ಉಳ್ಳಯ್ಯಾ, ದಯೆ ಗೊಳ್ಳಯ್ಯಾ!
“ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ!
ಹುಟ್ಟು ಹೊಲೆಯ! ಪೋಲಾ! ಚಂಡ ಚಂಡಾಳ!
ಬೊಟ್ಟೆ! ಬೊಗ್ಗುರೆ!” ಎಂದು ಹೆಸರೆತ್ತಿ ಕೂಗಿ
ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ!
ಕಣ್ಣು, ಮೂಗು, ಕಿವಿ, ಕೈ, ಕಾಲು, ಗಂಟು-
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು.
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೆ ನಮ್ಮ ಮೈ ಅಂಟು ?
ಹಾಸಿಗೆ ತಗಣೆ ಮುದ್ದಿಪ ನಿಮ್ಮ ಮೈಗೆ
ಹೇಸಿಗೆ ಅಹುದೆ ಮುಟ್ಟಲು ನಮ್ಮ ಕೈಗೆ?
ವಾಸಕ್ಕೆ ನಮಗೂರ ಹೊರಗೊಂದು ಎಡೆಯೇ?
ಆ ಸುದ್ದ ಹಂದಿನಾಯ್ಗಳಿಗಿಂತ ಕಡೆಯೆ?
ಒಳಹೊಕ್ಕು ಅನ್ನ ತಿಂಬುದು ಮನೆ ಬೆಕ್ಕು;
ಉಳುವರು ನಾವು! ಹಾ! ನಮಗಿಲ್ಲ ಹಕ್ಕು!
ಅಳುವ ತಮ್ಮಗೆ ಸರಿ ಮಣೆಯನ್ನು ಇಕ್ಕು;
ಕಲಿಯುಗದಲಿ ನಿನಗಿದು ಪುಣ್ಯವಕ್ಕು!
ಮಾರಿ ಹೊಲೆಯ, ಬಾವಿ, ಕೆರೆ ಮುಟ್ಟಲಾರೆ.
ಊರ ಸಾಲೆಗಳಂತೆ: ನಮಗೊಂದು ಬೇರೆ!
“ದೂರಕ್ಕೆ ಪೋ! ಪೋ!” ಯಾವುದೀ ನ್ಯಾಯ?
ಹಾರುವ! ಮಾಡಿದ್ದುಣ್ಣುವೆ, ಮಹಾರಾಯಾ!
ಅರರೆ! ಕಾಲಡಿಯ ಕುಂಬಳಕೆ ಕಣ್ಮುಚ್ಚಿ,
ಪರದೇಶ ಕಾಯಿದೆ ಸಾಸಿವೆ ಕಾಳು ಹೆಚ್ಚಿ,
ಹಿರಿದು ಹಬ್ಬಿಸುವ ಬೊಬ್ಬೆಯದೇಕೆ ಹೇಳು?
ಹೊರದೊಬ್ಬು ಮೊದಲು ನಿನ್ನಂಗಳ ಧೂಳು!
ನೋಡು ಸ್ವರಾಜ್ಯಕ್ಕೆ ನಾವೂರುಗೋಲು!
ನೀಡಣ್ಣ! ದಮ್ಮಯ್ಯ! ಕೊಡು ಸರಿ ಸಾಲು!
ಬೇಡಿದಾಗಲೆ ಬಿಟ್ಟುಕೊಡುವುದೆ ಮೇಲು!
ಬೇಡ ನಾಂ ಸೆಳೆದು ಕೊಂಬೆವು ನಮ್ಮ ಪಾಲು!
ನಂದಿಸು ಕಿಡಿಯಲ್ಲಿ ಹೊಲೆಯನ ಹಗೆಯಾ!
ಬಂದಿಸು ಕೈಗೆ ಕೈ! ನಮ್ಮ ಸಲುಗೆಯಾ
ಹೊಂದಿಸು! ಸಂದಿಸು ಮೊಗದಲ್ಲಿ ನಗೆಯಾ!
ಹಿಂದು ದೇವಿಯು ಘಲ್ಲೆಂಬಳು ಕಾಲಂದುಗೆಯಾ!
*****
(ಕವಿಶಿಷ್ಯ)