I
`ಬಾಲೆ ನಿನ್ನಯ ತಮ್ಮನೆಲ್ಲಿ?’
ಎಂದವಳನಾಂ ಕೇಳುವಲ್ಲಿ,
ತಲೆಯನಾನಿಸಿ ಹೆಗಲಿನಲ್ಲಿ
`ಮನೆಯೊಳಲ್ಲವೆ?’ ಎಂದಳು. ೪
ಆದೊಡಿಂದವನೇಕೆ, ಬಾಲೆ,
ನಿನ್ನೊಡನೆ ಪೋಗಿಲ್ಲ ಸಾಲೆ
ಗೆನಲು ನುಡಿದಳು – ಹನಿವ ಹಾಲೆ?
ಮಲರೆಲರೆ? ಮೆಲ್ಲುಲಿಗಳೆ? ೮
‘ತಿಂಗಳೊಂದಕೆ ಬಂದುದೀಗ
ಸಾಲೆಗೆನ್ನೊಡನೇಕೆ ಪೋಗ
ನೆಂದರಿಯೆನವನಲ್ಲಿ ರೇಗ
ರೇನಕಟ ನಮ್ಮಯ್ಗಳು? ೧೨
`ಹಲಿಗೆ ಹೊತ್ತಗೆ, ಅಕ್ಕ, ಜೋಕೆ,
ಕುತ್ತ ಮಾಣ್ದೊಡನೀಯೆ ಸಾಕೆಂ
ದೆನ್ನೊಳಿಟ್ಟುದ ಮರಳಿ ಏಕೆ
ಕೊಂಡನಿಲ್ಲನನಿನ್ನೆಗಂ? ೧೬
`ತಾಯಿ ಗಂಜಿಯನಿಕ್ಕಿ ಕರೆಯೆ,
ಅವನ ಬಟ್ಟಿಲನೆನ್ನ ನೆರೆಯೆ
ಮಡಗಲದಕೇಂ ಬಳಸಳರಿಯೆ-
ಬರಿಯ ಬಟ್ಟಲ ನಿಟ್ಟಿಪೆ.’ ೨೦
`ಅಂತುಟೆನೆ ಎಂತಿಹನು ನಿಮ್ಮ
ಮನೆಯೊಳಾ ನಿನ್ನಣುಗ ತಮ್ಮ?
ಇರಲು ನಿನ್ನೊಡನುಣನೆ, ಅಮ್ಮ?
ಪೇಳೆ ಸಾಲೆಗೆ ಪೋಗನೆ?’ ೨೪
‘ಅಯ್ಯ ನೀನೆನುವೇಕೆ ಹೀಗೆ? –
ಕಡೆಹಗಲ ಕೂಳುಂಡ ಮೇಗೆ,
ಹಣತೆ ೧ಹೆಚ್ಟಿಸೆ ಕಣ್ಣು ತೂಗೆ
ಮುಚ್ಚುವುದೆ ನಾನಚ್ಚಿಯಾ೨ ೨೮
‘ಬರುವನವನೊಡನೆನ್ನ ಸೇರೆ;
ಒಡನೆ ಹಿತ್ತಿಲಿಗಾಗಿ, ಬೋರೆ
ಗಿಡದಿ ದೋಟಿಗೆ ದೊರೆತ ದೋರೆ
ಹಣ್ಣ ನವನಿಗೆ ಮೆಲಿಸುವೆ ೩೨
‘ಗೊಂಬೆಮದುನೆಯನೊಮ್ಮೆ ಮಾಡಿ,
೩ಚಿನ್ನೆಯೆಕ್ಕಡಿಯೊಮ್ಮೆ ಹೂಡಿ,
ಆಡಿಸುವೆ ಪಲವಾಟವಾಡಿ-
ಕಣ್ಣುಮುಚ್ಚಿಕೆಯಲ್ಲದೆ. ೩೬
`ಅವನನಾಟಿಕೊಡಂಜಿ೪ ಮಾಡಿ,
ತಂಬಟೆಗೆ ನಾಂ ಚಪ್ಪಳಾಡಿ,
