ಬೀಡಿ ಸೇದುವ ಸಂಸ್ಕೃತಿ

ಬೀಡಿ ಸೇದುವ ಸಂಸ್ಕೃತಿ

ಸಣ್ಣ ಮಕ್ಕಳು ಬೀಡಿ ಸೇದಬಾರದು. ಬೀಡಿ ಸೇದುವದೊಂದು ವ್ಯಸನವು ಇಂಥ ವ್ಯಸನಕ್ಕೆ ಬಲಿಬಿದ್ದು ತಮ್ಮ ಶೀಲ ಕೆಡಿಸಿಕೊಳ್ಳಬಾರದು. ಮುಂತಾದ ವ್ಯಾಖ್ಯಾನವನ್ನು ನಾನು ಬಹಳ ಜನರ ಬಾಯಿಂದ ಕೇಳಿದ್ದೇನೆ. ನನ್ನ ಮತವಾದರೂ ಹಾಗೆ ಇದ್ದುದರಿಂದ ಈ ಉಪದೇಶಾಮೃತದಿಂದ ನನಗೆ ಸಿಟ್ಟು ಬರಲಿಲ್ಲ. ಆದರೆ ನನ್ನ ಕಾರ್ಯ ಬಾಹುಲ್ಯದ ಮೂಲಕ ನಾನು ನಾಲ್ಕು ಜನರಲ್ಲಿ ಅಡ್ಡಾಡಹತ್ತಿದ ಮೇಲೆ, ಸಾವಕಾಶವಾಗಿ ನನ್ನ ಭ್ರಮವು ದೂರಾಗಹತ್ತಿತು ಮತ್ತು ಬೀಡಿ ಸೇದುವದರಿಂದ ಅನೇಕ ಲಾಭಗಳು ನನಗೆ ಕ್ರಮವಾಗಿ ತಿಳಿಯಹತ್ತಿದವು. ಇಷ್ಟೇ ಅಲ್ಲ ಬೀಡಿ ಸೀದುವಂಥ ಸಣ್ಣ ಪುಟ್ಟ ವ್ಯಸನಗಳನ್ನು ಸಮಾಜದಲ್ಲಿ ರೂಢಿ ಮಾಡಿದ ಮಹಾತ್ಮರು ಒಂದು ಬಗೆಯ ಸಂಸ್ಕೃತಿಯನ್ನೆ ನಿರ್ಮಿಸಿದರೆಂದು ನನ್ನ ತಿಳಿವಳಿಕೆಯಾಯಿತು.

ಸಣ್ಣ ವಯಸ್ಸಿನಲ್ಲಿಯೇ ಮನುಷ್ಯನ ಶೀಲ ಸ್ವಭಾವಗಳ ವಿಕಾಸವಾಗುತ್ತದೆ. ಅಂಥ ವಯಸ್ಸಿನಲ್ಲಿ ಅತನಿಗೆ ಪರೋಪಕಾರ ಮಾಡಲಿಕ್ಕೆ ಅವಕಾಶ ಕೊಟ್ಟು ಅದರ ಅಭ್ಯಾಸವನ್ನು ಕಲಿಸಬೇಕಾಗುತ್ತದೆ. ತಮ್ಮ ಕಡೆಗೆ ಇದ್ದ ಒಂದು ಲವಂಗೀ ಬೀಡಿಯನ್ನು ತಮ್ಮ ನೆರೆಯವರಿಗೆ ಕೊಡುವದು ಅಥವಾ ಒಂದು ನಿಮಿಷ ಮಾತ್ರವೇಕಾಗಲೊಲ್ಲದು ತಮ್ಮ ಬೆಂಕಿ ಪೆಟ್ಟಿಗೆಯನ್ನು ಆತನ ಉಪಯೋಗಕ್ಕಾಗಿ ಕೊಡುವದು, ಇಲ್ಲವೇ ತಮ್ಮ ಬೀಡಿಯನ್ನು ಹೊತ್ತಿಸುವ ಸಲುವಾಗಿ ಕೊರೆದ ಕಡ್ಡಿಯನ್ನು ಆರಿಸುವ ಮೊದಲು ನೆರೆಯವನ ಬಾಯಿಯಲ್ಲಿಯ ಬೀಡಿಯ ಮುಂದೆ ಹಿಡಿಯುವದು, ಮುಂತಾದ ಕೃತಿಗಳು ಸಣ್ಣವಾಗಿಯೇ ಕಾಣಿಸುವವು. ಆದರೆ ಸ್ಪಲ್ಪ ವಿಚಾರ ಮಾಡಿದರೆ ಮನುಷ್ಯನ ಪರೋಪಕಾರ ವೃತ್ತಿಯ ವಿಕಾಸವಾಗಲಿಕ್ಕೆ ಇವುಗಳ ಉಪಯೋಗವು ಹೆಚ್ಚಾಗಿ ಇದ್ದುದ ಕಂಡು ಬರುವದು.

