ಗಂಗೀ ಗೌರೀ ಹಾಡು – ೧

ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ ||
ಕೊಂಬಣಸ ಕೊರಳಽ ಹುಲಗೆಜ್ಜಿ | ಕೋಲ ||೧||

ಕೊಂಬುಽ ಆಣಸ ಕೊರಳ ಹುಲಗೆಜ್ಜಿ ಶಿವರಾಯಾ ||
ಗಂಗಿಽನ ತರವೋಽ ನಡದಾರ | ಕೋ ||೨||
* * *

ಹೆಳ್ಳಽದ ದಂಡಿಽಗಿ ಹೂವ ಕೋವೂ ಜಾಣಿ ||
ಲಿಂಗಕೊಂದ್ಹೂವಽ ದಯಮಾಡ | ಕೋ ||೩||

ಲಿಂಗಕೊಂದ್ಹೂವಽ ದಯಮಾಡಿದ್ರ ಮಾಡೇನ ||
ನಮ್ಮವ್ವ ನಮಗಽ ಬೈದಾಳ| ||೪||

ಹೆಳ್ಳಽದ ದಂಡಿಽಗಿ ಹೂವ ಕೋವೂ ಜಾಣಿ ||
ಲಿಂಗಕ್ಕೆರಡ್ಹೊವಽ ದಯಮಾಡ | ಕೋ ||೫||

ಲಿಂಗಕ್ಕೆರಡ್ಹೂವ ದಯಮಾಡಿದ್ರ ಮಾಡೇನ ||
ನಮ್ಮಪ್ಪ ನಮಗಽ ಬಡದಾನ| ಕೋ ||೬||

ನಿಮ್ಮವ್ವ ಬೈದಽರ ನಿಮ್ಮಪ್ಪ ಬಡಿದಽರ||
ಬೇಗ ಬಾ ಗಂಗಾ ಜಡಿಯಾಗ| ಕೋ ||೭||

ಬಂದಽರ ಬಂದೇನ ನೆಂಬಿಗಿಲ್ಲೋ ಶಿವನೆ||
ರಂಭ್ಯಾಽಳೊ ನಿನ್ನ ಮನಿಯಾಗ | ಕೋ ||೮||

ನನ್ನಾಣಿ ನಿನ್ನಾಣಿ ಮತ್ತ ನಿಂಗದಾಣಿ ||
ರಂಬಿಲ್ಲ ನನ್ನ ಮನಿಯಾಗ | ಕೋ ||೯||

ಬಂದಽರ ಬರುವೇನೊ ನೆಂಬಿಗಿಲ್ಲೋ ಶಿವನೆ ||
ಮಡದ್ಹ್ಯಾಳೊ ನಿನ್ನ ಮನಿಯಾಗ | ಕೋ ||೧೦||

ನನ್ನಾಣಿ ನಿನ್ನಾಣಿ ಮತ್ತ ದೇವಽರಾಣಿ ||
ಮಡದಿಲ್ಲ ನನ್ನ ಮನಿಯಾಗ | ಕೋ ||೧೧||
* * *

ಜಡಿಯಾಗ ಹೋಗೂದು ಗಿಣಿರಾಮ ಕಂಡಾನ
ಹೋಗಿ ಹೇಳ್ಯಾನಽ ಗೌರವ್ಗ | ಕೋ ||೧೨||

ಮನಗಿಽದ ಗೌರವ್ವ ಮೈಮುರಿದು ಎದ್ದಾಳ||
ತಣ್ಣೀರ ಗಿಂಡೀಲಿ ಮಕ ತೊಳೆದ| ಕೋ ||೧೩||

ತಣ್ಣೀರ ಗಿಂಡೀಲಿ ಮಕ ತೊಳೆದ ಗೌರವ್ವ
ಹ್ವಾದಾಳಣ್ಣಾಽನ ಅರಮನಿಗಿ | ಕೋ ||೧೪||

ಎಂದಿಲ್ಲ ಗೌರವ್ವ ಇಂದ್ಯಾಕ ಬಂದಾಳ ||
ಕುಂಡಽರ ಕುಡರೇ ಮಣಿಚೌಕಿ| ಕೋ ||೧೫||

ಕುಂಡಽರ ಬಂದಿಲ್ಲ ನಿಂದಽರ ಬಂದಿಲ್ಲ ||
ನಾ ಒಂದ ಕನಸ ಹೇಳಬಂದೆ | ಕೋ ||೧೬||

