ನನ್ನ ಸಾವು

ನನ್ನ ಸಾವು

ನಾನು ಸತ್ತಿರುವೆನೆಂದು ಜನರು ಅನ್ನುತ್ತಾರೆ. ದುಃಖ ಪಡುತ್ತಾರೆ. ಕೆಲವರು ದುಃಖಬಡುವವರಿಗೆ ಸಮಾಧಾನದ ಮಾತು ಹೇಳುತ್ತಾರೆ. ಹೀಗಿದ್ದರೂ ನಾನು ಸತ್ತಿಲ್ಲ. ಜೀವದಿಂದಿರುವೆನೆಂದು ನನಗೆ ಅನಿಸುವದು. ಬಹು ಜನರ ಮತವು ನಾನು ನಿಜವಾಗಿ ಮೃತಪಟ್ಟನೆಂದು. ಆದರೆ ನನ್ನ ಅನುಭವವು ನಾನು ಮೃತಪಟ್ಟಿಲ್ಲವೆಂದಿರುವದರಿಂದ ಈ ವೃತ್ಯಾಸವು ಹೋಗಿ ಐಕ್ಯಮತ್ಯವಾಗುವ ಬಗೆಯು ತೋರದಂತಾಗಿರುವದು. ನಿಜಸ್ಥಿತಿಯನ್ನು ಹೇಳಿದರೆ ಕೇಳುವರೆಂಬ ಅಶೆಯಿಂದ ನಾಲ್ಕು ಶಬ್ದಗಳನ್ನು ಹೇಳಲುದ್ಯುಕ್ತನಾಗಿರುವೆನು.

ಸ್ವಲ್ಪ ಥಂಡಿಯಾಗಿ ಜ್ವರ ಬಂದವೆಂದು ಮನೆಯಲ್ಲಿ ಮಲಗಿಕೊಂಡೆನು ಜ್ವರವು ಆರಲಿಲ್ಲ. ಉಪಚಾರಗಳು ಹೆಚ್ಚು ಹೆಚ್ಚು ಆದಂತೆ ಬೇನೆಯು, ಬೆಳೆಯುತ್ತ ನಡೆಯಿತು. ಮೈಯಲ್ಲಿ ಜ್ವರವಿದ್ದಾಗ ಗಾಳಿ ತಾಗಿದ್ದರಿಂದ ಕಫ ಉಂಟಾಯಿತು. ವೈದ್ಯರು ಚಿಂತಾಕ್ರಾಂತರಾದರು. ವಿಲಾಯತಿಯ ಔಷದಗಳಿಂದ ಏನೂ ಗುಣಬಾರದ್ದರಿಂದ ಆಯುರ್ವೇದದ ಪಂಡಿತರ ಕಡೆಗೆ ಆಪ್ತೇಷ್ಟರು ಎಡತಾಕಹತ್ತಿದರು. ನನ್ನ ಬೇನೆಯ ಬಗ್ಗೆ ಮಾತಾಡುವದಾದರೆ ಖೋಲಿಯಿಂದ ಹೊರಗೆ ಹೋಗಿ ಸದ್ದು ಮಾಡದೇ ಮಾತಾಡ ಹತ್ತಿದರು. ಜ್ವರದಿಂದಾಗುವ ವಿಕಾರಗಳು ನನ್ನ ಬೆನ್ನು ಬಿಡಲಿಲ್ಲ. ಹಸ್ತಪಾದಗಳಿಗೆ ಪಂಜು ಹಚ್ಚಿದಂತೆ ಅಥವಾ ಕಣ್ಣ ಮುಂದೆ ಸಾವಿರಾರು ವಿದ್ಯು