ಬೆಂಕಿಯುದರ ಹಡೆದ ತಂಪು ತೇಜ ಇವಳು
ಯಾರ ತಪೋಮಣಿಯೋ!
ಯಾವ ಆಟದ ಚೆಂಡೋ!
ಗೋಲಿ ಗುಂಡೋ!
ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ
ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ
ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ
ಪ್ರಿಯನನೋಲೈಸಿ ಪ್ರಣಯಕೇಳಿಯಲನವರತ
ರಮಿಸಿ ದಣಿಯದವಳು
ಹಾಲುನಗುತ್ತ ಇವಳ ಮುದ್ದಿನ ಕಂದ
ಇವಳ ಸೆರಗನೇ ಹಿಡಿದಾಡುವನು
ವಿರಹದಲ್ಲೊಣಗಿ ತಪತಪ ತಪಿಸಿದಾಗಿವಳು
ಮೇಲಿಂದೊಲವಿಳಿಯೆ ಹನಿಹನಿ
ಬಾಯ್ದೆರೆದು ಸವಿದು ಮೈ ಪುಲಕಗೊಂಡು
ಹಸಿರುಟ್ಟು ಹೂಮುಡಿದು ಹಣ್ಣ ನೆಡೆಮಾಡುವಳು
ಉಸಿರ ಚೀಲಗಳ ಹೆತ್ತು ಹೊತ್ತ ತುತ್ತಿಟ್ಟು ಸಲಹುವಳು
ಉಂಡು ಉಣಿಸಿ ಮಡಿಲಿಂಗದವಳು
ಹುಳುಗಳ ಕಚ್ಚಾಟ ಕಡಿದಾಟಗಳನೆಲ್ಲ
ನಸುನಗುತ ತಾಳಿಕೊಂಡು ಬಾಳುವಳು
ಆಗಾಗ ಆಯೆಂದು ನುಂಗಿ ನೀರುಕುಡಿದು
ಬೆಂಕಿ ಸೀನುಗಳ ಸೀನಿ
ಮತ್ತೆ ಏನೂ ಆಗಿಲ್ಲವೆಂಬಂತೆ ಮೌನತಾಳುವಳು
ಹಳೆಕತೆಗಳ ಮೆಲುಕು ಹಾಕುತ್ತ ತಾಂಬೂಲದಂತೆ
ಪಿಚಕ್ಕೆಂದುಗುಳಿ ಮೇಲೆ ಮಣ್ಣು ಮುಚ್ಚಿ
ಎಂದಿನಂತೆ ನಿರ್ಲಿಪ್ತ ಬೀಗುವಳು
ನಾನೆಂದೆಂಬ ದೊಂಬಿಗರನು ತಿಂದು ತೇಗುವಳು
ಅಮಲೇರಿ ಬುಗುರಿಯಾಡುವಳು
ಮುಪ್ಪರಿಯದ ಮುದುಕಿ ಇವಳಿಗೆ
ದಿನದಿನಕೂ ಹೊಸ ಹರೆಯ ಎಲ್ಲಿಂದ ಬರುವುದೋ?
ದಣಿದು ಬಂದವರ ತನ್ನ ಮಡಿಲಲ್ಲಿ ತಟ್ಟಿ
ಚಿರನಿದ್ರೆಯ ಸೆರಗು ಹೊದಿಸಿ
ಲಾಲಿ ಹಾಡಿ ಮಲಗಿಸುವಳು
ಈ ಜೋಗಿತಿಯ ಜೋಗುಳ ಹಾಡಿನಲ್ಲಿ
ಎಬ್ಬಿಸುವ ಹಾಡಾವುದೋ!
ಮಲಗಿಸುವ ಹಾಡಾವುದೋ!
ತಿಳಿಯದು
*****