ಕೆರಿಮ್ಯಾಲಿ ಕೆರಿಹುಟ್ಟ ಕೆರಿಮ್ಯಾಲಿ ಮರಹುಟ್ಟಿ
ಮರದೆ ಮ್ಯಾಲೊಬ್ಽ ಬಲಿಹಾಕಿ | ಕೋ ||೧೭||

ಕೆರಿಯಂದ್ರ ಶಿವರಾಯಾ ಮರ ಅಂದ್ರ ಜಡಿಗೋಳು ||
ಬಲಿಯಂದ್ರ ಒಳಗೆ ಸಿರಿಗಂಗಿ | ಕೋ ||೧೮||

ದೇಶಾನೆ ಆಳವರಿಗೇಸೊಂದು ಹೆಂಡಽರ||
ನಿನಗ್ಯಾಕ ತಂಗೀ ಪರದುಕ್ಕ |ಕೋ ||೧೯||

ಕಿಡಿಕಿಽಡಿನಾದಾಳ ಕಿಡಿಚಂಡನಾದಾಳ ||
ಎಡವಿಽದ ಬೆರಳೊಂದರವಿಲ್ಲ | ಕೋ ||೨೦||

ಎಡವೀದ ಬೆರಳೊಂದರವಿಲ್ಲ ಗೌರವ್ವ ||
ಬಂದಾಳ ತನ್ನ ಆರಮನಿಗೆ | ಕೋ ||೨೧||
* * *

ಗೊಬ್ಬೂರ ಹಾದೀಲಿ ಒಬ್ಬಯ್ಯ ಬರತಾನ ||
ಅಬ್ಬರಣಿ ಗೌರೀ ನೀರಿಽಡ | ಕೋ ||೨೨||

ಒಂದ್‌ ಗಿಂಡಿ ಇಡು ಅಂದ್ರ ಎರಡ ಗಿಂಡಿ ಇಟ್ಟಾಳ ||
ನಿನಗಿಬ್ಬರೇನ ಪುರುಷಽರ | ಕೋ ||೨೩||

ಅಯ್ಯಯ್ಯ ಶಿವಶಿವ ಅನಕಽದ ಮಾತ್ಯಾಕೊ ||
ಸರವ ಕೆಂಜೆಽಡಿ ಮುಣಿಮುಕುಟ | ಕೋ ||೨೪||

ಸರವಽನೆ ಕೆಂಜೆಽಡಿ ಮಣಿಮುಕುಟದೊಳಗಿನ ||
ಸಿರಿಗಂಗಾಗೊಂದಽ ನಿನಗೊಂದ | ಕೋ ||೨೫||

ಗೊಬ್ಬರ ಹಾದೀಲಿ ಒಬ್ಬಯ್ಯ ಬರತಾನ ||
ಅಬ್ಬರಣಿ ಗೌರಿಽ ಎಡಿಮಾಡ | ಕೋ ||೨೬||

ಒಂದೆಽಡಿ ಮಾಡಂದ್ರ ಎರಡೆಽಡಿ ಮಾಡ್ಯಾಳ ||
ನಿನಗಿಬ್ಬರೇನ ಪುರುಷಽರ | ಕೋ ||೨೭||

ಅಯ್ಯಯ್ಯ ಶಿವಶಿವ ಅನಕಽದ ಮಾತ್ಯಾಕೊ ||
ಸರವ ಕೆಂಜೆಽಡಿ ಮಣಿಮುಕುಟ | ಕೋ ||೨೮||

ಸರವಽನೆ ಕೆಂಜೆಽಡಿ ಮಣಿಮುಕುಟದೊಳಗಿಽನ ||
ಸಿರಿಗಂಗಿಗೊಂದಽ ನಿಮಗೊಂದ | ಕೋ ||೨೯||

ಗಂಗೀನ ತಂದಽರ ತಂಗೀನ ತಂದಂಗ ||
ನಿಂಗಽವ ತಾರ ಬಡಿತೇನ | ಕೋ ||೩೦||

ಗಂಗಿಽನ ತಂದಽರ ತಂಗೀನ ತಂದಂಗ ||
ಖೆಂಡಽವ ತಾರಽ ಬಡಿತೇನ | ಕೋ ||೩೧||
* * *

ಬೆಳ್ಳಿ ಬಟ್ಟಿಲದಾಗ ಎಳ್ಳೆಣ್ಣಿ ತಕ್ಕೊಂಡು ||
ಗೌರ್ಹ್ಯೋದಳವನಽ ತೆಲಿ ಹೊಸ | ಕೋ ||೩೨||

ತೆಲಿಯಂಬ ಭಾಂವಕ ಒತ್ತ್ಯಾಳ ವರಿಸ್ಯಾಳ ||
ಟೊಂಕಂಬು ಭಾಂವಽಕಿಳಿದಾಳ | ಕೋ ||೩೩||

ಟೊಂಕೆಂಬೊ ಭಾಂವಕ ಒತ್ತ್ಯಾಳ ವರಿಸ್ಯಾಳ||
ಪಾದಂಬ ಭಾವಽ ಕಿಳಿದಾಳ | ಕೋ ||೩೪||

ಪಾದಂಬೊ ಭಾಂವಕ ಒತ್ತ್ಯಾಳ ವರಿಸ್ಯಾಳ ||
ನೆಲ ಸೋಸಿ ಗಂಗಿ ಹೆರಿದಾಳ | ಕೋ ||೩೫||

ಗಂಗ್ಹ್ಯೋದ ಮರುದಿಽನ ಗೌರಿ ಮುಟ್‌ನಾದಾಳ ||
ಮಿಂದೆನಂದಽರಽ ನೀರಿಲ್ಲ | ಕೋ ||೩೬||

ಮಿಂದೇನು ಅಂದಽರ ನೀರಿಲ್ಲ ಶಿವರಾಯಾ ||
ಹಾಲಿಽನ ಕ್ವಡಾ ಖಳವ್ಯಾನ | ಕೋ ||೩೭||

ಹಾಲೀಲಿ ಮಿಂದಿದರ ಹೋಗಽವು ಮುಡಚಾಟ||
ತಂಗಿ ಗಂಗಮನ ಖಳವಽರಿ | ಕೋ ||೩೮||

ಗೆಂಗ್ಹ್ಯೋದ ಮರದಿಽನ ಗೌರಿ ಮುಟ್‌ನಾದಾಳ ||
ಮಿಂದೇನಂದಾರಽ ನೀರಿಲ್ಲ | ಕೋ ||೩೯||

ಮಿಂದೇನು ಅಂದಽರ ನೀರಿಲ್ಲ ಶಿವರಾಯಾ||
ತುಪ್ಪಽದ ಕ್ವಡಾ ಖಳವ್ಯಾನ | ಕೋ ||೪೦||

ತುಪ್ಪೀಲಿ ಮಿಂದಿದರ ಹೋಗಽವ ಮುಡಚಾಟ ||
ತಂಗಿ ಗಂಗಮನ ಖಳುವಽರಿ| ಕೋ ||೪೧||
*****

ಶಿವನು ಗಂಗೆಯನ್ನು ತರುವುದಕ್ಕೆ ನಂದಿಯನ್ನೇರಿ ಹೊರಡುತ್ತಾನೆ. (ನುಡಿ ೧-೨). ಹಳ್ಳದ ದಂಡೆಯ ಮೇಲೆ ಹೂಗಳನ್ನು ಎತ್ತುತ್ತಿದ್ದ ಗಂಗೆಯೊಡನೆ ಪರಿಪರಿಯಾಗಿ ಮಾತಾಡಿ ಕೊನೆಗೆ ಅವಳನ್ನು ತನ್ನ ಬಡೆಯಲ್ಲಿ ಕುಳ್ಳಿರಿಸಿಕೊಂಡು ಬರುತ್ತಾನೆ (೩-೧೧). ಇದನ್ನು ಒಂದು ಗಿಳಿಯು ಕಂಡು ಗೌರಿಗೆ ತಿಳಿಸಲು ಅವಳು ಸಿಟ್ಟಾಗಿ ತವರುಮನೆಗೆ ಹೋಗುತ್ತಾಳೆ. ಅಲ್ಲಿ ತವರವರು ಈಕೆಯನ್ನೆ ಜರೆಯುತ್ತಾರೆ. ಆದ್ದರಿಂದ ಅವಳು ತಿರುಗಿ ಶಿವನ ಆರಮನೆಗೆ ಬರುತ್ತಾಳೆ(೧೨-೨೧). ಆಗ ಶಿವನು ಒಂದೂರಿನಿಂದ ಯತಿಯ ವೇಷದಲ್ಲಿ ಬರುತ್ತಾನೆ. ಅವನು ಹಾಗೆ ಬಂದು ಗೌರಿಯನ್ನು ನೀರು ಬೇಡಲು ಅವಳು ಒಂದು ಗಿಂಡಿಗೆ ಬದಲು ಎರಡು ಗಿಂಡಿಗಳನ್ನು ಕೊಡುತ್ತಾಳೆ. ಅದಕ್ಕೆ ಶಿವನು “ನಿನಗೆ ಪುರುಷರು ಇಬ್ಬರೇನೇ?” ಎಂದು