ದೀಪಗಳನ್ನು ಒಮ್ಮೆಲೆ ಬೆಳಗಿದಂತೆ ಅನಿಸಹತ್ತಿತು. ಒಮ್ಮೊಮ್ಮೆ ನಾನು ಮಲಗಿದಲ್ಲಿಯೇ ನನ್ನ ಮೇಲೆ ಅರಳೆಯ ದಿಂಬುಗಳನ್ನಿಟ್ಟಂತೆ ಅನಿಸುವದು. ಕಾರಣ ವಿಲ್ಲದ ನನ್ನ ಮೇಲೆ ದಿಂಬುಗಳನ್ನು ಯಾರು ಇಡುವರು. ಇದು ನನಗೆ ತಿಳಿಯುತ್ತಿದ್ದಿಲ್ಲ. ಅಥವಾ ದಿಂಬುಗಳನ್ನು ಇಡಬೇಡಿರೆಂದು ಹೇಳುವ ಬುದ್ಧಿಯಾದರೂ ತೋಚುತ್ತಿದಿಲ್ಲ. ದಿಂಬುಗಳ ಭಾರವು ಅಸಹ್ಯವಾದಕೂಡಲೆ ನಾನು ಒದರುತ್ತಿದ್ದೆನು. ಆರೈಕೆಗಾಗಿ ನನ್ನ ಹತ್ತರಕೂತ ಜನರು ನನ್ನನ್ನು ಎಚ್ಚರಿಸಿದ ಮೇಲೆ ಚೀರಾಟವು ನಿಲ್ಲುತ್ತಿತ್ತು. ಸ್ವಲ್ಪ ಸಮಯದಲ್ಲಿಯೇ ಮತ್ತೆ ಸ್ಮೃತಿ ತಪ್ಪಿ ಬೇರೊಂದು ತರದ ಮಾಯಾ ತರಂಗವು ಮನಸ್ಸಿನಲ್ಲಿ ಹುಟ್ಟುತ್ತಿತ್ತು. ಮಂಚದ ಮೇಲೆ ಬಿದ್ದ ದೇಹವು ತನ್ನಿಂದ ತಾನೆ ಎದ್ದು ಆಂತರಾಳದಲ್ಲಿ ಸಂಚರಿಸಿದಂತೆ ಅನಿಸುವದು. ಸಂಚರಿಸುತ್ತ ಗಿಮಿ ಗಿಮಿ ತಿರುಗುತ್ತ ಅದು ಮೇಲೆ ಹೋದಂತೆ ನನಗೆ ಒಂದು ಬಗೆಯ ಆನಂದವಾಗುತ್ತಿತ್ತು. ಆದರೆ ಅತ್ಯುಚ್ಚ ಸ್ಥಾನಕ್ಕೆ ಮುಟ್ಟಿದ ಕೂಡಲೆ ಒಮ್ಮೆಲೆ ದೇಹದಲ್ಲಿಯ ಹಾರಾಡುವ ಶಕ್ತಿಯು ನಷ್ಟವಾಗಿ ಅದು ಭೂತಲಕ್ಕೆ ಅಪ್ಪಳಿಸುವಂತೆ ಅನಿಸಿ ಭೂಮಿಯ ಮೇಲೆ ಬಿದ್ದರೆ ಛಿನ್ನವಿಛಿನ್ನವಾಗುವೆನೆಂದು ಅಂಜಿ ನಾನು ಚೀರುತ್ತಿದ್ದೆನು. ಜನರು ಎಚ್ಚರಿಸಿ ಹೇಳಿದ ಮೇಲೆ, ನಾನು ಹಾಸಿಗೆಯ ಮೇಲೆ ಇರುವೆನೆಂದು ಸಮಾಧಾನ ಪಡುತ್ತಿದ್ದೆನು.

