ನಾನು ಸಾರಿಗೆ ಸಂಸ್ಥೆಯಲ್ಲಿ ೩೦ ವರ್‍ಷಗಳಷ್ಟು ಸೇವೆ ಮಾಡಿದೆ. ನನ್ನ ಅನುಭವದಲ್ಲಿ ನಮ್ಮ ಚಾಲಕ ನಿರ್‍ವಾಹಕರು ಭಲೇ ಗ್ರೇಟ್. ಹಗಲು ಇರುಳು ಅವರು ಶ್ರಮಿಸಿ ಪ್ರಯಾಣಿಕರಿಗೆ, ಸಂಸ್ಥೆಗೆ ಕೀರ್‍ತಿ ತರುವರು. ಅವರ ದುಡಿಮೆ ಸ್ವರ್‍ಗ ಸಮಾನ.
ದಿನಾಂಕ ೦೩-೦೮-೨೦೧೫ ರಂದು ಸೋಮವಾರ ದಿನದಂದು ಬೆಳಗಿನ ಜಾವ ೪ ಗಂಟೆಯಲ್ಲಿ ಜರುಗಿದ ಹೃದಯ ವಿದ್ರಾವಕ ಘಟನೆಯು ೩೫ ಜನ ಪ್ರಯಾಣಿಕರನ್ನು ಸುಹಾಸ್ ಸುಖಾಸೀನ ಬಸ್‌ನ್ನು ಸುರಕ್ಷಿತವಾಗಿ ಎಡಗಡೆಗೆ ನಿಲ್ಲಿಸುವಲ್ಲಿ ಬಸ್ ಚಾಲಕ ಅಬ್ದುಲ್ ಕೆ. ಕೊಟ್ನಾಳ್ ವಯಸ್ಸು ೩೯ ಇವರ ಸಮಯ ಪ್ರಜ್ಞೆಯನ್ನು ಎಂಥಾದರೂ ಮೆಚ್ಚಲೇಬೇಕು!
ಹೌದು! ಸಾರಿಗೆ ಸಂಸ್ಥೆಯ ಬಸ್ ಚಾಲಕ ತಾನು ಸಾವಿನ ದವಡೆಯಲ್ಲಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಮೇಲೆ ಮೃತಪಟ್ಟ ಕರುಣಾ ಜನಕವಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮ್ಯಾದನೇರಿ ಕ್ರಾಸ್ ಕುಷ್ಟಗಿ ಕೊಪ್ಪಳ ಜಿಲ್ಲೆಯಲ್ಲಿ ಜರುಗಿದೆ.
ವಿಜಯಪುರ ಜಿಲ್ಲೆ ಇಂಡಿ ಡಿಪೋದ ವಾಹನವು ಬೆಂಗಳೂರಿನಿಂದ ಇಂಡಿಗೆ ಹೋಗುತ್ತಿತ್ತು. ಚಾಲಕ ಹೃದಯಾಘಾತಕ್ಕೆ ಒಳಗಾದ ನಂತರವೂ ಬಸ್ ಚಲಿಸುತ್ತಿತ್ತು! ವೇಗದೂತ ಬಸ್ ವೇಗವಾಗಿ ಚಲಿಸುತ್ತಿತ್ತು ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿಯಾಗಿ ಚಲಿಸತೊಡಗಿತು. ಬಸ್ಸಿನಲ್ಲಿದ್ದವರು ಗಾಬರಿಬಿದ್ದು ಎದ್ದು ಕುಳಿತರು. ಚಾಲಕನ ಕ್ಯಾಬಿನ್ ಚಿಲಕವಾಕಿತ್ತು! ಏನೆಂದು ನೋಡುವಷ್ಟರಲ್ಲಿ ಬಸ್ ಜಮೀನಿನಲ್ಲಿ ಹೋಗಿ ನಿಂತಿತು! ಚಾಲಕನ ಉಸಿರು ನಿಂತು ಹೋಗಿತ್ತು!
ಇದನ್ನೆಲ್ಲ ಪ್ರಥಮ ವರ್‍ತಮಾನವಾಗಿ ಕುಷ್ಟಗಿ ಡಿಪೋ ಮ್ಯಾನೇಜರ್ ಮಂಜುನಾಥ್ ಸಾರಿಗೆ ನಿಯಂತ್ರಕ ಕಾಸೀಂಸಾಬ್ ಕಾಯಿಗಡ್ಡೆ ವರದಿ ಮಾಡಿರುವರಲ್ಲದೆ, ಪ್ರಯಾಣಿಕರನ್ನು ಮುಂದಿನ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಲ್ಲದೆ, ಹೆದ್ದಾರಿಯ ಟೋಲ್‌ಗೇಟ್ ಅಂಬುಲೆನ್ಸ್ ಮೂಲಕ ಚಾಲಕನ ಮೃತ ದೇಹವನ್ನು ಕುಷ್ಟಗಿ ಸರ್‍ಕಾರಿ ಆಸ್ಪತ್ರೆಗೆ ಕಳಿಸಿರುವರು.
ಇದನ್ನೆಲ್ಲ ನೋಡಿದಾಗ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಗ್ರೇಟ್ ಅಲ್ಲವೇ? ನಾವು ನೀವು ಚಾಲಕರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ??
*****