ಧಾರವಾಡ –
ನನ್ನ ಭಾರವಾದ
ಹೃದಯದಿಂದಿಳಿದ
ಕವಿತೆ ಇದು
ನಿನ್ನ ಮಡಿಲೊಳಗಿಟ್ಟು
ಕೆಲ ಕಾಲ ತೂಗಿ
ನಗಿಸಿ – ನನ್ನೊಳಗಿಂದ
ಆಳವಾಗಿ
ಬದುಕುವ ಕಲೆಯ ಕಲಿಸಿದೆ ನನಗೆ
ನಿನ್ನ ನೆನೆಯುತ್ತೇನೆ ಅಹೋರಾತ್ರಿ
ಇಲ್ಲಿ
ಮೋಡಗಳ ನಡುವೆ ನಡೆದಾಡುವಾಗ
ನಗುವಾಗ ಅಳುವಾಗ ದುಃಖವಾದಾಗ
ಈ ನನ್ನ ಮನಸ್ಸು ಮುಟ್ಟುತ್ತದೆ
ಮಾಳಮಡ್ಡಿ
ಸಪ್ತಾಪುರ
ಗೊತ್ತು, ಗುರಿಯಿಲ್ಲದೆ ಅಲ್ಲಿ ಅಲೆದಿದ್ದೇನೆ
ಹುಡುಕಿದ್ದೇನೆ
ನನ್ನನ್ನು ನಾನೆ
ನನ್ನ ಕಥೆಗಳೋ – ಮುಟ್ಟಿದರೆ ಜುಮ್ಮೆನುವ
ಶೃತಿ ಮಾಡಿಟ್ಟ ವೀಣೆ
ನೀ ನನಗೆ ಕೊಟ್ಟಿರುವ ಆತ್ಮೀಯ ಸುಖಕ್ಕೆ
ಎದೆ ಕೊರೆವ ನೋವಿಗೆ
ನೀರಿಗೆ
ಹಾಲಿಗೆ
ಫೇಡೆಗೆ
ಕವಿತೆಗೆ
ತಾಯೀ,
ನಾ ನಿನಗೆ ಏನು ಕೊಟ್ಟಿದ್ದೇನೆ ?
*****