ಒಂದಾನೊಂದು ಊರಲ್ಲಿ ಅಕ್ಕ ತಮ್ಮ ಇದ್ದರು. ಅಕ್ಕನ ಗ೦ಡ ತೀರಿಕೊಂಡಿದ್ದನು. ಆಕೆಗೊ೦ದು ಹೆಣ್ಣು ಮಗು ಇತ್ತು. ತಾಯಿತಂದೆಗಳು ತಮ್ಮನು ಚಿಕ್ಕವನಿರುವಾಗಲೇ ದೇಹವಿಟ್ಟಿದ್ದರು. ಅವನಿಗೆ ಅಕ್ಕನೇ ಹತ್ತಗಡೆಯವಳು. ಹೀಗೆ ದಿನ ಕಳೆಯುವಷ್ಟರಲ್ಲಿ ಅಕ್ಕನೂ ಅಗಲಿ ಹೋದಳು. ಚಿಕ್ಕವಳಾದ ಅಕ್ಕನ ಮಗಳನ್ನು ತಮ್ಮನು ಜೋಪಾನಮಾಡುವುದು ಅನಿವಾರ್ಯವಾಯಿತು.
ಸೋದರಸೊಸೆಯು ಆರೆಂಟು ವರುಷಗಳಲ್ಲಿ ದೊಡ್ಡವಳಾಗಲು ಅವಳನ್ನು ತಾನೇ ಲಗ್ನವಾದನು. ಅಂದಿನಿಂದ ಅವರು ಗಂಡಹೆಂಡಿರಾಗಿ ಸಂತೋಷದಿಂದ
ಇರತೊಡಗಿದರು. ಚೆಲುವೆಯಾದ ಹೆಂಡತಿಯು ಮನೆಯಲ್ಲಿಯೇ ಉಳಿದುಕೊಂಡು ತನ್ನ ಕೆಲಸದಲ್ಲಿಯೇ ತೊಡಗುವಳು. ಆದರೂ ನೆರೆಮನೆಯ ಕಾಮಣ್ಣನೊಬ್ಬನು ಆಕೆಯನ್ನು ಕದ್ದುಗಣ್ಣಿನಿಂದ ಎಂದೋ ನೋಡಿ ಚಂಚಲಚಿತ್ತನಾದನು. ಏನಾದರೂ ನೆವ ಮುಂದೆ ಮಾಡಿಕೊಂಡು ಆ ಚೆಲುವೆಯನ್ನು ಹೊಂಚುಹಾಕಿದನು. ಆಕೆಯ ಗಂಡನು ಮನೆಯಲ್ಲಿಲ್ಲದ ಸಂಧಿಸಾಧಿಸಿ ಬೆಲೆಯುಳ್ಳ ಒಂದು ಸೀರೆಯನ್ನು ಬಗಲಲ್ಲಿ ಹಿಡಿದುಕೊಂಡು ಅವರ ಮನೆಯನ್ನು ಪ್ರವೇಶಿಸಿದನು. ಆದರೆ ಆಕೆಯನ್ನು ಮಾತನಾಡಿಸಲು ಧೈರ್ಯವಾಗದೆ, ಆಕೆಯ ಗಂಡನು ಬಂದುಗಿಂದರೆ ತನ್ನ ಗತಿಯೇನೆಂದು ಹೆದರಿ, ತಾನು ತಂದ ಸೀರೆಯನ್ನು ನಿಲುವುಗಣೆಯ ಮೇಲೆ ಹಾಕಿ ಅಲ್ಲಿಂದ ಕಾಲು ಕಿತ್ತಿದನು.
ಗಂಡನು ಮನೆಗೆ ಬರುವುದೇ ತಡ, ಮೊದಲು ನಿಲವುಗಣೆಯ ಮೇಲಿನ ಸೀರೆ ಆತನ ಕಣ್ಣಿಗೆ ಬಿತ್ತು. ಹೆಂಡತಿಯನ್ನು ಕರೆದು ಕೇಳಿದನು – “ಇದೆಲ್ಲಿಯ ಸೀರೆ ?”
“ನನ್ನಕ್ಕ ಕಳಿಸಿದ ಸೀರೆ” ಎಂದಳು.