ಗೋವ ಕಥೆಯಂ ಜತೆಗೆ ಹಾಡಿ,
ನಿನ್ನೆ ಬಿನದಂ ಗೆಯ್ದೆವು. ೪೦
‘ಆ ಬಳಿಕ ಕಾಬಳ್ಳಿ ಬರಸಿ,
ಬೇಡವೆನೆ ಬಿಟ್ಟಂತೆ ಮರಸಿ,
ಕಲಿಸಿ ಮುಗಿಸಿದೆನೊತ್ತುವೆರಸಿ
ದಕ್ಕರವನಿಂದೊರೆವೆನು. ೪೪
‘ನಡುವೆ ಕತೆಗಳ ನುಡಿದು ನುಡಿಸಿ,
ಬಾಚಿ ಹೆರಳೆನ್ನಲರ ಮುಡಿಸಿ,
ಅಕ್ಕ ನಿನಗೆನೆ, ಬಿಮ್ಮನಡಸಿ
ಸೆಳೆವ ಮುತ್ತಿನ ಸವಿಯದೇಂ! ೪೮
‘ಕೋಳಿ ಕೆಲೆವುದೆ, ಎಚ್ಚರಾಗಿ
ನೋಡಲೆಲ್ಲಿಗೊ ನನ್ನ ನೀಗಿ!
ಇರುಳು ಬರುವರಮವನ ಮೂಗಿ
ಯಂತೆ ಹೊಂಚುವೆನೆತ್ತಲು. ೫೨
`ಇರುಳೊಳಲ್ಲದೆ ಬಾರನೇಕೆ?
ಹಗಲಲೀ ೧ಮುಚ್ಚಾಟವೇಕೆ?-
ಹಗಲಲೆಣಿಸುವೆ ೫ಕೇಳಬೇಕೆಂ
ದಿರುಳ ಮುನ್ನಮೆ ಮರೆಯುವೆ. ೫೬
‘ಮುನ್ನವನನೆಚ್ಚರಿಕೆಯಲ್ಲಿ
ಅಲ್ಲದೆನ್ನಯ ಮಲಗಿನಲ್ಲಿ
ಕಂಡೆನಿಲ್ಲೆನಲೀಚೆಯಲ್ಲಿ
ಹಿಂದು ಮುಂದಿಂತಾದುದೇಂ? ೬೦
‘ತಾಯ ಕೇಳಲು ಮನಸು ಬಾರ
ದೆತ್ತೆ ಹೆಸರಂ ಕಣ್ಣ ನೀರ
ಸುರಿವಳೇತಕೊ? – ಹಗಲು ತೋರ
ನಾದಡಿರುಳಲಿ ಕಾಣಳೆ? ೬೪
‘ಹಗಲಲಿಲ್ಲೆನಲಿಲ್ಲವೆಂದು
ಬಗೆಯಲೇನೋರಂತೆ ಬಂದು
ಇರುಳು ತೋರನೆ? – ಇರುಳಿನಿಂದು
ಹಗಲಲಿಲ್ಲೆನಲಿಲ್ಲವೆ?’ ೬೮
-ಧನ್ಯೆ ಮಗು ನೀನೆನ್ನಬೇಕೆ?
ಅನಿತಣಂ ನನಗಿಲ್ಲವೇಕೆ?-
ಒದಗದಕಟೆನಗಿನ್ನುಮಾಕೆ
ಯೇಕೆ ಕನಸಿನ ಕಾಣಿಕೆ?೭೨
II
ನನ್ನ ಹಗಲಿಂದೆಂದು ಪೋದೆ,
ಅಂದಿನಿಂದೆನ್ನಿರುಳಿಗಾದೆ
ಎಂದು ನಂಬಿದೆನೇಕೆ ಮಾದೆ
ಎನಿತೊ ದಿನದಿಂದೀಚೆಗೆ? ೪
ಏಕೆ ಬಾರೆಯೊ ಮುನ್ನಿನಂತೆ?
