“Happy families are all alike; every unhappy family is unhappy in its own way”. ಇದು ಕಾದಂಬರಿಯ ಪ್ರಾರಂಭಿಕ ಸಾಲುಗಳು. ಕೌಟಂಬಿಕ ಸತ್ವವನ್ನು ಎರಡೇ ವಾಕ್ಯಗಳಲ್ಲಿ ಹಿಡಿದಿಟ್ಟ ಅಪೂರ್‍ವ ನುಡಿ.
ಆತ ಅನ್ನಾಳ ಸಹೋದರ, ಒಬ್ಲೋನಸ್ಕಿ.. ಮಕ್ಕಳನ್ನು ನೋಡಿಕೊಳ್ಳುವ ಪ್ರೆಂಚ್ ಗವರ್ನೆಸ್‌ಳೊಂದಿಗೆ ಆತನ ಅನೈತಿಕ ಸಂಬಂಧ ಪತ್ನಿ ಡೊಲಿಗೆ ತಿಳಿದು ಕುಟುಂಬದಲ್ಲಿ ಬಿರುಕು ಉಂಟಾಗಿದೆ. ಆ ಕಂದಕಕ್ಕೆ ಸೇತುವೆ ಕಟ್ಟಲು ಬಂದ ತಂಗಿ ಅನ್ನಾ ಅಣ್ಣ ಅತ್ತಿಗೆಯರ ಸಂಸಾರವನ್ನು ಸರಿಪಡಿಸುತ್ತಾಳೆ. ಆದರೆ ಅದಕ್ಕೆ ವಿಪರ್ಯಾಸವೆನ್ನುಂತೆ ತಾನೆ ಇನ್ನೊಂದು ಅಸಂಗತ ಸಂಬಂಧದಲ್ಲಿ ಬಂಧಿಯಾಗಿಬಿಡುತ್ತಾಳೆ. ಬುದ್ಧಿವಂತಿಕೆ, ಸೌಂದರ್ಯ, ಆಕರ್ಷಣೆಗಳೇ ಮೈತಳೆದಂತೆ ಇರುವ ಅನ್ನಾ ಸಹಜವಾಗಿಯೇ ಡಾಶಿಂಗ್ ಪರ್ಸನ್ಯಾಲಿಟಿಯ ಮಿಲಿಟರಿ ಅಧಿಕಾರಿ ವ್ರೋನ್ಸ್ಕಿಯಲ್ಲಿ ಅನುರಕ್ತಳಾಗುತ್ತಾಳೆ. ತನ್ನ ಪತಿ ಹಾಗೂ ಎದೆಯೆತ್ತರಕೆ ಬೆಳೆದ ಮಗನನ್ನು ತ್ಯಜಿಸಿ ಮೋಹಪ್ರೇರಿತಳಾಗಿ ಆತನೊಂದಿಗೆ ಹೊರಟು ಬರುತ್ತಾಳೆ. ಇದು ಟಾಲ್ ಸ್ಟಾಯ್ ಬರೆದ ಅನ್ನಾ ಕರೆನಿನ್ ಕಾದಂಬರಿಯ ಚಿತ್ರಣ.