ಹೀಗೆ ಮೂರು ದಿನಗಳು ಹೋದವು. ಆ ಮೇಲೆ ಎದೆಯಲ್ಲಿ ಕಫ ಕೂಡಿ ಶ್ವಾಸೋಚ್ಛ್ವಾಸಕ್ಕೆ ತೊಂದರೆಯಾಗಹತ್ತಿತು. ಈ ಸ್ಥಿತಿಯಲ್ಲಿ ನಾನು ಬೇಶುದ್ದನಾಗಿ ಇರುವದು ಹೆಚ್ಚಾಯಿತು. ವೇದನೆಗಳು ಉತ್ಕಟವಾದವು. ಶುದ್ದಿಯಲ್ಲಿದ್ದಾಗ ವೇದನೆಗಳ ತಾವಕ್ಕಿಂತ ಮರಣವು ಒಳಿತೆಂದೆನಿಸುವದು. ಈ ದೇಶೆಯಲ್ಲಿ ಬಹಳ ಹೊತ್ತು ಇರಬೇಕಾಗಲಿಲ್ಲ. ಒಮ್ಮೆಲೆ ಎಲ್ಲ ವೇದನೆಗಳು ನಿಂತಂತಾಯಿತು. ದೇಹದ ಮೇಲೆ ಈ ವರೆಗೂ ಇಟ್ಟಂಧ ಒಂದು ದೊಡ್ಡ ಭಾರವು ಹಗುರಾದಂತೆ ಆಯಿತು, ನನಗೆ ತಿಳಿಯಲಿಲ್ಲ. ನನ್ನ ಹತ್ತಿರ ಜನರು ಮಾತನಾಡುವರು (?) ಮುಂತಾದ ಕೃತಿಗಳು ನನಗೆ ಸ್ಪಷ್ಟವಾಗಿ ತಿಳಿಯಹತ್ತಿದವು. ಒಬ್ಬ ಮನುಷ್ಯನು ನನ್ನ ಕಾಲುಗಳನ್ನು ತಿಕ್ಕುತ್ತ ಅವುಗಳಲ್ಲಿ ಉಷ್ಣತೆ ಉಂಟುಮಾಡಲು ಯತ್ನಿಸುತ್ತಿದ್ದನು. ಮತ್ತೊಬ್ಬನು ಲವಂಗ ತೇದು ನನ್ನ ಕಣ್ಣಿಗೆ ಹಚ್ಚುತ್ತಿದ್ದರು. ನಮ್ಮ ತಂಗಿ ನನ್ನ ಕಿವಿಗೆ ಬಾಯಿ ಹಚ್ಚಿ ಜೋರಿನಿಂದ ನನ್ನ ಹೆಸರುಗೊಂಡು ಚೀರುತ್ತಿದ್ದಳು. ಇಷ್ಟೆಲ್ಲ ಉಪಚಾರಗಳನ್ನು ಅನುಭವಿಸುತ್ತಿದ್ದರೂ, ಈ ಉಪಚಾರಗಳ ಪ್ರಯೋಜನ ಮಾತ್ರ ನನಗೆ ತಿಳಿಯಲೊಲ್ಲದು. ಒಂದೆರಡು ನಿಮಿಷದಲ್ಲಿ ನನ್ನ ವೇದನೆಗಳಿಗೆ ಮತ್ತೆ ಪ್ರಾರಂಭವಾಯಿತು. ಪುನಃ ನಾನು ನರಳಹತ್ತಿದ್ದನ್ನು ನೋಡಿ ಎಲ್ಲರೂ ಆನಂದೋದ್ಗಾರಗಳನ್ನು ತೆಗೆದರು. ಸ್ವಲ್ಪ ಸ್ಮೃತಿ ಬಂದ ಮೇಲೆ ನನ್ನ ಜೀವವು ಹೋಗಿದ್ದು ತಿರುಗಿತೆಂದು ಯಾರೋ ಹೇಳಿದರು. ಜೀವ ಹೋಗಿ ತಿರಗುವ ಈ ಚಮತ್ಕಾರವು ಓಮ್ಮೆ ಆಗಿ ನಿಲ್ಲಲಿಲ್ಲ. ಆ ದಿವಸ ಮತ್ತೆ ಎರಡು ಸಾರೆ ಮೇಲಿನಂತೆ ಆಯಿತು.

ಮರುದಿನ ಬೆಳಗಿನ ಜಾವದಲ್ಲಿ ನಮ್ಮ ಮನೆಯಲ್ಲಿ ಬಹಳ ಜನರು ಬಂದಂತೆ ಅನಿಸಿತು. ಶ್ವಾಸೋಚ್ಛ್ವಾಸದ ತೊಂದರೆಯಿಂದ ನನ್ನ ವೇದನೆಗಳು ಹೆಚ್ಚಿದ್ದರಿಂದ ಇಷ್ಟು ಜನರು ಬಂದ ಕಾರಣವು ನನಗೆ ತಿಳಿಯಲಿಲ್ಲ. ಮತ್ತೊಮ್ಮೆ ನನ್ನ ಎಲ್ಲ ವೇದನೆಗಳೂ ನಿಂತಂತಾಯಿತು. ಆದರೆ ಮೇಲೆ ಹೇಳಿದಂತೆ ವೇದನೆಗಳು ತಿರುಗಲಿಲ್ಲ ಈ ರೀತಿಯಿಂದ ಮುಕ್ತನಾದ ನಾನು ಮನೆಯಲ್ಲಿ ಅಡ್ಡಾಡ ಹತ್ತಿದೆ. ಆದರೆ ನನಗೆ ತಿಳಿಯದಂಥ ಒಂದು ಚಮತ್ಕಾರವನ್ನು ಮಾತ್ರ ನಾನು ಕಂಡೆನು. ನನ್ನಂಥ ಆಕಾರವುಳ್ಳ ದೇಹದ ಸುತ್ತಲೂ ಕುಳಿತು ನನ್ನ ಆಪ್ತೇಷ್ಠರು ಎದೆ ಎದೆ ಬಡಿದುಕೊಂಡು ಅಳುತ್ತಿದ್ದರು. ಯಾಕೆ ಅಳುತ್ತಿರುವರೋ ತಿಳಿಯಲೊಲ್ಲದು. ಅವರ ಶಬ್ದಗಳನ್ನು ಕೇಳಿದ ಮೇಲೆ ನಾನು ಸತ್ತನೆಂದು ಅಳುತ್ತಿರುವದಾಗಿ ಗೊತ್ತಾಯಿತು. ನಾನು ಇದ್ದಾಗ್ಯೂ ಸತ್ತನೆಂದು ಭಾವಿಸುವದನ್ನು ನೋಡಿ ಆಶ್ಚರ್ಯವಾಯಿತು. “ನಾನು ಸತ್ತಿಲ್ಲ ಅಳಬೇಡಿ” ಎಂದರೆ ಕೇಳಿಸುವಂತೆ ತೋರಲಿಲ್ಲ. ಅವರ ಆಕ್ರೋಶವು ಜೋರಿನಿಂದ ನಡೆಯಿತು. ನನ್ನ ಶಬ್ದವು ಏಕೆ ಕೇಳಿಸಬಾರದು? ಇದೂ ನನಗೆ ತಿಳಿಯಲಿಲ್ಲ. ಈ ಸಂದರ್ಭದಲ್ಲಿ ಮತ್ತೊಂದು ಆಶ್ಚರ್ಯದ ಸಂಗತಿಯು ಇತ್ತು. ನನ್ನಂತೆ ಕುಣಿಸುವ ದೇಹವು ನನ್ನ ಬಳಗದವರ ಮಧ್ಯದಲ್ಲಿ ಬಿದ್ದಿದರೂ ಆ ದೇಹವೆಂದರೆ ನಾನಲ್ಲ ಅದು ನನ್ನಂತೆ ಕಾಣಸುತ್ತಿರಬಹುದೆಂದು ನನಗೆ ಭಾವನೆಯಾಯಿತು. ನನ್ನ ಬಾಲ್ಯದಲ್ಲಿಯ ಛಾಯಾಚಿತ್ರವನ್ನು ನೋಡಿ, ಒಬ್ಬ ಮಧ್ಯ ವಯಸ್ಕನಾದ ಮನುಷ್ಯನಿಗೆ ಏನೇನಿಸುವದೋ ಅದೇ ಭಾವನೆಯು ನನಗೆ ಆಯಿತು. ಭೂಮಿಯ ಮೇಲೆ ಬಿದ್ದ ಆ ದೇಹದ ಮೇಲಿನ ಮಹತ್ವವು ಪೂರಾ ಹೋಗದಿದ್ದರೂ ಅದೂ ನಾನೂ ಬೇರೆ, ಒಂದೇ ಅಲ್ಲ. ಅದರ ಅಸ್ತಿತ್ವಕ್ಕೆ ಸಂಬಂಧವಿಲ್ಲೆಂದು ಕಂಡಿತು. ಹೀಗೆ ನಾನು ಎಲ್ಲ ವೇದನೆಗಳಿಂದ ಮುಕ್ತನಾಗಿ ನಾನು ಸತ್ತಿಲ್ಲ ಜೀವದಿಂದ ಸುರಕ್ಷಿತವಾಗಿರುವನೆಂದು ಎಷ್ಟು ಹೇಳಿದರೂ ನನ್ನ ಬಾಂಧವರ ಆಕ್ರೋಶ ನಿಲ್ಲಲಿಲ್ಲ. ಒಂದೆರಡು ತಾಸಿನ ನಂತರ ನನ್ನ ಛಾಯಾ ಚಿತ್ರವಾದ ಆ ದೇಹವನ್ನು ಸ್ಮಶಾನಕ್ಕೆ ಒಯ್ದು ಸುಟ್ಟುಬಂದರು. ಆ ಮೇಲೆ ಹತ್ತು ಹದಿನಾರು ದಿವಸದ ವರೆಗೆ ನಮ್ಮ ಮನೆಯಲ್ಲಿ ಗೊಂದಲವೇ ನಡೆಯಿತು. ನಾನು ಸತ್ತೆನೆಂದು ದುಃಖಪಡುವ ನನ್ನ ಕುಟುಂಬದವರ ಸಮಾಧಾನ ಮಾಡುವದಕ್ಕೆ ಊರ ಜನರು ಬರುತ್ತಿದ್ದರು. ಅವರು ಬಾಗಿಲದಲ್ಲಿ ಬಂದ ಕೂಡಲೆ, ನಮ್ಮ ಮನೆಯ ಜನರು ಜೋರಿನಿಂದ ಅಳಲಿಕ್ಕೆ ಪ್ರಾರಂಭ ಮಾಡುತ್ತಿದ್ದರು. ಬಂದವರು ನಾಲ್ಕು ಉಪಚಾರದ ಮಾತುಗಳನ್ನು ಹೇಳಿ, ತಾವೂ ಸ್ವಲ್ಪ ಸ್ವಲ್ಪ ಅತ್ತು ದುಃಖ ಪ್ರದರ್ಶನ ಮಾಡುತ್ತಿದ್ದರು. ಈ ಜನರು ಹುಚ್ಚರಂತೆ ಕಾರಣವಿಲ್ಲದೇ ಅಳುವದನ್ನು ನೋಡಿ, ನನಗೆ ಬೇಸರ ಬಂದಿತು. ಅವರು ಅಳಬಾರದು, ದುಃಖ ಪಡಬಾರದು ಎಂದು ನಾನು ಅವರಿಗೆ ಪರಿ ಪರಿಯಿಂದ ಹೇಳಿದೆನು. ನಾನು ಎದುರಿನಲ್ಲಿ ಕುಳಿತು ಎಷ್ಟು ಚೀರಿದರೂ ನನ್ನ ಶಬ್ದವೇ ಅವರ ಲಕ್ಷಕ್ಕೆ ಬಾರದಂತೆ ಕಂಡಿತು. ಮತ್ತು ನನ್ನ ಶಬ್ದವೇ ಅವರಿಗೆ ಕೇಳಿಸದಂತೆ ಅವರು ವರ್ತಿಸ ಹತ್ತಿದರು. ಮನೆಯಲ್ಲಿ ಈ ಹಾಡಾಯಿತು ನಿತ್ಯವೂ ಹೋಗುವಂತೆ ಖಾದೀ ಭಾಂಡಾರಕ್ಕೆ ಹೋದೆನು. ಕಟ್ಟೆಯ ಮೇಲೆ ಏರಿ ನಿತ್ಯದ ಕುಳಿತೆನು; ಆದರೆ ಭಾಂಡಾರದಲ್ಲಿಯ ವ್ಯವಸ್ತಾಪಕನು ನನ್ನ ಸಂಗಡ ಮಾತಾಡುವದಂತಿರಲಿ. ನನ್ನ ಕಡೆಗೆ ಅವನು ಕಣ್ಣೆತ್ತಿ ಸಹ ನೋಡಲಿಲ್ಲ ಇಷ್ಟೆ ಅಲ್ಲ, ಯಾರೋ ವ್ಯಾಪಾರಕ್ಕೆ ಬಂದಾಗ್ಗೆ ಅವರ ಸಂಗಡ ಅವನು ಸಹ ನನ್ನ ಮರಣದ ಸುದ್ದಿಯನ್ನೇ ಮಾತಾಡಹತ್ತಿದನು. ನನಗೆ ಸಿಟ್ಟು ಬಂದಿತು. ನಾನು ಸತ್ತಿಲ್ಲವೆಂದು ಅವರ ಮನವರಿಕೆಮಾಡಲು ಇಲ್ಲಿ ಆದರೂ ಪ್ರಯತ್ನ ಬಟ್ಟೆನು, ಅದೂ ವ್ಯರ್ಥವಾಯಿತು.