ಚೇಷ್ಟೆ ಮಾಡುತ್ತಾನೆ. ಅವಳು ಅವನ ಜಡೆಯೊಳಗಿನ ಗಂಗೆಯ ಸಮಾಚಾರವನ್ನು ಬೈಲಿಗೆಳೆದು ಅವನಿಗೇ ಗೇಲಿಮಾಡುತ್ತಾಳೆ. ಊಟಕ್ಕೆ ಎಡೆಬಡಿಸುವಾಗಲೂ ಮಾತು ಇಲ್ಲಿಗೇ ಬಂದುಮುಟ್ಟುತ್ತದೆ. ಆಗ ಶಿವನು ಗಂಗೆಯನ್ನು ತಾನು ತಂದಿಲ್ಲವೆಂದು ಆಣೆಯನ್ನು ಮಾಡುವುದಕ್ಕೆ ಸಿದ್ಧನಾಗುತ್ತಾನೆ (೨೨-೩೧) ಗೌರಿಯು ಮತ್ತೊಂದು ಹಂಚಿಕೆಯನ್ನು ಮಾಡುತ್ತಾಳೆ. ಎಣ್ಣೆಯನ್ನು ತಕ್ಕೊಂಡು ಅವನ ಜಡೆಗಳಿಗೆ ಹೂಸಲು ಆರಂಭಿಸುತ್ತಾಳೆ. ಆಗ ಗಂಗೆಯು ಗೌರಿಗೆ ಗೊತ್ತಾಗದಂತೆ ಮೆಲ್ಲಗೆ ಸೊಂಟದ ಕಡೆಗೆ ಇಳಿಯುತ್ತಾಳೆ. ಗೌರವ್ವನು
ಹಾಗೇ ಕೆಳಕೆಳಕ್ಕೆ ಬಂದಹಾಗೆ ಗಂಗೆಯೂ ಅದಕ್ಕಿಂತ ಕೆಳಗಡೆಗೆ ಸರಿಯುತ್ತ ಕೊನೆಗೆ ನೆಲಮುಟ್ಟ ಹೊಳೆಯಾಗಿ ಹೆರಿದುಹೋಗುತ್ತಾಳೆ (೩೨-೩೫). ಮರುದಿನ ಗೌರಿಯು ರಜಸ್ಲೆಯಾಗಲು, ಮೈದೊಳೆಯಲು ನೀರಿಲ್ಲದಂತಾಗುತ್ತದೆ. ಶಿವನು ಬೇಕೆಂತಲೇ ಚೇಷ್ಟೆಯಿಂದ ಎಣ್ಣೆಯ ಹಾಗೂ ತುಪ್ಪದ ಕೊಡಗಳನ್ನು ಸ್ನಾನಕ್ಕೆಂದು ಕಳಿಸುತ್ತಾನೆ. ಗೌರಿಯ ಗರ್ವಭಂಗವಾಗುವುದು. ಗಂಗೆಯನ್ನು ಕರೆತಾರೆನ್ನುವಳು (೩೬-೪೧).

ಛಂದಸ್ಸು:- ತ್ರಿಪದಿಯೇ ಆಗಿದೆ.

ಶಬ್ದಪ್ರಯೋಗಗಳು:- ಕೊಂಬಣಸ ಮತ್ತು ಹುಲಗೆಜ್ಜಿ ಇವು ಎತ್ತಿನ ಆಭರಣಗಳು. ತರವೋ=ತರಲಿಕ್ಕೆ. ದಯಮಾಡು=ಕೊಡು. ನೆಂಬಿಗೆ=ನಂಬಿಗೆ. ರಂಭ್ಯಾಳ=ಮಡದಿ(ರಂಭೆ) ಇದ್ದಾಳೆ. ಮನಗು=ಮಲಗು. ಮಕ=ಮುಖ. ಚಾವುಕಿ=ಪೀಠ. ಭಾಂವಕ್=ಸ್ಥಾನಕ್ಕೆ. ಮುಟ್ಟಾಗು=ರಜಸ್ವಲೆಯಾಗು. ಖಳವ್ಯಾನ=ಕಳಿಸಿದ್ದಾನೆ. ಮುಡಚಟ್ಟ=ಮೈಲಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ಕಳೆಯಲಿ ತಾಯಿ
Next post ಭೂಮಿಯ ತಾಪದಿಂದ ತಟ್ಟಿಲಿರುವ ಅನಾಹುತಗಳು

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…