ಇಲ್ಲಿ ನಿತ್ಯಸಂತೆ
ಅನುಕ್ಷಣವೂ ಬಿರುಸಿನ ಮಾರಾಟ
ಎಲ್ಲ ಎಲ್ಲವೂ ವ್ಯಾಪಾರದಾಟ!
ಹೂವು – ಹಣ್ಣು
ಹಸಿರು – ಮೀನು
ನಾನು – ನೀನು – ಅವನು
ಎಲ್ಲ ಇಲ್ಲಿ ಬಿಕರಿಗಿಟ್ಟ ಸರಕು!
ಭರಾಟೆ ಮಾರಾಟದಲಿ
ಯಾರಿಗೆ ಬೇಕು
ಹೃದಯದ
ಕೂಡಬಲ್ಲ ಕಳೆಯಬಲ್ಲ ತಲೆಯಿದ್ದರೆ
ಸಾಕು!
ಕೊಡುವುದೆಷ್ಟು? ಕೊಳುವುದೆಷ್ಟು?
ಲಾಭವೆಷ್ಟು? ನಷ್ಟವೆಷ್ಟು
ಎಲ್ಲ ಬರಿಯ ಲೆಕ್ಕ
ತಕ್ಕಡಿಯೇ ಇಲ್ಲಿ ಮುಖ್ಯ!
ಸಂತೆಯೊಳಗೆಲ್ಲಾ
ಅರ್ಥವಾಗುವುದೊಂದೇ ಭಾಷೆ
ವಿಕ್ರಯವೇ ಗುರಿಯು
ಅದಕೆ ಎಷ್ಟೊಂದು ವೇಷ!
ಗದ್ದಲದೀ ಸಂತೆಯಲಿ
ಮತ್ತೆ ಯಾವುದೇನು ನುಡಿದರೇನು?
ಮಿಡಿವರೇನು?
ಮಾತಿಗೆಲ್ಲಿದೆ ಅರ್ಥ?
ನಮ್ಮ ಕನಸು – ಬಣ್ಣ
ಭಾವ – ಮೌನ
ಎಲ್ಲ ಇಲ್ಲಿ ವ್ಯರ್ಥ!
ಕೊಡು ಕೊಳುವವರ
ಮೆಟ್ಟುಗಳಡಿಯಲಿ
ತಕ್ಕಡಿಯ ಭಾರದ
ಬೊಟ್ಟುಗಳಡಿಯಲಿ
ನಿತ್ಯವೂ ನಲುಗುವ
ಸೂಕ್ಷ್ಮ ನೈಜತೆಗಳ ಲೆಕ್ಕ
ಇಟ್ಟವರಾರು ಪಕ್ಕಾ?
*****