ಕಳೆದ ಕುತ್ತವೆ ಮರಳಿ ಬಂತೆ?
ಒರೆಯ, ತಮ್ಮಾ, ಕರೆವ ಮುಂತೆ
ಬಂದು ಮೆಯ್ಯನ್ನೀವೆನೆ? ೮
ನಿನ್ನ ಮುನ್ನಣ ಬೇನೆಯಲ್ಲಿ
ಕೆಲದಿನೆನ್ನಂ ಕದಲಲೊಲ್ಲಿ!
ಆರಿರುವರಾರಯ್ಸಲಲ್ಲಿ?
ಅಕಟ, ಒಬ್ಬನೆ ನರಳುವೇಂ? ೧೨
ಏವೆನಿಲ್ಲಿಂದಲ್ಲಿಗೆಲ್ಲಿ
ಗಾಳಿಪಟ? ಮುಗಿಲಟ್ಟನೆಲ್ಲಿ?
ಗೊತ್ತು ಗೊತ್ತಿರದೊತ್ತಲೆಲ್ಲಿ?
ಯಾರ ಕೇಳಲಿ ದಾರಿಯ? ೧೬
ಅಕಟ, ಸೇರುನೆನೆಂತು ನಿನ್ನ
ನರಿಯೆ! ಕೋರಿಕೆಯುದುರುವನ್ನ
ಮಾಗಿಯಮಟೆಯ ಮರದೊಲೆನ್ನ
ಮನಸು ತೊನೆವುದು ನಿಚ್ಚಟಂ ೨೦
ಕಾಣೆನೆಂಬುದರಿಂದ ನಿನ್ನ
ನಾರಯಿಸಲಾರೆಂಬ ಬನ್ನ
ಮೆದೆಯ ಸುಡುತಿದೆ- ಬಿಸಿಲಿನನ್ನ
ಬಿಸಿಲ ಮಳಲಂ ತಡೆವರೇಂ? ೨೪
ಸಾಲೆ ಬಿಡುವೊಡನಂದಿನಿಂದ
ಸುತ್ತು ಸುತ್ತಣ ಹಾದಿಯಿಂದ
ಮನೆಗೆ ಬಂದೊಡಮೇಕೆ, ಕಂದ,
ಸಂಜೆ ಮುನ್ನೊಲು ಮುಗಿಯದು? ೨೮
ನಿನ್ನ ಹೊತ್ತಗೆ ಹಲಿಗೆಯನ್ನ
ಕೊಂಡು ಬೋರೆಯ ಬುಡದಿ ಮುನ್ನ
ಕಲಿಸಿದುದನಾಂ ಕಲಿಯುವನ್ನ
ಬಿತ್ತೆ ಹಣ್ಣೆದೆ ೬ಕೆತ್ತಿತೆ? ೩೨
ಹಲಿಗೆಯಲಿ ಚಿತ್ತರವ ನಿನ್ನ
ಬಿಡಿಸಲಾಂ ಮನ ನೆರಸುವನ್ನ,
ನೆನವೆ ಮೋಸವ ಕೊಳಿಸಲೆನ್ನ
ಕಳ್ಳನಲಿ ಕಣಿ ಕೇಳಲೆ? ೩೬
ಆ ಬಳಿಕ ಗುಡಿಗಯ್ದಿ – ‘ತಾಯೆ,
ನನ್ನ ತಮ್ಮನ ಕೂಟವೀಯೆ;
ಈವೆನವನೀ ಕುತ್ತ ಮಾಯೆ
ನನ್ನ ಕೆಯ್ಬಳೆ ಕಾಣಿಕೆ’- ೪೦
ಎಂದು ಬಲವಂದಡ್ಡಬಾಗಿ,
ದೇವಿ ಸಲಿಸುವಳೆಂದು ಸಾಗಿ
ಮನೆಗೆ ಬರಲೇಂ ಹಗುರಮಾಗಿ
ಕಾಂಬುದೆದೆ ಕೆಲ ಗಳಿಗೆಗೆ? ೪೪
ಇಂತನುದಿನಂ ಸಂಜೆ ಸಂತು,
ಸರಿದು ಸರಿಯದ ರಾತ್ರಿ ಬಂತು!
ಕಳೆವೆನಿದ ಬೆಳಗಾನವೆಂತು?-
ಕುಟ್ಟಿತೆದೆಯಲಿ ಕಳವಳಂ. ೪೮
ಬಾನ ಮೊರದಲಿ ಸುರಿವಿದರಳಂ೭
ನಿನ್ನೊಡನೆ ಮುನ್ನಂತೆ ಬೆರಳಂ
ತೋರುತೆಣಿಸುವ ಕಣ್ಣ ಹುರುಳಂ
ನೆನವು ತಟ್ಟನೆ ಕೆಡಿಪುದು ೫೨
ಸೊಡರ ಕತ್ತಲೊಳುಣ್ಣುವೆನ್ನ
ಕಿವಿಗೊಡಹಿ ನಾಯಯ್ದೆ ಮುನ್ನ,
ಬಾಯ್ಗೆ ಕಯ್ಗೆಯ್ದನ್ನವನ್ನ
ಮರಸಿ ಬಕ್ಕರೆಗಿಕ್ಕುವೆ. ೫೪
ಬಳಿಕ ಸೇರುತ ತಾಯ ಮರೆಯಂ
ಮುದುರಿ ಮಲಗಿರೆ, ಮಲಗಲರಿಯೆಂ,
ಒಂದೆ ಯೋಚನೆ– ನನ್ನ ಮರಿಯಂ
ನಾವ ಬಾವುಗಮೆತ್ತಿತೊ? ೬೦
ನನ್ನ ನಿದ್ದೆಯ ಕಣ್ಣಿಗಲ್ಲದೆ
ಎಚ್ಚರದೊಳಗೂಡಲೊಲ್ಲದೆ
ಹಟವ ನೀ ಹಿಡಿವೆನಲು, ಸಲ್ಲದೆ
ನಿದ್ದೆಯೀ ಸುಡುಗಣ್ಣಿಗೆ? ೬೪
ಹೊತ್ತಿಳಿಯೆ ಮನೆದೀಪದಂತೆ
ಕಣ್ಣು ಪೆರತಂ ಕಾಣಿಪಂತೆ,
ನಿನ್ನನನಿತೇಂ ತೋರದಂತೆ?