ಅಲ್ಲಿಂದ ವಾಚನಾಲಯಕ್ಕೆ ಹೋದೆನು. ಅಲ್ಲಿ ಪರಿಚಯಸ್ಥರು ಎದುರಿನಲ್ಲಿ ಭೆಟ್ಟಿಯಾದರೂ ಮಾತಾಡಿಸದೇ ಹಾಗೆ ಹೋದರು. ಕೆಲ ಹೊತ್ತು ಕಳೆದ ಮೇಲೆ ನಮ್ಮ ಮಿತ್ರ ಸಮಾಜಕ್ಕೆ ಹೋದೆನು. ಅಲ್ಲೆ ನನ್ನ ಮಿತ್ರರು ಇಸಪೇಟ ಆಡುತ್ತಿದ್ದರು. ಕೆಲವರು ಸುಮ್ಮನೆ ಹರಟೆ ಹೊಡೆಯುತ್ತಿದ್ದರು. ಅವರೊಡನೆ ಏನಾದರೂ ಮಾತಾಡಿ ಕಾಲಕಳೆದು ಮನೆಗೆ ಹೋಗ ಬೇಕೆನ್ನುವಷ್ಟರಲ್ಲಿ ಅವರಾದರೂ ನನ್ನ ಮರಣದ ಸುದ್ದಿಯನ್ನೇ ಮಾತಾಡುವದನ್ನು ಕೇಳಿದೆನು; ಮುಗಿಯಿತು. ಕಡೆಯ ಯತ್ನವೆಂದು ಇವರ ಮುಂದಾದರೂ ನಾನು ಸತ್ತಿಲ್ಲ, ಇರುವೆನೆಂದು ಹೇಳಲಿಕ್ಕೆ ಪ್ರಯತ್ನಿಸಿದೆನು. ಇವರಾದರೂ ನನ್ನ ಶಬ್ದಗಳು ಕೇಳಿಸಿದಂತೆ ಆಚರಿಸಿದರು. ನಿರಾಶನಾಗಿ ಮನೆಗೆ ಹೋದೆನು. ನನ್ನ ಮಾತು ಕೇಳುವವರಿಲ್ಲ. ನನಗೆ ಮಾತು ಹೇಳುವವರಿಲ್ಲ. ಇಂಥ ಸ್ಥಿತಿಯಲ್ಲಿ ಕಾಲಹರಣ ಮಾಡಲಿಕ್ಕೆ ಬೇಸರ ಬರಹತ್ತಿತ್ತು. ಹೀಗೆ ಹೀನವಾದ ಆಯುಷ್ಯವನ್ನು ಹೇಗೆ ಕಳೆಯಬೇಕೆಂಬ ವಿವಂಚನೆಯಲ್ಲಿ ಮನಕ್ಕೆ ಬಂದಂತೆ ಅಡ್ಡಾಡುವಾಗ ದಣಿದುಬಂದು ಶಾಂತ ಸ್ಥಳದಲ್ಲಿ ಕುಳಿತೆನು. ಶ್ರಮದಿಂದ ಸ್ವಲ್ಪು ಜಂಪು ಹತ್ತಿತು. ಎಚ್ಚರಾಗಿ ನೋಡುವಷ್ಟರಲ್ಲಿ ನನ್ನ ಎದುರಿನಲ್ಲಿ ನನ್ನ ಗುರುತಿನವರಾರೋ ಕುಳಿತಂತೆ ಕಾಣಿಸಿತು. ಆ ಗೃಹಸ್ಥನ ಮೋರೆಯನ್ನು ನೋಡಿ ಚಕಿತನಾದೆನು. ನಾನು ನಿದ್ದೆಯಲ್ಲಿ ಇರುವೆನೋ ಎಚ್ಚರಾಗಿರುವೆನೋ ಎಂಬ ಶಂಕೆ ಬಂದಿತು. ಏಕೆಂದರೆ ಯಾವನ ಮೃತ್ಯುಲೇಖವನ್ನು ನಾನೇ ಬರೆದು ವೃತ್ತ ಪತ್ರಕ್ಕೆ ಕಳುಹಿದ್ದೆನೋ ಅದೇ ರಾಮರಾಯನು ನನ್ನೆದುರಿನಲ್ಲಿ ಕುಳಿತು ನನ್ನ ಕಡೆಗೆ ನೋಡುತ್ತ ನಸುನಗುತ್ತಿದ್ದನು. ನಾನು