ದೇಶಾಟನ ಮಾಡಿದ್ದರಿಂದ ಆಗುವ ಲಾಭಗಳನ್ನು ಕವಿಯು ಕೆಳಗಿನಂತೆ ತೋರಿಸಿರುವನು. “ದೇಶಸಂಚಾರಗಳಿಂದ ಪಂಡಿತರ ಸಂದರ್ಶನ, ಆಲ್ಲಲ್ಲಿ ಹೊಸ ಹೊಸ ವಿಷಯಗಳ ಪರಿಚಯವಾಗಿ ಮನುಷ್ಯನು ಬುದ್ಧಿವಂತನಾಗಿ, ಜ್ಞಾನವೃದ್ಧಿಯಾಗುವದು.”

ಕವಿಯ ಈ ಹೇಳಿಕೆಯನ್ನು ನಾವಾದರೂ ಒಪ್ಪುತ್ತೇವೆ. ಆದರೆ ಮೋಟಾರಿನಲ್ಲಿ ಅಧವಾ ಉಗಿಬಂಡಿಯಲ್ಲಿ ಪ್ರವಾಸ ಮಾಡುವಾಗ್ಗೆ ಸುಮ್ಮನೆ ಖಿಡಕಿಯಲ್ಲಿ ಮೋರೆ ಹಾಕಿ ಬೈಲು ಭೂಮಿಯ ಕಡೆಗೆ ಅಧವಾ ಮುಗಿಲ ಕಡೆಗೆ ಶೂನ್ಯ ದೃಷ್ಟಿಯಿಂದ ನೋಡುತ್ತ ಕುಳಿತ ಗೃಹಸ್ತರಿಗೆ ಕವಿಯ ಮೇಲೆ ವರ್ಣಿಸಿದ ಪ್ರವಾಸದ ಲಾಭಗಳು ದೊರಕುವದೆಂತು? ಅಂಥವರಿಗೆ ಜನರ ಪರಿಚಯವಾದರೂ ಹೇಗಾಗಬೇಕು? ಪರಿಚಯ ಮಾಡಿಕೊಳ್ಳಬೇಕೆಂಬ ಇದಿರಿನಲ್ಲಿ ಕುಳಿತ ಗೃಹಸ್ಥನಿಗೆ “ತಾವು ಯಾರು? ಎಲ್ಲಿ ಹೊರಟಿರಿ? ಎಲ್ಲಿಯವರು? ಯಾಕೆ ಹೊರಟಿರಿ ? ಮುಂತಾದ ಪ್ರಶ್ನೆಗಳನ್ನು ಸುರಿಸಿದರೆ ಆತನ ಪರಿಚಯವಾಗುವ ಬದಲು ಇಲ್ಲದ ಉಸಾಬರಿ ಮಾಡಿದ ಬಗ್ಗೆ ಮೊಸಡಿಯ ಪೂಜೆಯಾಗುವ ಸಂಭವವು ಹೆಚ್ಚು. ಇಂಥ ಗೊಡವೆಗೆ ಹೋಗದೆ, ಕಿಸೆಯೊಳಗಿಂದ ಎರಡು ಬೀಡಿ ತೆಗೆದು ಒಂದನ್ನು ತಮ್ಮ ಬಾಯಲ್ಲಿ ಇಟ್ಟುಕೊಳ್ಳಬೇಕು ಮತ್ತೊಂದನ್ನು ಆತನಿಗೆ ಕೊಡಬೇಕು. ಅದನ್ನು ಅವನು ಮುಗುಳು ನಗೆಯಿಂದ ಸ್ವೀಕರಿಸಿದರೆ ನಮ್ಮ ಕೆಲಸ ಸಾಧಿಸಿತೆಂದು ತಿಳಕೊಳ್ಳಬೇಕು. ಬೀಡಿ ತಕ್ಕೊಳ್ಳದಿದ್ದರೆ ಕನಿಷ್ಟ ಪಕ್ಷಕ್ಕೆ ಆ ಗೃಹಸ್ಥನು ಆಭಾರ ಪ್ರದರ್ಶನವನ್ನಾದರೂ ಮಾಡುವನು. ಅದನ್ನೂ ಮಾಡದಿದ್ದರೆ ಕಡೆಗೆ ಇರುಕಳ ಎಮ್ಮೆಯಂತೆ ಮೈ ಮೇಲಾದರೂ ಬರಲಿಕ್ಕಿಲ್ಲ. ಇಂಥ ಪ್ರಸಂಗದಲ್ಲಿ ಆತನ ಬಣ್ಣ ತಿಳಿದು ಹರಟೆ ಪ್ರಾರಂಭಿಸಲು ಅಡ್ಡಿ ಇಲ್ಲ. ಈ ರೀತಿಯಿಂದ ವಿದ್ವನ್‌ ಮಣಿಗಳ ಕೂಡ ಸಂಭಾಷಣೆಯಾಗಿ ಮನುಷ್ಯನಿಗೆ ಜ್ಞಾನ ಪ್ರಾಪ್ತಿಯಾಗುತ್ತದೆ.

ಇತ್ತೀಚೆಗೆ ಸಮಾಜ ರಚನೆಯ ಬಗ್ಗೆ ಜನರ ವಿಚಾರಗಳಲ್ಲಿ ಬಹಳ ವೇಗದಿಂದ ಬದಲಾವಣೆಯಾಗಹತ್ತಿದೆ. ಸಮಾಜದಲ್ಲಿ ಉಚ್ಚ, ನೀಚ ಭಾವಗಳ ನಾಮಾವಶೆಷವಾಗಬೇಕು. ಇಷ್ಟೇ ಅಲ್ಲ ವೃದ್ಧರು, ತರುಣರು, ಗಂಡಸರು, ಹೆಂಗಸರು ಬಡವರು ಶ್ರೀಮಂತರು ಎಂಬ ಭೇದ ಭಾವಗಳು ಸಹ ಜನರಿಗೆ ಗ್ರಾಮ್ಯವೆನಿಸಹತ್ತಿವೆ. ಈ ಆಧುನಿಕ ವಿಶ್ವದಲ್ಲಿ ಮೇಲೆ ಹೇಳಿದ ಭೇದ ಭಾವಗಳನ್ನು ನಷ್ಟ ಮಾಡಲಿಕ್ಕೆ ಬೀಡಿ, ಬೆಂಕಿಪೆಟ್ಟಿಗೆಯ ಸಂಗಮದಂಥ ಬೇರೆ ರಾಮಬಾಣ ಉಪಾಯವು ಎಲ್ಲಿಯೂ ಸಿಗಲಾರದು. ಕೇವಲ ಅಮೃತಪಾನ ಮಾಡಿ ಉದರ ನಿರ್ವಾಹಮಾಡುವ ಇಂದ್ರಲೋಕದಲ್ಲಿಯ ದೇವತೆಗಳಲ್ಲಿಯೂ ಸಹ ಭೇದ ಭಾವಗಳಿರಬಹುದು. ಆದರೆ ಬೀಡಿಸೇದುವ ಆ ಮಾನವರಲ್ಲಿ ಆ ಭೇದ ಭಾವವು ಕಾಣಲಿಕ್ಕಿಲ್ಲ. ಯಾರು ಬೇಕಾದವರು ಬೇಕಾದವರ ಕಡೆಯಿಂದ ಬೀಡಿ ತಕ್ಕೊಳ್ಳಬಹುದು. ಮತ್ತು ಬೇಕಾದವರಿಗೆ ಕೊಡಬಹುದು. ಬೀಡಿ ಸೇದಲಿಕ್ಕೆ ಅಥವಾ ಹೊಗೆ ಬಿಡಲಿಕ್ಕೆ ಯಾವ ಸ್ಥಳದಲ್ಲಿಯೂ ಅಥವಾ ವೇಳೆಯಲ್ಲಿಯೂ ಅಡ್ಡಿ ಇಲ್ಲ. ಒಂದು ವೇಳೆ ಹಾಗಿದ್ದರೆ ಇರಬಹುದು. ಕೆಲವು