ಎಚ್ಚರ ಎಚ್ಚರ
ಕಾರ್ಗತ್ತಲ ತೆಕ್ಕೆಯಲಿ
ಪೊದೆಯೊಳಗೆ ಅವಿತುಕುಳಿತ ಚೋರ
ಹೊಕ್ಕಾನು ಮನೆಯೊಳಗೆ
ನಿಶಾದೇವಿಯಾಲಿಂಗನದಲಿ
ಮೈ ಮರೆತರೆ
ಎಲ್ಲವೂ ಸೂರೆ
ಕಡಲಿನ ತೆರೆ
ದಂಡೆಗಪ್ಪಳಿಸಿದರೆ
ಅರಿವಾಗುವ ಮೊದಲೇ
ಎಲ್ಲಾ ನೀರೇ!
ಎಚ್ಚರ ಎಚ್ಚರ
ಕಿಟಕಿ, ಬಾಗಿಲು, ವಾತಾಯನಗಳೆಲ್ಲಾ
ಮುಚ್ಚಿಕೊಂಡಿದ್ದರೂ ಗಟ್ಟಿಯಾಗಿಯೇ
ಸಣ್ಣಪುಟ್ಟ ಸಂದುಗೊಂದುಗಳಲ್ಲಿ
ಮೆಲ್ಲಗೆ ಕಣ್ಣಿಳಿಸಿ
ಕಣ್ಣಿನೊಂದಿಗೇ ತನ್ನ ಬೇರಿಳಿಸಿ
ಆಳದಾಳದ ಗುಪ್ತ ಖಜಾನೆಗೇ
ಲಗ್ಗೆ ಹಾಕುತ್ತಾನೆ ಈ ಚೋರ
ಮುತ್ತು, ವಜ್ರ, ವೈಢೂರ್ಯಹಾರ
ಕಣ್ಮುಚ್ಚಿ ತೆಗೆಯುವುದರೊಳಗೆ
ಮಂಗಮಾಯ ಮಾಡುವ ಧೀರ!
ಎಚ್ಚರ ಎಚ್ಚರ
ತೊಟ್ಟ ಅಂಗಿ ಕಳಚಿ
ನಿದ್ದೆಯಾಳಕ್ಕೆ ಇಳಿದು
ಸುಪ್ತಸಾಗರದಲಿ
ಸಪ್ತವರ್ಣದ ಅಂಗಿತೊಟ್ಟು
ತೇಲುತ್ತಾ ಮುಳುಗಿದವರೇ
ಕಳಚಿಟ್ಟ ಅಂಗಿ
ದೋಚಿಯಾನು ಚೋರ
ಅತ್ತ ಅದೂ ಇಲ್ಲದೇ
ಇತ್ತ ಇದೂ ಇಲ್ಲದೇ
ಆದೀತು ಬೆತ್ತಲು ಅನಿವಾರ್ಯ
ಜಾಗರದವ ಸರಿರಾತ್ರಿಯಲಿ
ಗಂಟಲು ಹರಿದುಕೊಳ್ಳುತ್ತಾ
ಜಾವಕೊಮ್ಮೆ ಜಾಗರ ಕೂಗುತ್ತಾನೆ
ಪಾಪ ಅವನಿಗೆ ತಿಳಿದಿಲ್ಲ
ಮೈ ಮರೆತು ನಿದ್ರಿಸಿದವರಿಗಷ್ಟೇ
ಎಚ್ಚರಾಗುವ ಪ್ರಶ್ನೆ
ಜಾಗೃತಿಯ ಜಾಗರದವರಿಗೆ
ಸದಾ ಎಚ್ಚರವೇ ಪ್ರಜ್ಞೆ!
*****