ಆಕಿ ನನ ಕಣ್ಮುಂದೆ ಬಿಳಿಪರೆ ಎಳೀತಾಳೆ
ನೀಸೋ ಸೆರಗಿನ್ಯಾಗ ಮುಚಿಗೆಂಡು ಜೋಗಳಾ ಹಾಡತಿ
ಆಕಿ ಕಲಕಿ ರಾಡಿಯೆಬ್ಬಸ್ತಾಳೆ ನೀನು ತಿಳಿಗಲಸ್ತೀ
ಆಕಿ ಉಬ್ಬಿಸಿ ಒಡಸ್ತಾಳೆ ನೀನು ಕುಗ್ಗಿಸಿ ಕುದುರುಸ್ತಿ
ಆಕಿ ಮಕಾಡಾಹಾಕಿ ಬಣ್ಣ ಹಚಿಗೆಂಡು ಬಯಲಾಟ ಆಡಿದ್ರೆ
ನೀನಿದ್ದುದ್ದಿದ್ದಂಗೇ ತೋರಸ್ತೀ
ಆಕೀದು ಬರೀ ಬೆರೆಕೀತನ ನಿಂದು ಕಡ್ಡಿ ಮುರದಂಗೆ ಸಾಚಾತನ
ಅವ್ವಾ ಕರಿಮಾಯೀ!
ನಿನ್ನ ಮಹಿಮಾ ಎಷ್ಟಂತ ಬಣ್ಣಸಲೀ
ತಲಿಕೂದಲು ಮಲೆ ತೊಟ್ಟು ಸಂದುಗೊಂದಿನಮ್ಯಾಲೆಲ್ಲಾ ನಿನ ನೆಳ್ಳು
ಹಗಲ ಕೂಸ್ನ ಬಗಲಾಗಿಟಿಗಂಡಿ ಚಿಕ್ಕೀ ಹೂಗಳ್ನ ತಲೆಯಾಗಿಟಗಂಡಿ
ಕರಿಮೈಯ ಹರಿಹರರೆ ನಿನ ಮಕ್ಳೆಂದಮ್ಯಾಲೆ
ಇಷ್ಟಿಷ್ಟೆ ಸೆರಗ ಸರಿಸಿ ನಿನ ಚಂದ ತೋರಿಸ್ತೀ
ಅದೂ ತಪ್ಪಸ್ ಮಾಡಿದೋರ್ಗೆ
ಕಂಡೋರು ಕಂಡಂಗಾಡ್ತಾರೆ
ಶೂನ್ಯಂತಾರೆ ಬಟಾಬಯಲಂತಾರೆ ನಿರ್ವಾಣಂತಾರೆ
ಮೊದ ಮೊದಲು ನಿನಗೆ ಭಾಳಾ ಹೆದರತಿದ್ದೆ
ಬೆಳೆದಂಗೆಲ್ಲ ಬಿಳಿಯವ್ವನ ಕಣ್ಣು ಕುಕ್ಕಾಟಕ್ಕೆ ಕಕ್ಕಾಬಿಕ್ಕಾಗಿ
ನಿನ್ನ ಕಡೆಗೆ ತಿರಗಿದೆ ನಿನ್ನ ತಿಳಿದು ಒಲಿಯಾಕತ್ತಿದೆ
ಕತ್ತಲಾಗೆ ನೀನು ಮಿಂಚಾಡಿ ದಾರಿ ತೋರಸ್ತಾ ಹೊಂಟಂಗೆಲ್ಲಾ
ಹೊಸ ಹೊಸಾ ಕತ್ತಲು ಗಟ್ಟಿಗಾದಂಗೆಲ್ಲಾ
ಗುರು ಹಿರಿಯಳಂಗೆ ದಿನದಿನಕೆ ಹತ್ತರದೋಳಂಗೆ ಆಗ್ತಾ ಅದೀ
ಅವ್ವಾ ಕರಿಮಾಯಿ! ನಿನ ಮಹಿಮಾ ಬಣ್ಣಸಾಕೆ ನಾನೆಷ್ಟರೋನು
*****.