– ಪಲ್ಲವಿ –
ಕುಣಿಯುತ ಬಂದಿದೆ ದೀವಳಿಗೆ- ಝಣ-
ಝಣಿರೆನೆ ನೂಪುರ ಅಡಿಗಡಿಗೆ !
ತಣಿವನು ಹಂಚಲು ಎಡೆಯೆಡೆಗೆ- ಕುಣಿ-
ಕುಣಿಯುತ ಬಂದಿದೆ ದೀವಳಿಗೆ !
೧
ಮುಸುಕಿದ ಮೋಡವು ಮಸುಳಿತಿದೇನು ?
ಹಸನು ಹಸನು ಬೆಳುಗಾಲದ ಬಾನು !
ನಸುನಗುತಿಹ ಬಿಸುಪಿಲ್ಲದ ಭಾನು,
ರಸಮಯವಾಗಿದೆ ಬದುಕಿನ ಜೇನು!
ತಂದಿದ ಚೆಲುವನು ದೀವಳಿಗೆ-ಇದೊ
ತಂದಿದೆ ಚೆಲುವನು ದೀವಳಿಗೆ !….
ಚೆಂದದ ಹಸುಗೆಯು ಮನೆ-ಮನೆಗೆ !
೨
ತಿಳಿವಿನ ಬೀಜದ ಎಳಮೊಳಕೆಗಳೋ !
ಬೆಳಕಿನ ಬಳ್ಳಿಯ ನವಕಳಿಕೆಗಳೋ !
ತೊಳಗುವುವಿವು ದೀವಿಗೆಗಳ ಸಾಲೋ !
ಅಳಿಗತ್ತಲೆಗಿರುಳಲ್ಲಿಯು ಸೋಲೋ !
ತಂದಿದೆ ಪ್ರಭೆಯನು ದೀವಳಿಗೆ-ಕರೆ-
ತಂದಿದೆ ಪ್ರಭೆಯನು ದೀವಳಿಗೆ….
ಚೆಂದದ ಹಂದರ ಮನಮನೆಗೆ!
೩
ತಳೆದಿದೆ ಪರಿಸರ ಪರಿಜವನೊಲವು !
ಬೆಳಗಿ ಶುಭಾರತಿ ಬೆಳಸಿದ ನಲಿವು !
ಕಲಕಿದ ಎದೆ-ಮನಗಳ ಕಹಿನೋವು-
ತೊಲಗಿ, ಮೊಳಗುತಿದೆ ಒಸಗೆಯ ಸೋವು !
ತಂದಿದೆ ಒಲವನು ದೀವಳಿಗೆ-ಇದೊ
ತಂದಿದೆ ಒಲವನು ದೀವಳಿಗೆ…
ಕುಂದದ ಸಂತಸ ಮನೆ-ಮನೆಗೆ!
೪
ಶರದದ ಸಿದೇವಿಯ ಹೊಸ ಮೇಳ
ಸರಿಗಮದೊಂದಿಗೆ ಹಾಕುತ ತಾಳ,
ಸ್ವರವೇರಿಸಿ ಮಂಗಲಗೀತಗಳಽ
ಒರೆದು ಹುರುಳ ತುಂಬಿರುವುವು ಬಾಳ !
ಬಂದಿದೆ ತಂದಿದೆ ದೀವಳಿಗೆ-ಇದೊ
ಬಂದಿದೆ ತಂದಿದ ದೀವಳಿಗೆ….
ನಂದದನಂದನ ಮನೆ-ಮನೆಗೆ!
೫
ವಧುಗಳು ಮರೆತರು ವಿರಹದ ಕಾಟ,
ಹೃದ-ಹೃದಯದಿ ಪ್ರಣಯದ ಚೆಲ್ಲಾಟ!
ಸದನ-ಸದನದಲಿ ಸವಿ-ಸುಖದೂಟ-
ಇದುವೇ ದೀವಳಿಗೆಯ ಮರೆಮಾಟ!
ಕುಣಿಯುತ ಬಂದಿದೆ ದೀವಳಿಗೆ,-ಕುಣಿ
ಕುಣಿಯುತ ಬಂದಿದ ದೀವಳಿಗೆ
ತಣಿವನು ಬೀರಿದೆ ಜನಗಳಿಗೆ!
*****