ತರುಣರು ಬೀಡಿ ಬೆಂಕಿಪೆಟ್ಟಿಗೆಗಳ ಗೆಳೆತನವನ್ನು ಹೊಸದಾಗಿ ಮಾಡಿಕೊಳ್ಳುವಾಗ ಹಿರಿಯರಿಗೆ ಹೆದರುವರು. ಸಾಧಾರಣವಾಗಿ ಅವರು ಅನಾರೋಗ್ಯಕರವಾದ ಸ್ಥಳದಲ್ಲಿ ಬೀಡಿ ಬೆಂಕಿಪೆಟ್ಟಿಗೆಗಳ ಪ್ರಥಮಭೆಟ್ಟಿಯನ್ನು ತಕ್ಕೊಳ್ಳುತ್ತಾರೆ. ಆದರೆ ಅಂಥ ಹಿರಿಯರಿಗೆ ಅಥವಾ ಅವರಿಗೆ ಅಂಜುವ ತರುಣರಿಗೆ ಒಂದು ವೇಳೆ ಈ ಹೊಸ ಸಂಸ್ಕೃತಿಯ ಮಹತ್ವವು ತಿಳಿಯಿತೆಂದರೆ ಈ ಭೇದ ಭಾವವೂ ಅಥವಾ ಈ ಭೀತಿಯು ತನ್ನಷ್ಟಕ್ಕೆ ತಾನೇ ಕಮರಿ ಹೋಗುವದು.

‘ಜ್ಞಾನಭಾಂಡಾರ’ವೆಂದು ವಿಚಾರ ಮಾಡಲಾಗಿ ಒಂದೇ ಒಂದು ಬೀಡಿಯಲ್ಲಿ ಜ್ಞಾನವು ತುಂಬಿಕೊಂಡಿದುದು ಕಂಡುಬರುವದು. ಮಧ್ಯ ಪ್ರಾಂತದಲ್ಲಿರುವ ಗೊಂಡಿಯಾದ ಹತ್ತರದಲ್ಲಿರುವ ಅರಣ್ಯದಿಂದ ಬೀಡಿಎಲೆಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ನಿಪ್ಪಾಣಿ ಭಾಗದೊಳಗಿನ ತಂಬಾಕನ್ನೂ ಕೂಡಿಸಿ ಪುಣೆಯಲ್ಲಿ ಓಣಿ ಓಣಿಗಳಲ್ಲಿ ವಾಸಿಸುವ ಸ್ತ್ರೀ ಪ್ರರುಷರ ಕಡೆಯಿಂದ ಸಣ್ಣ ದೊಡ್ಡ ಬೀಡಿಗಳನ್ನು ಕಟ್ಟಿಸಿ ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟು, ಅವುಗಳನ್ನು ದೊಡ್ಡ ದೊಡ್ಡ ಶಹರ ಪಟ್ಟಣಗಳಲ್ಲಿ ಮಾರಲು ಬೇಕಾಗುವ ಶಾರೀರಕ ಶ್ರಮವು ದುಡ್ಡು, ಸಂಘಟನೆ ಮುಂತಾದವುಗಳನ್ನು ವಿಚಾರ ಮಾಡಿ ನೋಡಿದರೆ, ನಾವು ಚಿಕ್ಕಂದಿನಲ್ಲಿ ಓದಿದ ನಿಸ್ಮಯಕಾರಕ ಕಡಬಿನ ಕಥೆಯ ‘Wonderful Pudding’ ನೆನಪಾಗುತ್ತದೆ.

