ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ-
ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ-
ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ
ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ
ತರಿವ ಮೂಡಲಗಾಳಿ, ಹಸಿರು ಬಯಲಿಗೆ ತರುತ-
ಲಿರುವ ಪಡುವಲ ಗಾಳಿ, ಹಾಳಿಹದ್ದುಗಳಂತೆ
ತೀಡುತಿರುವದ ನೋಡುವೆನು. ನೀರು ನೆಲದಲ್ಲಿ
ಬೆದೆಗೊಳುವ ಬೀಜಗಳ ಕಾಂಬೆ; ಮರೆವೆನು ನಿನ್ನ.
ನುಡಿಸುತಿರು ಏಕನಾದವ ಗುರುವೆ! ಜೀವಲಹ-
ರಿಯ ಭೇದ ಒಡೆದು ಕಾಣಲಿ, ಅಭೇದದ ಕಟ್ಟ-
ಡವು ಇಟ್ಟಳಿಸಿ ಬರಲಿ, ಭೂತ ಜಾತದ ವೇದ
ತುದಿಕಳಿಸಿ ನಾಲಗೆಗೆ ಇಮ್ಮು ಚಿಮ್ಮಲಿ. ಶರಣು
ಗುರುಪಾದ, ಜಯ ಪರಾಕು! ಹಸಾದ! ಗತಿಯೆನಗೆ
ನಿನ್ನ ಶ್ರುತಿಯ ವಿಡಾಯ. ನೀನು ಮರೆವುದೆ ನನ್ನ?
*****