ಸ್ತಂಭಿತನಾದುದನ್ನು ಕಂಡು ಅವನೇ ಬಂದು “ಏಕೆ ರಾಯರೇ ಗುರುತು ಹತ್ತಲೊಲ್ಲದೊ?” ಎಂದು ಮಾತಾಡಿಸಿದನು. ನಾನು ದಿಙ್ಮೂಢನಾದೆನು. ಕಳೆದ ಹದಿನಾರು ದಿನದಲ್ಲಿ ನನ್ನ ಕಣ್ಣಿಗೆ ಕಣ್ಣು ಹಚ್ಚಿ ನನ್ನನ್ನು ಯಾರೂ ಮಾತಾಡಿಸಿದ್ದಿಲ್ಲ. ಈ ಹೊತ್ತು ಇಷ್ಟು ಪ್ರೇಮದಿಂದ ಮಾತಾಡಿಸುವವನು ಭೆಟ್ಟಿಯಾದ್ದರಿಂದ ನನಗೆ ಆನಂದವಾಗತಕ್ತದ್ದು ಸರಿ. ಆದರೆ ಭೆಟ್ಟಿಯಾದ ವ್ಯಕ್ತಿಯು ದಿವಂಗತನಾದ ರಾಮರಾಯನಾದ್ದರಿಂದ ನನ್ನ ಹೊಟ್ಟಿಯಲ್ಲಿ ತಣ್ಣಗಿನ ಕಲ್ಲು ಇಟ್ಟಂತಾಯಿತು. ಇಷ್ಟು ಮೈಮೇಲೆ ಬಿದ್ದು ಮಾತನಾಡಿಸುವವನನ್ನು ಬಿಟ್ಟುಬಿಡುವದೆಂದರೆ ಹೀನತನವೆಂದು ಭಾವಿಸಿ, ಮನಸ್ಸನ್ನು, ಗಟ್ಟಿಮಾಡಿ “ಬರ್ರಿ ರಾಮರಾಯರೆ, ದೃಷ್ಟಿಯು ಸ್ವಲ್ಪ ಮಂದಾದ್ದರಿಂದ ಬೇಗನೆ ಗುರುತುಹತ್ತಲಿಲ್ಲ. ಕ್ಷಮಿಸಿರಿ” ಅಂದೆನು. ಅದೇನು ರಾಯರೇ ಕ್ಷಮಿಸುವದು? ಎಂದು ರಾಮರಾಯನು ಅಂದನು. ಹದಿನಾರು ದಿನಗಳವರೆಗೆ ನಾನು ಎಷ್ಟು ಚೀರಿದರೂ ನನ್ನ ಶಬ್ದವು ಯಾರಿಗೂ ಕೇಳಿಸಲಿಲ್ಲ. ಆದರೆ ರಾಮರಾಯರಿಗೆ ಹೇಗೆ ಕೇಳಿಸಿತು? ಇದೇ ಒಂದು ಸೋಜಿಗವಾಯಿತು. ನನ್ನ ಕೂಡ ಮಾತಾಡುವವನು ಒಬ್ಬನಾದರೂ ಸಿಕ್ಕನೆಂದು ನನಗೆ ಆನಂದವಾಯಿತು. ಮತ್ತು ಆ ಆನಂದದಲ್ಲಿ ಮೊದಲು ಉಂಟಾದ ಭಯಮಾಯವಾಯಿತು ಇಷ್ಟಾದರೂ ರಾಮರಾಯನ ಸಂಗಡ ಕೇವಲ ಮೇಲುಪಚಾರದ, ಕ್ಷೇಮಸಮಚಾರದ ಮಾತುಗಳನ್ನೇ ಆಡಹತ್ತಿದೆನು. ಅವನು ಮೃತಪಟ್ಟವನೆಂಬ ಭಾವನೆಯು ಇನ್ನೂ ನನ್ನ ಮನಸ್ಸನ್ನು ಬಿಟ್ಟಿದ್ದಿಲ್ಲ. ನಾನು ಹೀಗೆ ಆಂಜುತ್ತ ಅಂಜುತ್ತ ಮಾತಾಡುವದನ್ನು ಕಂಡು ರಾಮರಾಯರಿಗೆ ಸ್ವಲ್ಪು ಸಿಟ್ಟು ಬಂದಂತೆ ತೋರಿತು. “ಸಂಕೋಚವೇಕೆ? ಇತರ ರಂತೆ ನೀವಾದರೂ ನಾನು ಮೃತನೆಂದು ತಿಳಿಯುತ್ತೀದ್ದೀರಿ, ತಿಳಿಯಿರಿ, ನಾನು ಹೋಗುವೆನು” ಎಂದು ರಾಮರಾಯನು ಹೊರಟನು. ಸಿಕ್ಕವನೊಬ್ಬ ಮಿತ್ರನು ಕೈಬಿಟ್ಟು ಹೋಗುವನೆಂದು ಹತಾಶನಾಗಿ ನಾನು ಮಾತಾಡಿದೆನು. ಕೂತುಕೊಳ್ಳಿ ರಾಮರಾಯರೇ ಮಿಕ್ಕವರಂತೆ ನಾನಾದರೂ ತಾವು ಮೃತ ಪಟ್ಟವರೆಂದು ಭಾವಿಸಿದ್ದು ನಿಜ. ಆದರೆ ನನ್ನ ಭವಣೆಯನ್ನು ಕೇಳಿದರೆ ತಮಗೆ ನಿಜಸ್ಥಿತಿ ಗೊತ್ತಾಗುವದು. ರಾಮರಾಯನು ಕುಳಿತನು. ಕಳೆದ ಹದಿನಾರು ದಿನಗಳಲ್ಲಿ ನಾನು ಜೀವಂತ ಇರುವೆನೆಂದು ಸಿದ್ಧಮಾಡಲು ನಾನು ನಡಿಸಿದ ಪ್ರಯತ್ನಗಳು ಅದರಂತೆ ನನ್ನ ಇಷ್ಟಮಿತ್ರರು ನಾನು ಸತ್ತೆನೆಂದು ಕಲ್ಪಿಸಿ, ನನ್ನ ಅಸ್ತಿತ್ವದ ಬಗ್ಗೆ ತೋರಿಸಿದ ಔದಾಸಿನ್ಯ ಇವುಗಳನ್ನು ಸವಿಸ್ತಾರವಾಗಿ ರಾಮರಾಯನಿಗೆ ಹೇಳಿದೆನು. ಇದನ್ನೆಲ್ಲ ಕೇಳುವ ಮುಂದೆ ರಾಮ ರಾಯನು ನಗುತ್ತಿದ್ದನು. ನನ್ನ ಕತೆ ಮುಗಿದ ಮೇಲೆ ಸಹ ರಾಮ ರಾಯನು ನಗೆ ನಿಲ್ಲಲಿಲ್ಲ! ಕಡೆಗೆ ಸಲ್ಪ ನಿಂತ, ರಾಮರಾಯನು ಅಂದ; ಸಿಟ್ಟು ಮಾಡಬೇಡಿ. ತಮ್ಮದುರವಸ್ಥೆಗೆ ನಾನು ನಗುವೆನೆಂದು ತಿಳಿಯ ಬೇಡಿ. ಕೇವಲ ನಿಮ್ಮಂತೆಯೇ ನನ್ನದಾದರೂ ಭವಣೆಯಾಗಿತ್ತು. ಆಗ ನಾನು ನಿಮ್ಮಂತೆಯೇ ನಿರಾಶನಾಗಿದ್ದೆನು. ಆದರೆ ಚಿಂತೆ ಇಲ್ಲ, ಬರ್ರಿ. ಎಂದು ರಾಮರಾಯನು ನನ್ನ ಕೈ ಹಿಡಿಮ ಕರೆದುಕೊಂಡು ಒಂದು ಸ್ಥಳಕ್ಕೆ ಹೋದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನ್ನದಾನಕ್ಕಿಂದೇನಾದರೂ ಮಹತ್ವ ಉಂಟಾ?
Next post ಮುಡಿಪಿದ ಹೂ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…