ಇಷ್ಟರ ಮೇಲೆಯೇ ಬೀಡಿಯ ಮಹತ್ವವು ತೀರುವಂತಿಲ್ಲ. ಆರ್ಥಿಕ, ವ್ಯಾವಹಾರಿಕ, ಮತ್ತು ಮುಖ್ಯವಾಗಿ ಸಾಂಸ್ಕೃತಿಕ ದೃಷ್ಟಿಯಿಂದಾಗುವ ಬೀಡಿಯ ಲಾಭವನ್ನು ನಾವು ಹೇಳಿದೆವು. ಇನ್ನು ಕಲೆಯ ದೃಷ್ಟಿಯಿಂದ ಸಹ ನಾವು ಬೀಡಿಯ ವಿಚಾರ ಮಾಡಬಹುದು.

ಕಿಸೆಯೊಳಗಿಂದ ಬೀಡಿಯನ್ನು ತೆಗೆದು ಬಾಯಲ್ಲಿಟ್ಟು ಕೊಳ್ಳುವದು ಒಂದು ಸಣ್ಣ ಕೆಲಸವಾದರೂ ಬೀಡಿಯನ್ನು ತುಟಿಯಲ್ಲಿ ಹೇಗಿಟ್ಟು ಕೊಳ್ಳಬೇಕು, ಎಡಗಡೆ ಮೂಲೆಯಲ್ಲಿಟ್ಟುಕೊಳ್ಳಬೇಕೋ? ಬಲಗಡೆಯ ಮೂಲೆಯಲ್ಲಿಟ್ಟುಕೊಳ್ಳಬೇಕೊ, ಬಾಯಲ್ಲಿ ಬೀಡಿಯನ್ನಿಟ್ಟು ಕೊಂಡು ಮಾತಾಡಲಿಕ್ಕೆ ಬರುವಷ್ಟು ಹಗುರಾಗಿ ಹಿಡಿಯಬೇಕೊ, ಅಥವಾ ಗಟ್ಟಿಯಾಗಿ ಹಿಡಿಯಬೇಕೊ ಇತ್ಯಾದಿ ವಿಷಯಗಳಲ್ಲಿ ಕೌಶಲ್ಯವು ಉಂಟು. ಕಲೆಯೂ ಉಂಟು. ಬಾಯಿಯಲ್ಲಿ ಬೀಡಿ ಹಿಡಿಯುವ ಠೀವಿಯ ಮೇಲಿಂದ ಆ ಮನುಷ್ಯನ ಭಾವ ಪರೀಕ್ಷೆಯನ್ನಾದರೂ ಒಮ್ಮೊಮ್ಮೆ ಮಾಡಲಿಕ್ಕೆ ಬರುವದು. ಅದೇ ಪ್ರಕಾರ ಹೊಗೆಬಿಡುವದಾದರೂ ಕೂಡ ಒಂದು ವಿಷಯವಾಗಿದೆ. ಒಮ್ಮೆಲೇ ಹೊಗೆಯ ತುತ್ತನ್ನು ಹೊರಗೆ ಬಿಟ್ಟು ಎಲ್ಲರ ತಲೆಯ ಮೇಲೆ ಹೊಗೆಯ ಮೋಡನ್ನು ಕವಿಸುವದು. ಅಥವಾ ನಿಲ್ದಾಣದಿಂದ ಹೊರಡುವ ತಯಾರಿಯಲ್ಲಿದ್ದ ಉಗೆ ಬಂಡಿಯ ಇಂಜನ್‌ದಂತೆ ಭುಸ್‌, ಭುಸ್‌, ಹೀಗೆ ಸ್ಪರ ತೆಗೆಯುತ್ತ ಸ್ವಲ್ಪು ಸ್ವಲ್ಪೇ ಹೊಗೆ ಬಿಡುವದು, ಅಥವಾ ಬಾಯಲ್ಲಿ ಸ್ವಲ್ಪು ಸ್ವಲ್ಪೇ ಹೊಗೆ ತಕ್ಕೊಂಡು ಅದನ್ನೇ ಕಲ್ಲು ಸಕ್ಕರೆಯ ಹರಳಿನಂತೆ ಬಹಳ ಹೊತ್ತಿನವರೆಗೆ ಇಟ್ಟು ಕೊಳ್ಳುವದು. ಇವೆಲ್ಲ ಕಲಾಕೃತಿಗಳು. ಮತ್ತು ಇದರಿಂದ ಬೀಡಿ ಭಕ್ತರು ಹೇಗೆ ಬರಬರುತ್ತ ಕಲೋಪಾಸಕರಾಗುತ್ತಾರೆಂಬುದನ್ನು ನಮ್ಮ ನಿದರ್ಶನಕ್ಕೆ
ತಂಡು ಕೊಡುತ್ತವೆ.

ಬೀಡಿ ಸೇದುವ ಅಭ್ಯಾಸವಿತ್ತೆಂದರೆ ಒಮ್ಮೊಮ್ಮೆ ಬೀಡಿ ಚುಂಬನ ಉದ್ಭವಿಸುತ್ತದೆ. ನಮ್ಮ ಮುಂದೆ ಒಬ್ಬ ಗೃಹಸ್ಥನು ಬೀಡಿ ಸೇದುತ್ತ ಕುಳಿತಿರುವನೆಂದು ಕಲ್ಪಿಸುವಾ. ಅದನ್ನು ನೋಡಿ ನಮಗೂ ಕೂಡ ಬೀಡಿ ಸೇದುವ ನೆನಪಾಗುತ್ತದೆ. ಕೂಡಲೆ ಕಿಸೆಯೊಳಗಿಂದ ಒಂದು ಬೀಡಿ ತೆಗೆಯುವೆವು. ಆದರೆ ದುರ್ದೈವದಿಂದ ನಮಲ್ಲಿ ಕಡ್ಡಿ ಇರಬಾರದು. ಅಥವಾ ನಮಗೆ ತಿಳಿಯದೆ ನಮ್ಮ ಪೆಟ್ಟಿಗೆಯು ಖಾಲಿಯಾಗಿರಬೇಕು ಇಂಥ ದುರ್ಧರೆ ಪ್ರಸಂಗದಲ್ಲಿ ನಾವು ನಮ್ಮ ಸುತ್ತಮುತ್ತು ನೋಡಹತ್ತುವೆವು. ನಮ್ಮ ಹಾವ ಭಾವಗಳನ್ನು, ನೋಡಿ ನಮಗೊದಗಿದ ಸಂಕಟ ಪ್ರಸಂಗವನ್ನು ಇದರಿನಲ್ಲಿ ಕುಳಿತ ಭಕ್ತನು ಕೂಡಲೇ ಕಂಡುಹಿಡಿಯುವನು. ನಿತ್ಯದ ಪರೋಪಕಾರ ವೃತ್ತಿಗನುಸಾರವಾಗಿ ಆ ಗೃಹಸ್ತನು ತನ್ನಬೆಂಕಿ ಪೆಟ್ಟಿಗೆಯನ್ನು ನಮಗೆ ಕೊಡ ಬೇಕೆಂದು ಹುಡುಕಹತ್ತುವನು. ಅದು ಅವನಿಗೆ ಸಿಗುವದಿಲ್ಲ. ಸಿಕ್ಕರೂ ಅದರಲ್ಲಿ ಕಡ್ಡಿ ಗಳಿಲ್ಲವೆಂದು ತಿಳಿಯೋಣ, ಇಂಥ ಬಿಕ್ಕಟ್ಟಿನ ಪ್ರಸಂಗದಲ್ಲಿ ನಮ್ಮನ್ನು ಎಳ್ಳಷ್ಟೂ ಎದೆಗುಂದಿಸದೆ ಯಾರ ಬಾಯಲ್ಲಿ ಹೊತ್ತಿದ ಬೀಡಿ ಇರುವದೋ, ಆ ಗೃಹಸ್ಥನು ಪ್ರೇಮದಿಂದ ಬಾಗಿ ಮೋರೆ ಮುಂದಕ್ಕೆ ಮಾಡುವನು. ಆ ವೇಳೆಗೆ ನಾವಾದರೂ ನಮ್ಮ ಬಾಯಲ್ಲಿ ಹೊತ್ತದೆ ಇದ್ದ ಬೀಡಿಯನ್ನಿಟ್ಟು ಕೊಂಡು ಅಂತ್ಯಂತ ಆದರದಿಂದ ಬಾಗುವೆವು. ಈ ಕ್ರಿಯೆಯಲ್ಲಿ ಎರಡು ಬೀಡಿಗಳ ತಲೆಗಳು ಒಂದಾಗುವವು ಮತ್ತು ಇಬ್ಬರೂ ಒಂದೇ ವೇಳೆಯಲ್ಲಿ ಶ್ವಾಸ ಜಗ್ಗಿದರೆ ಐದಾರು ಸೆಕೆಂಡುಗಳಲ್ಲಿ ನಿರ್ಜೀವನಾದ ಬೀಡಿಯು ಸಜೀವವಾಗುವದು ಮುಂದೆ ಎರಡೂ ಬಾಯಿಯೊಳಗಿಂದ ಹೊಗೆಯು ಹಾಯಹತ್ತುವದು. ಈ ರೀತಿ ಬೀಡಿ ಹೊತ್ತಿಸುವದಕ್ಕೆ ನಾವು ಬೀಡಿ ಚುಂಬನವೆಂದು ಕರೆಯುವೆವು. ಇದರಲ್ಲೇನು ತಪ್ಪು.

