ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು
ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು
ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು
ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು.
ಎಲ್ಲ ಹೃದಯವ ಹೊಕ್ಕು – ಅಳೆದು ಜನುಮಗಳನ್ನು
ಎಲ್ಲ ಶೂಲೆಯನರಿದು – ಎರೆದು ಓಷಧಿಗಳನು
ಎಲ್ಲ ಹಿಂಸೆಯ ತೊಡೆದು – ಮುರಿದು ದುರ್ಗುಣಗಳನು
ಸೊಲ್ಲು ಸೊಲ್ಲಿಗೆ ಸತ್ಯ – ಕಾಣಿಸುವ ಗುರು ಶರಣು.
ನೀನು ನಡೆದುದೆ ಧರ್ಮ- ನೀನು ನುಡಿದುದೆ ಸತ್ಯ.
ನೀನಹಂಕಾರಗಳ – ಮೋಹ ರೋಷದ ಮಿಥ್ಯ
ಮಾನಾಭಿಮಾನಗಳ – ಹಾಯ್ದು ಕಂಡಿಹೆ ಸತ್ಯ.
ನೀನು ಪ್ರೇಮದ ಮೂರ್ತಿ – ಜಾಗ್ರತನು ನೀ ನಿತ್ಯ.
ಕೃಷ್ಣಟನಾಡಿತಮೆಲ್ಲ – ಹಾಸುಹೊಕ್ಕಾಗಿಹುದು
ಕೃಷ್ಣ ನೀನಾಗಿರಲು – ವಿಜಯರಾವಹುದಹುದು
ಈ ಕುರುಕ್ಷೇತ್ರದಲಿ – ನೀನು ಸಾರಥಿಯಾಗಿ
ಲೋಕ ರಕ್ಷಿಸು ಗಾಂಧಿ – ಸನ್ಮಹಾತ್ಮನೆ ಸಾಗಿ.
ಸತ್ವರಜತಮಗುಣವ – ಹಸುರು ಬಿಳಿ ಕೆಂಪುಗಳ
ನಿತ್ಯಕೇತನವೆತ್ತಿ – ಸ್ನೇಹದಿಂ ಲೋಕಗಳ
ಅತ್ಯಧಿಕ ವಾತ್ಸಲ್ಯ – ಅಭಯ ವಿಶ್ವಾಸಗಳ
ಸ್ತುತ್ಯ ಮೂರುತಿ ಶರಣು – ನೆನೆವೆ ನಿನ್ನಂಘ್ರಿಗಳ.
ಹತ್ತು ದಿಕ್ಕುಗಳಲ್ಲಿ – ಕರುಣವಾಹಿನಿ ಹರಿಸಿ
ಮತ್ತೆ ಬಿಂಬಿಸಿ ನಿನ್ನ – ನೆಲ್ಲ ಹೃದಯದೊಳಿರಿಸಿ
ಓ ಹಸನ್ಮುಖಿ ಬಾರ – ಶಾಂತಿ ಲೋಕದಿ ಸುರಿಸಿ
ಶ್ರೀಹಸಾದವ ನೀಡು- ಓ ಮಹಾತ್ಮನೆ ಹರಸಿ-
ವಾಣಿಯಲ್ಲಿ ಶ್ರೀರಾಮ – ರಾಮಚಂದ್ರನನಾಮ
ಕ್ಷೋಣಿಯಲಿ ರಘುರಾಮ – ನಾಮ ಪಾವನನಾಮ
ಸಕಲಕೆಲ್ಲಕು ಮರ್ದು – ರಾಂ ರಹೀಮರನಾಮ
ನಿಖಿಳದೇವರ ನಿಜವ – ನೊರೆವ ಸಾಧು ಸನಾಮ.
ನಿನ್ನ ಬಾಳೀ ಜಗದ- ರಕ್ಷಣೆಗೆ ಮುಡುಪಾಯ್ತು
ಸನ್ನುತನೆ ಭಾರತಿಯ – ಬಿಡುಗಡೆಗೆ ಎಡೆಯಾಯ್ತು
ಉನ್ನತಾಮಲ ಕೀರ್ತಿ – ಮಾನಿನಿಗೆ ಚಿರಮಾಯ್ತು.
ಮುನ್ನ ಸ್ವಾತಂತ್ರ್ಯಕ್ಕೆ – ಸುಸ್ಥಿರದ ಜಯಮಾಯ್ತು.
ಲೋಕವೇ ನಿನದಾಯ್ತು – ನೀನು ಸರ್ವರೊಳಿರಲು
ಶ್ರೀಕರಾಂಘ್ರಿಯ ರೇಣು – ಎಮ್ಮ ಶಿರದೊಳಗಿರಲು
ಸಾಕು ನಿನ್ನ ಸ್ಮರಣೆ – ಸಕಲರನ್ನೆಬ್ಬಿಸಲು
ಶೋಕದಳಿವುದು ದೇವ – ನಿನ್ನ ಕೃಪೆಯೊಂದಿರಲು.
*****