“ನನಗೆ ಗೊತ್ತಿಲ್ಲದ ಅಕ್ಕ ನಿನಗಾರಿದ್ದಾಳೆ ?” ಎಂದು ಅನುಮಾನ ತೋರಿದನು ಗಂಡ.
“ಒಡಹುಟ್ಟಿದ ಅಕ್ಕನಲ್ಲವಾದರೂ ನಡೆಪಥದ ಅಕ್ಕ ಇದ್ದಾಳೆ ದೂರಿನ ಊರಲ್ಲಿ.”
ಅದೇ ಅನುಮಾನದಲ್ಲಿ ಗಂಡ ಕೇಳಿದನು – “ಆಕೆಯನ್ನು ನನಗೆ ತೋರಿಸುವಿಯಾ ?”
“ಆಕೆಯ ಊರಿಗೆ ನಾಳೆಯೇ ಹೊರಡೋಣ” ಎಂದು ಎಲ್ಲಿಲ್ಲದ ಧೈರ್ಯದಿಂದ ಹೆಂಡತಿ ಹೇಳಲು ಗಂಡನು ಪ್ರಯಾಣಕ್ಕೆ ಅಣಿಗೊಳಿಸಿದನು.
ಹೆಂಡತಿ ದಾರಿಯ ರೊಟ್ಟಿಬುತ್ತಿ ಮಾಡಿಟ್ಟಳು. ಗಂಡನು ಒಂದು ಬಾಡಿಗೆಯ ಕುದುರೆ ತಂದನು. ಬೆಳಗಾಗುವ ಮೊದಲು ಗಂಡಹೆಂಡರು ಹೊರಟುಬಿಟ್ಟರು. ಸರತಿಯಿಂದ ಕುದುರೆ ಹತ್ತುತ್ತ ಸಾಗಿದ್ದರಿಂದ ಮಧ್ಯಾಹ್ನವಾಗುತ್ತ ಬಂದರೂ ಅವರಿಗೆ ದಣಿವಾಗಲಿಲ್ಲ. ಇನ್ನೇನು, ನೀರು-ನೆರಳು ನೋಡಿ ಊಟ ತೀರಿಸಬೇಕೆಂದು ದಾರಿಯ ಬದಿಯಲ್ಲಿರುವ ಒಂದು ತೋಟವನ್ನು ಕಂಡು ಅಲ್ಲಿಳಿದರು.
ತೋಟಕ್ಕೊಂದು ಬಾವಿಯಿತ್ತು. ಆದರೆ ಅದೆಷ್ಟು ಆಳವಾಗಿ ಅಗೆಸಿದರೂ ಬಾವಿಗೆ ನೀರೇ ಬಿದ್ದಿಲ್ಲವೆಂದು ತಿಳಿಯಿತು. ಏನಿದ್ದರೂ ದಾರಿಕಾರರು ಉಂಡು ನೀರು ಕುಡಿದು ತಣಿಯಲಿಕ್ಕೆ ಯಾವ ತೊಂದರೆಯೂ ಇರಲಿಲ್ಲ. ಗಂಡನಾದವನು ತಂಬಿಗೆ ತೆಗೆದುಕೊಂಡು ಕೈಕಾಲಿಗೆ ಹೋದನು. ಹೆಂಡತಿ ಬಾವಿಯ ಬಳಿಗೆ ಹೋಗಿ ನಾಲ್ಕು ಮೆಟ್ಟುಗಲ್ಲುಗಳನ್ನಿಳಿದು ಬಾಗಿನಿಂತು ನೀರು ನೋಡಿದಳು. ಆಕೆಯ ದೃಷ್ಟಿಬಿದ್ದ ಮುಕ್ಕು ನೀರೇ ಅದೇ ನಿಮಿಷದಿಂದ ಏರತೊಡಗಿ ಕ್ಷಣಾರ್ಧದಲ್ಲಿ ಮೆಟ್ಟುಗಟ್ಟೆಯನ್ನು ಮುಳುಗಿಸಿಬಿಟ್ಟಿತು. ಅದನ್ನು ಕಂಡು ಅಲ್ಲಿಯೇ ಬಾವಿಯ ಮೇಲೆ ಆಡುತ್ತ ಕುಳಿತ ಇಬ್ಬರು ಬಾಲಕರು, ಬಾವಿಗೆ ನೀರು ಬ೦ದ ಸಂತೋಷದ ಸುದ್ದಿಯನ್ನು ಹೇಳುವುದಕ್ಕೆ ಮನೆಗೆ ಓಡಿದರು.
