ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.
ಬೆಳಕಿನ ಕಣ್ಣುಗಳಿಂದಾ ಸೂರ್‍ಯನು ನೋಡುವನು, ಬಿಸಿಲೂಡುವನು;
ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರದೂಡುವನು.
ಬಂಗಾರದ ಚೆಲು ಬಿಸಿಲ ಕಿರೀಟದ ಶೃಂಗಾರದ ತಲೆ ಎತ್ತುವನು;
ತೆಂಗಿನ, ಕಂಗಿನ, ತಾಳೆಯ, ಬಾಳೆಯ ಅಂಗಕೆ ರಂಗನು ಮೆತ್ತುವನು.
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಹೊಳೆಯುವನು;
ಕೂಡಲೆ ಕೋಣೆಯ ಕತ್ತಲೆ ಕೊಳೆಯನು ತೊಳೆಯುವನು, ರವಿ ಹೊಳೆಯುವನು.
ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು, ಕಣ್ ಬಿಡಿಸುವನು;
ಹುಲು, ಗಿಡ, ಹೂವಿಗೆ ಪರಿಪರಿ ಬಣ್ಣವ ಉಡಿಸುವನು, ಹನಿ ತೊಡಿಸುವನು.
ಏರುವನು, ರವಿ, ಏರುವನು; ಬಾನೊಳು ಸಣ್ಣಗೆ ತೋರುವನು;
“ಏರಿದವನು ಚಿಕ್ಕವನಿರಬೇಕೆಲೆ,” ಎಂಬಾ ಮಾತನು ಸಾರುವನು.
*****
(ಕವಿಶಿಷ್ಯ)