ಇನ್ನು ಬೇಕಾದಂಥ ಚಲೋ ಪದಾರ್ಥಕ್ಕೂ ಹೆಸರಿಡುವ ಸರ್ವಜ್ಞರು ಜಗತ್ತಿನಲ್ಲಿ ಉಂಟು, ಇಂಥ ಜನರು ಬೀಡಿ ಸೇದುವದರ ಕಡೆಗೆ ವಕ್ರದೃಷ್ಟಿಯನ್ನು ಬೀರುವರು. ಅವರು ಯಾವಾಗಲೂ ಮಾಡುವ ತಕರಾರೆಂದರೆ ಬೀಡಿ ಸೇದುವವನು ಬೇಕಾದಾಗ ಬೇಕಾದಲ್ಲಿ ಕೆಮ್ಮುವನು, ಉಗುಳುವನು ಹೊಗೆ ಬಿಡುವನು ಮತ್ತು ತನ್ನ ಈ ಸೊಗಡುತನದಿಂದ ಎರಡನೇಯವರಿಗೆ ತೊಂದರೆ ಆಗಬಹುದೆಂಬ ಕಲ್ಪನೆಯು ಕೂಡಾ ಅವನಿಗೆ ಇರುವದಿಲ್ಲ. ಇಷ್ಟು ಸಂಸ್ಕೃತಿ ಹೀನನಾಗುತ್ತಾನೆ. ಬೀಡಿ ಸೇದುವ ಭಕ್ತರು ಅಲ್ಲಲ್ಲಿ ಬೂದಿ ಚಟಿಕೆ ಹೊಡೆಯುತ್ತ, ಬೇಕಾದಲ್ಲಿ ಬೀಡಿ ಕಡ್ಡಿಗಳನ್ನು ಒಗೆಯುತ್ತ, ಮತ್ತು ಬಾಯೊಳಗಿನ ಹೊಗೆಯಿಂದ ಸುತ್ತಮುತ್ತಲಿನ ಹವೆಯನ್ನು ಕೆಡಿಸುತ್ತ, ಜನರ ಸೋವಿ, ಗೈರಸೋವಿಗಳನ್ನು ಲಕ್ಷಕ್ಕೆ ತಾರದೆ ಜಗತ್ತಿನಲ್ಲಿ ಅಲೆಯುತ್ತಾರೆ. ಇದು ಅವರ ಮೇಲೆ ಹೊರೆಸುನ ಮತ್ತೊಂದು ಆರೋಪ. ಆದರೆ ನಾವು ಮೇಲೆ ಹೇಳಿದಂತೆ ಈ ಕಲಿಯುಗದಲ್ಲಿಯೂ ಕೂಡ ದೇವರಿಗೆ ಹೆಸರಿಡುವವರಿದ್ದಾರೆ. ಅಂದ ಮೇಲೆ ಬೀಡಿ, ಸೇದುವವರ ಮೇಲೆ ಪುಷ್ಪಗಳು ಏರಿದರೆ ಇದರಲ್ಲಿ ಆಶ್ಚರ್ಯವೇನು. ಒಂದು ವೇಳೆ ಬೆಂಕಿ ಕಡ್ಡಿಯು ಹತ್ತಿರವಿದ್ದರೆ ಅದರ ಉಪಯೋಗ ಮಾಡಿ ಪಂಚಪಕ್ವಾನ್ನಗಳ ಭೋಜನವನ್ನು ತಯಾರಿಸಬಹುದು. ಅದರಂತೆ ಅದೇ ಕಡ್ಡಿಯಿಂದ ಮೃತದೇಹ ಸಂಸ್ಕಾರ ಮಾಡಬಹುದು. ಅಥವಾ ಒಬ್ಬರ ಮನೆಗೆ ಹಚ್ಚಲಿಕ್ಕೂ ಬರುವದು, ಇಷ್ಟರ ಮೇಲಿಂದಲೇ ನಾವು ಪದಾರ್ಥ ಯಾವದೇ ಇದ್ದರೂ ಅದು ಉಪಯೋಗ ಮಾಡುವವನ ಮೇಲೆ, ಅದು ಚಲೋ ಅಥವಾ ಕೆಟ್ಟವೆಂಬುದು ಅನಲಂಬಿಸಿರುತ್ತದೆ, ಎಂದು ಉಪದೇಶ ಮಾಡಬಹುದು. ಇದರ ಮೇಲಿಂದ ಹಿಂದು ಮುಂದಿನ ವಿಚಾರ ಮಾಡದೆ ಬೀಡಿ ಸಂಸ್ಕೃತಿಗೆ ಹೆಸರಿಡುವದು ಮೂರ್ಖ ತನದ್ದೆಂದು ತಿಳಿಯಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿರ ಕೆಳಗಾಗಿ ನಡೆಯುವುದೇನು?
Next post ನೀನು ಮರೆವುದೆ ನನ್ನ?

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…