ನಿನ್ನ ಬೇಹಿಗನೇನಿದು? ೬೮
ಮುಚುಗೆಯ್ಯಿಂ ಬಿಮ್ಮೆನೆನ್ನ
ಕಣ್ಮುಗಿಯೆ ನಿನಗೆನ್ನ ಮುನ್ನ
ಸುಳಿವುದೇನ್ನೆಳಲಂತದನ್ನ
ನೆನಸಲೆದೆ ಜುಮ್ಮೆನುತಿದೆ! ೭೨
ಬಗೆವೆದೆಯ ಕಿವಿ ಕೇಳುವನ್ನ,
ನೆನನೆನವೆನೋರಂತೆ ನಿನ್ನ;
ಮುರಿದಕಟ ದಿಕ್ಚಕ್ರದನ್ನ
ಸಲ್ಲದೇನೆನಗುತ್ತರಂ? ೭೬
ಮುಗಿದುದಾ ನರಿಯೂಳು ಹಿಂದೆ,
ಬೊಗಳಿ ಮಗಿದುವು ನಾಯಿ ಮುಂದೆ;
ಮುಗಿಯದಿರುಳಿರುಳುದ್ದವೊಂದೆ
ಕಣ್ಮುಗಿಯದೀ ಯೋಚನೆ ೮೦
ಮುಂದುಗಾಣದ ಮನದ ಚಿಂತೆ
ಯಿಂದ ಮೊಳಗುವ ಭೀತಿಗಿಂತೆ
ನಾಳಿನಾಸೆಯಳಂಬೆಯಂತೆ
ಅದುರುವೆದೆಯಲಿ ಮೊಳೆವುದು ೮೪
ಕರುವಳಿದ ತುರುಗೆಚ್ಚಲಂತೆ
ತೊರೆಯೆ ಕಂಗಳಿನೆದೆಯ ಚಿಂತೆ,
ಚಾಪೆ ಚಾಡಿಯ ನುಡಿಯದಂತೆ
ತಾಯ ಮುನ್ನಮೆ ಮಡಚುವೆ. ೮೮
ಕೋಳಿ ಕೆಲೆವುದೆ, ತಾಯ ಜತೆಯಿಂ
ಕೆಲಸದಲಿ ಬಳಸಿದಡೆ ಮತಿಯಂ,
ಮೂಗುತಿಯ ಕಳಕೊಂಡ ಸತಿಯಂ
ತೆದೆಯ ಮರುಕಂ ಮರೆವುದೆ? ೯೨
ಸಾಲೆಗಯ್ದಲು ಕಾಲು ಬಾರದು,
ಮನಸು ಮನೆಯಲಿ ನಿಲ್ಲಲಾರದು,
ಕಣ್ಣು ನೆನವಂ ಬಿಟ್ಟು ಕೋರದು,
ಏನೆಸಗಲುಂ ತೋರದು. ೯೬
ತಾಯಿ ೮ಎಕ್ಕಡಿ ನೆರಸುತೆನ್ನ
ನೊಂದು ಬಾಗಲಲಿರಿಸಿದನ್ನ,
ದಾಯ ತಪ್ಪುತ ಕವಡಿಯನ್ನ
ನಡಸುವೆನ್ನ ನಗಾಡರೆ? ೧೦೦
ಊರ ಮಕ್ಕಳು ಮೊನ್ನೆ ಕೂಡಿ,
ಗೊಂಬೆ ಮದುವೆಯ ಸರಸವಾಡಿ,
ಗಲಬೆಯಿಂ ಮೆರವಣಿಗೆ ಮಾಡಿ
ಕರೆಯಲೊಬ್ಬಳೆ ಹೋಗಲೆ? ೧೦೪
೯ಜೋಗಿ ನಡೆತರೆ ೧೦ಸೋಣದಲ್ಲಿ,
ಕುಟ್ಟುತಿರೆ ಕೆಯ್ಪರೆಯನಲ್ಲಿ,
ಬಡಿದುದೆದೆ ಇಮ್ಮಡಿಯಿನಿಲ್ಲಿ-
ಹಿತ್ತಿಲಿಗೆ ನಾನೋಡಿದೆ. ೧೦೮
ಇರುಳಿರುಳನಿಂತೆರೆದು ಸರಿಯೆ,
ನಾಳೆಗಳ ಕದ ಹೊಂಚಿ ತಿರಿಯೆ,
ನೋಡುವಾಸೆಯ ಕುಕ್ಕೆ ಬರಿಯೆ-
ನಾಳೆಯಿದೆ, ನೀನಿಲ್ಲವೇಂ? ೧೧೨
ಮದುವೆಯಂ ಕಾದಂತೆ ಬೆನಕಂ,
ನಾಳೆ ನಾಳೆಂದಂದಿನನಕಂ
ವಂಚಿಸಲಿ ನಾನೆನ್ನ ಮನಕಂ-
ನಾಳೆಯಿದೆ, ನೀನಿಲ್ಲವೇಂ? ೧೧೬
ಬರುವಿ ಗಡ ನೀನೆಂದು ಕೋರಿ
ಕಾವೆದೆಯೊಳರಮರಿಕೆ ತೂರಿ
ಬೆಕ್ಕಿನೊಲು ಹಂಬಲದ ದಾರಿ
ಯಡ್ಡ ನುಗ್ಗುತಿದೇಕೆಯೊ? ೧೨೦
ಆಸೆಯನುದಿನಮೇತನವೆನ್೧೧
ತೀವುತೆದೆಯಂ ಸಂಜೆಯನ್ನ,
ಇರುಳೊಳಾಡಿಸಿ ೧೨ಹರೆಯ ಮುನ್ನ
ಬರಿಯ ೧೩ಮರಿಗೆಯನಿಳಿಪುದು! ೧೨೪
ನಾಳಿನಾಸೆಯನಿನ್ನು ತೊರೆಯೆ,
ಕಾಂಬಿನಂ ಕೋರಿಕೆಯ ಮರೆಯೆ-
ಬೆಳಕಿಗೆಂದಿರುಳಲ್ಲಿ ತೆರೆಯೆ
ಕಿಟಿಕಿ ಗಾಳಿಯನೀಸದೆ? ೧೨೮
*****
೧ ನಂದಿಸೆ
೨ ಅಚ್ಚಿ=ಕಣ್ಣು (ಅಕ್ಷಿ)
೩ ಚೆನ್ನೆ=ಚೆನ್ನೆಮಣೆ, ಎಕ್ಕಡಿ ಎಂದರೆ ಕವಡಿಗಳಿಂದ ಆಡುವ ಇನ್ನೊಂದು ಬಗೆಯ ಆಟದ ಮಣೆ
೪ ಆಟಕಾಡಂಜಿ’ ಎಂದರೆ ಕರ್ಕಾಟಕ (ಆಟಿ) ಮಾಸದಲ್ಲಿ ತುಳುನಾಡಿನ ಹಳ್ಳಿಗಳಲ್ಲಿ ಮನೆ
ಮನೆಗೆ ಕೊಂಡೊಯ್ದು ಕುಣಿಸುವ ಒಂದು ಬಗೆಯ ವೇಷ (ತುಳು ‘ಕೊಡಂಜಿ’=ತಮಿಳು
‘ಕೊಳಂದೆ’..?)
೫ ಕಣ್ಣು ಮುಚ್ಚಿಕೆಯಾಟ
೬ ಕೆತ್ತು=ಅದುರು
೭ ಅರಳು=ಅರಳಕ್ಕಿ
೮ `ಎಕ್ಕಡಿ’ ಎಂದರೆ ಕವಡಿಗಳಿಂದ ಆಡುವ ಒಂದು ಬಗೆಯ ಅಟದಮಣೆ, ಅದರಲ್ಲಿ ನಾಲ್ಕು ಕಳಗಳಿವೆ, ಅವಕ್ಕೆ ನಾಲ್ಕು ಬಾಗಲುಗಳೆನ್ನುವರು
೯ ಜೋಗಿಯೆಂದರೆ ಸಿಂಹಮಾಸದಲ್ಲಿ ತುಳುನಾಡಿನ ಹಳ್ಳಿಗಳಲ್ಲಿ ಮನೆಮನೆಗಳಿಗೆ ಕೊಂಡು ಹೋಗಿ ಆಡಿಸುವ ಒಂದು ವೇಷ
೧೦ ಸೋಣ (ಶ್ರಾವಣ)=ಸಿಂಹಮಾಸ
೧೧ ಏತ=ಯಾತ (picotta)
೧೨ ಹರೆ=ಮುಂಜಾನೆ
೧೩ ಏತದಲ್ಲಿ ನೀರನ್ನು ಎತ್ತುವ ಪಾತ್ರ