ಕಥೆಯಂತೂ ಸಾಗುತ್ತದೆ ಕಂದ
ಆದರೊಂದೇ ಷರತ್ತು
ಕಥೆ ಕೇಳುವ ಕುರುಹಿಗೆ
ಕಥೆಗೆ ಉಸಿರಂತೆ
ನೀ ‘ಹೂಂ’ ಎಂದರೆ ಮಾತ್ರ
ಮುಂದೆ ಸಾಗುತ್ತದೆ
ಕಥೆ ತಡವರಿಸದೆ!
ಆಡ್ಡಗೋಡೆಯ
ಮೇಲಿನ ದೀಪ
ಇತ್ತಲೂ ಒಂದಿಷ್ಟು
ಬೆಳಕು ಚೆಲ್ಲಿ
ಅತ್ತಲೂ ಒಂದಿಷ್ಟು
ಬೆಳಕು ಚೆಲ್ಲಿ
ಎರಡೂ ಬದಿ ಒಂದಿನಿತು
ಕತ್ತಲುಳಿದರೆ ಏನು?
ಕಥೆ ಮುಂದುವರಿಯದೇನು?
ಅಂಗೈಯಲಿ ಅರಳಿ
ನಗುತಿದ್ದ ಚಂದ್ರಮ
ಥಟ್ಟನೆ ಸಿಟ್ಟುಗೊಂಡು
ಕೈಗೆಟುಕದ ಬಾನಿಗೆ ಹಾರಿ
ಅಟ್ಟಹಾಸದಿ ಗಹಗಹಿಸಿದ್ದು
ಕಥೆಯಾಯಿತೇನು?
ಚಂದ್ರಮ ಎಲ್ಲಿದ್ದರೇನು?
ಎನ್ನುತ್ತಾ ಕಥೆ ಮುಂದುವರೆಯಿತು
ತಾನು!
ಆಳಕ್ಕೆ ಊರಿನಿಂತ ಬೇರು
ಗೆದ್ದಲಿಗಾಹುತಿಯಾಗಿ
ಹುಡಿಯಾಗುತ್ತಿದ್ದರೂ
ತಾನೆ ಶಾಶ್ವತ ಎನ್ನುತ್ತಾ
ಮೆರೆಯುತಿದೆ ಮೇಲ್ಮರ
ಬೇರು ಸತ್ತರೆ ಏನು?
ಮರ ಮೆರೆದರೆ ಏನು?
ಕಥೆಯಂತೂ ನಿರಾತಂಕ ಸಾಗದೇನು?
ಚರಿತ್ರೆ ಬರೆದಿಟ್ಟರೆ ಏನು?
ಬರೆದಿಡದಿದ್ದರೆ ಏನು?
ಬದುಕಿದ್ದು ಸುಳ್ಳಲ್ಲವಲ್ಲ
ಇತಿಹಾಸದ ಹೊರಗಿದ್ದರೂ
ಅದರ ಒಳಗಿದ್ದರೂ
ಕಥೆಯಂತೂ ಬೆಳೆಯುತ್ತದೆ
ನದಿಯಂತೆ ಉದ್ದಕ್ಕೆ ಸಾಗುತ್ತದೆ!
ಆದರೆಲ್ಲಾ ನೀ
ಕಥೆ ಕೇಳುತ್ತಾ ಹೂಂ ಎಂದರೆ ಮಾತ್ರ!
*****