತ್ತಿರುವ ಜೀನನು ಹಸಿದಂಟುಗಳಿಂದ ಅವಳನ್ನು
ಚೆನ್ನಾಗಿ ಥಳಿಸಿದನು. ಅವಳು ತನ್ನ ಮಂಗಲದ್ರವ್ಯ (ಅರಿಸಿಣ, ಕುಂಕುಮ್ಮ, ಕಾಡಿಗೆ, ಗಂಧ)ಗಳನ್ನು ಮಂತ್ರಿಸಿ ಅವನ ಬೆಳೆಗಳ ಮೇಲೆ ತೂರುವಳು. ಅದರಿಂದ ಆ ಬೆಳೆಗಳಿಗೆಲ್ಲ ಬಗೆಬಗೆಯ ರೋಗಗಳುಂಟಾಗಿ ಅವೆಲ್ಲವೂ ಕೆಟ್ಟುಹೋಗುತ್ತವೆ.

ಛಂದಸ್ಸು:- ಮಂದಾನಿಲ ರಗಳೆಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಅದ್ನಗಿದ್ನ=ಅರ್ಧ ಸೇರು, ಗಿರ್ಧ ಸೇರು. ಕುಳ್ಯಾಗ=ಚಿಕ್ಕ ಮಡಿಕೆಯಲ್ಲಿ. ಛರಗ=ಅಡವಿಯ ನೈವೇದ್ಯ. ಅಂಟ-ಮಂಚಿಕೆ. ಎಲ್ಲ=ಎಲ್ಲಮ್ಮ(ದೇವತೆ). ಬತ್ತಗಾಡಿಗೆ=ಜೋಳದ ತೆನೆಗಳಿಗೆ ಬೀಳುವ ಕಾಡಿಗೆರೋಗ. ಬಂಜಿ=ಹತ್ತಿಯ ಕಾಯಿಗಳಿಗೆ ಬೀಳುವ ರೋಗ. ಸೊಳ್ಳು ಹಾಯಿ=ಗೋದಿಯ ಬೆಳೆಯ ಮೇಲೆ ಇಟ್ಟಂಗಿಯಂತಹ ರೋಗ ಬೀಳುವುದರಿಂದ ಬೆಳೆಯೆಲ್ಲ ಸೊಳ್ಳಾಗುತ್ತದೆ. ಕೊಳ್ಳಿ=ಕಡಲೆಯಗಿಡೆಗಳನ್ನು ಒಣಗಿಸುವ ಕೆಂಪು ರೋಗ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫ್ರಿಜ್ ನಿಂದಾಗುವ ಹಾನಿಕಾರಕ
Next post ಋತದ ಮೊದಲ ಕಣಸು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…