(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು)
ನಿಂದಿರು ಕುಲುಂಕದಿರೆರಂಕೆಗಳ ನಿನ್ನ,
ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ,
ನಿನ್ನ ನಿರುಕಿಸಲೊರೆವೆನೊರೆವ ಕಳೆನುಡಿಯ
ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ! ೪
ಹೊನ್ನಿನಂಬಿಯ ಗಾಡಿಯಿಂದ ತೇಲಾಡು,
ಇನ್ನು ಪಾರದಿರೆನ್ನ ಬಳಿಯೆ ಸೊಗಗೂಡು;
ಚಿಟ್ಟೆ ನೀ ನೆನವೊಳೆನ್ನೆಳವೆಯನಳುಂಬಂ
ತಿಟ್ಟವಿಡೆ ಕಣ್ಮಲೆವುದೆಮ್ಮಯ ಕುಟುಂಬಂ! ೮
ಇನಿದು ಕಟ್ಟಿನಿದಮಮ ಹಸುಳೆಯೂ ಹೊತ್ತು
ಕನಸಂತೆ ಮುಗಿದುಡೆಯಾಟದೊಲವೆತ್ತು,
ತಂಗಿಯೊಡಗೂಡಿ-ಅಕಟವಳೆಲ್ಲಿಗಿಂದು?-
ಬೆಂಗೊಳುತ ಬೇಟೆಯಾಡಿದೆ ನಿಮ್ಮನಂದು. ೧೨
ಕಿರುಬೇಡನಂತೆ ಪೊದೆ ಪೊದೆ ಸೋದು ನಿಮ್ಮ
ನರೆಬರನು ಹೊರವಡಿಸಿ ಹಿತ್ತಿಲೊಳಗಮ್ಮ,
ಸೆರೆವಿಡಿದು ಮುದ್ದು ತಂಗಿಗ ನೀಡಲವಳು
ಗರಿಯ ದೂಳನು ಮಲ್ಲನೊರಸಲಳುಕುನಳು! ೧೬
*****