ಒಂದರ್ಧಗಳಿಗೆ ಕಳೆಯುವಷ್ಟರಲ್ಲಿ ಮನೆಯೊಡತಿ ಹಿರಿಹಿರಿಹಿಗ್ಗಿನಿಂದ ಗಾಡಿ ಹೂಡಿಸಿಕೊಂಡು ತನ್ನಿಬ್ಬರು ಮಕ್ಕಳೊಡನೆ ತೋಟಕ್ಕೆ ಬಂದೇಬಿಟ್ಟಳು, ಅವರು ಪರಸ್ಪರ ಪರಿಚಯದವರೂ ಅಲ್ಲ. ಒಬ್ಬರನ್ನೊಬ್ಬರು ಕಂಡಿದ್ದು ಸಹ ಅಂದೇ. ಆದರೆ ಆ ಹೆಣ್ಣುಮಗಳ ಕಾಲ್ಗುಣದಿಂದ ತಮ್ಮ ತೋಟದ ಬಾವಿಗೆ ನೀರು
ಬಂದವೆಂಬ ಅತಿಹರ್ಷದಿಂದ ತೋಟದೊಡತಿ ಗಾಡಿಯಿಂದ ಇಳಿದವಳೇ – “ತಂಗೀ, ಯಾವಾಗ ಬಂದಿರಿ” ಎಂದು ಅಪ್ಪಿಕೊಂಡಳು.
“ಅಕ್ಕ ! ಹಾಲು ಹರಿದಂತೆ ಒಗೆತನ ಹರಿದುಹೊರಟಿದೆ” ಎಂದಳೀಕೆ.
“ಕಳಿಸಿದ ಗಳಿಗೆ ಜೋಕೆಯಾಗಿದೆಯೋ” ಎಂದಳಾ ಅಕ್ಕ.
ಆ ಅಕ್ಕತಂಗಿಯರ ಅಕ್ಕರೆಯ ಸಂದರ್ಶನವನ್ನು ಕಂಡು ಗಂಡನು ಮೂಕವಿಸ್ಮಿತನಾದನು. ತನ್ನ ಹೆಂಡತಿ ಹೇಳಿದ್ದರಲ್ಲಿ ಎಷ್ಟೂ ಅವಾಸ್ತವವಿಲ್ಲ ಎಂದು
ಮನಗಂಡನು.
ತೋಟದೊಡತಿಯು ಪ್ರವಾಸಿಗರಾಗಿ ಬಂದ ಆ ದ೦ಪತಿಗಳ ಬುತ್ತಿಗಂಟು ಬಿಚ್ಚಿಗೊಡದೆ ಕರೆದೂಯ್ದಳು. ತಂಗಿಯನ್ನು ಎರಡು ದಿನ ತನ್ನಲ್ಲಿಟ್ಟುಕೊಂಡು ಅಕ್ಕನು ವಿಧವಿಧದ ಪಕ್ವಾನ್ನಗಳನ್ನುಣಿಸಿ, ರೇಶಿಮೆ – ಜರತಾರಿಯ ಸೀರೆ ಕುಪ್ಪಸಗಳ ಉಡುಗೊರೆಯನ್ನು ಮಾಡಿ, ಎತ್ತಿನ ಬಂಡಿಯಲ್ಲಿ ಕುಳ್ಳರಿಸಿ ಆಕೆಯ ಊರಿಗೆ ಕಳಿಸಿದಳು.
ಗಂಡನ ಸಂಶಯವು ದೂರವಾಗಿದ್ದರಿ೦ದ ಅವರಿಬ್ಬರೂ ಮೊದಲಿಗಿಂತ ಹೆಚ್ಚು ಸುಖದಿಂದ ಬಾಳ್ವೆಮಾಡತೊಡಗಿದರು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು