ನನ್ನ ಹರೆಯದ ಆ ದಿನಗಳಲ್ಲಿ
ಅವಳತ್ತ ಗಂಡೊಂದು ಸುಳಿದರೆ,
ಪ್ರೀತಿಸುತ್ತಿದ್ದಾನೆ ಅನ್ನಿಸಿ
ಭಯ ದ್ವೇಷ ಉಕ್ಕಿ ತಲ್ಲಣಿಸುತ್ತಿದ್ದೆ.
ನೋಡಿಯೂ ಅವಳತ್ತ ತಿರುಗದೆ
ದಾಟಿ ಹೋದರೆ ಅವನು ‘ಅಯ್ಯೋ
ಘೋರ ಅಪರಾಧ’ ಎಂದೆನ್ನಿಸಿ
ಒಳಗೊಳಗೆ ಒದ್ದಾಡುತ್ತಿದ್ದೆ.
ಆ ಮುಂದೆ ನಾ ಬರೆದೆ ಮುಡಿದೆ,
ಈಗ ಬಿಳಿಕೂದಲಾಗಿರುವೆ,
ಕನಸುವೆನು ಆಗೀಗ ಹೀಗೆ :
ಆ ಬಿಂಬ ಮಿಡಿದ ಚಿಂತನೆಯ
ಎತ್ತಿರುವೆ ಎಂಥ ನೆಲೆಗೆಂದರೆ
ಬರಲಿರುವ ಕಾಲ ಹೇಳೀತು,
‘ಆ ಕಾಯ ಎಂಥದೆಂದೀತ
ನೆರಳಿಸಿದ ಕನ್ನಡಿಯ ಒಳಗೆ’.
ಪ್ರಾಯದವನಿದ್ದಾಗ ನಾನು
ಅವಳಿಗೂ ಕೂಡ ಬಿಸಿರಕ್ತ
ಮುಗಿಲಲ್ಲಿ ನಡೆದಳೆನ್ನಿಸುವ
ಹೆಮ್ಮೆ ಸುಮ್ಮಾನಗಳ ಚಿತ್ರ,
ಹೋಮರ್ ಹಾಡಿದ ಹೆಣ್ಣು ಇವಳು- ಎಂದೇ
ಅವಳ ಧ್ಯಾನದಲ್ಲಾದ ಬಾಳು ಬರೆಹ
ಧೀರೋದಾತ್ತವಾದ ಸ್ವಪ್ನದಂತೆ
ತೋರುವುವು ಹೊರಳಿ ಕಂಡಾಗ
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಹೋಮರ್ ಕ್ರಿ.ಪೂ. ೯೦೦ರಲ್ಲಿ ಇದ್ದನೆನ್ನಲಾದ ಗ್ರೀಕರ ಆದಿಕವಿ ಮತ್ತು ಮಹಾಕವಿ. ಇಲಿಯಡ್ ಮತ್ತು ಒಡಿಸ್ಸಿ ಎಂಬ ಮಹಾಕಾವ್ಯಗಳನ್ನು ಬರೆದಿದ್ದಾನೆ. ಅವನ ಇಲಿಯಡ್ ಕಾವ್ಯದ ನಾಯಕಿ ಹೆಲೆನ್ ಅಪೂರ್‍ವ ಚೆಲುವೆ. ಇಲ್ಲಿ ಮಾಡ್‌ಗಾನಳನ್ನು ಹೆಲೆನ್ನಳ ಜೊತೆ
ಸಮೀಕರಿಸಲಾಗಿದೆ.