ಪಿಟರಬರ್ಗ್ಸನ ಅಧಿಕಾರಿಶಾಹಿ ವರ್ಗದ ದೊಡ್ಡ ಹುದ್ದೆಯಲ್ಲಿ ಇರುವ ಕರೆನಿನ್ ಅನ್ನಾಳ ಪತಿ. ಆಕೆಗಿಂತ ೨೦ ವರ್ಷಕ್ಕೆ ಹಿರಿಯ. ಪ್ರಾಯದ ವ್ಯತ್ಯಾಸ ಹಾಗೂ ನೈತಿಕ ನೆಲೆಯಲ್ಲಿ ಶ್ರೇಷ್ಟನಾಗಿರುವ ಕೆರನಿನ್ ಪ್ರೇಮದ ತುಡಿತದಲ್ಲಿ ಪರಿತಪಿಸುವ ಅನ್ನಾಳಿಗೆ ಅನುರೂಪನೆನಿಸುವುದಿಲ್ಲ. ಹೀಗಾಗೆ ಆಕೆ ವ್ರೋನ್ಸ್ಕಿಯಲ್ಲಿ ಮೋಹಿತಳಾಗುತ್ತಾಳೆ. ಡೊಲಿಯ ತಂಗಿಯಲ್ಲಿ ಆಕರ್ಷಿತನಾಗಿದ್ದ ಆತ ಅನ್ನಾಳ ಪರಿಚಯವಾಗುತ್ತಲೇ ಕಿಟ್ಟಿಯಿಂದ ವಿಮುಖನಾಗಿ ಅನ್ನಾಳನ್ನು ಪ್ರೀತಿಸತೊಡಗುತ್ತಾನೆ. ಇದನ್ನು ತಿಳಿದು ಕರೆನಿನ್ ತನ್ನ ಸಾಮಾಜಿಕ ವರ್ಚಸ್ಸಿಗೆ ಇದರಿಂದ ಉಂಟಾದ ಧಕ್ಕೆಯನ್ನು ಸರಿಪಡಿಸಿಕೊಳ್ಳುವುದೇ ಮುಖ್ಯವೆನ್ನುವಂತೆ ಆಕೆಯನ್ನು ಕ್ಷಮಿಸುತ್ತಾನೆ. ಅತಿಯಾದ ಉದಾರಿ, ಧಾರ್ಮಿಕ ಎಂಬಂತೆ ವರ್ತಿಸುತ್ತಾನೆ. ಆಕೆಯನ್ನು ಹೀಯಾಳಿಸುವುದಿಲ್ಲ ಜಗತ್ತೆಲ್ಲ ಆತನ ಗುಣವನ್ನು ಹೊಗಳುತ್ತದೆ. ಆದರೆ ಸ್ತ್ರೀಯಾಗಿ ಅನ್ನಾ ನಿರೀಕ್ಷಿಸಿದ ಪ್ರೀತಿ ಆತನಿಗೆ ಆಕೆಯ ನೀಡಲಾಗಲಿಲ್ಲ. ಹೆಂಡತಿ ನಡೆತೆಗೆಟ್ಟ ವರ್ತನೆಯನ್ನು ತಿಳಿದು ಆಕೆಯನ್ನು ಜರಿಯದೇ ಅಲ್ಲಿಯೂ ನಟನೆಯ ಔದಾರ್ಯವನ್ನು ತೋರ್ಪಡಿಸುವುದು ಬೂಟಾಟಿಕೆ ಎಂದೆನಿಸುತ್ತದೆ. ಹೀಗಾಗೆ ಆಕೆ ಗಂಡ ಮತ್ತು ಹನ್ನೆರಡು ವರ್ಷದ ಮಗನ್ನು ಬಿಟ್ಟು ವ್ರೋನ್ಸ್ಕಿಯನ್ನು ಹಿಂಬಾಲಿಸಿ ಹೋದರೂ ಪ್ರೀತಿಯ ಉನ್ಮಾದ ತೀರುತ್ತಲೇ ಆಕೆಗೆ ಬದುಕು ದುರ್ಭರವೆನಿಸುತ್ತದೆ. ಹೆತ್ತ ಮಗನ ನೆನಪು ಹೊಂಚುಹಾಕುತ್ತದೆ. ಜೊತೆಯಲ್ಲಿ ಹೆಣ್ಣಿನ ಗೀಳು ಹತ್ತಿಸಿಕೊಂಡ ವ್ರೋನ್ಸ್ಕಿಯ ಎಲ್ಲ ವ್ಯವಹರಗಳು ಆಕೆಗೆ ದುಖಃವನ್ನುಂಟುಮಾಡುತ್ತವೆ. ಆತನಿಗಾಗಿ ಎಲ್ಲವನ್ನೂ ತ್ಯಜಿಸಿ ಬಂದ ಆಕೆ ಆತನಿಂದ ಮೋಸಕ್ಕೊಳಗಾದಂತೆ ಭಾವಿಸಿದರೆ ವ್ರೋನ್ಸ್ಕಿಗದು ಸಾಮಾನ್ಯ ಗಂಡಿನ ಸ್ವಭಾವವೆನಿಸುತ್ತದೆ. ಆತನೆಂದು ಮದುವೆ ಎಂಬ ಬಂಧನದಲ್ಲಿ ವಿಶ್ವಾಸ ಇರಿಸಿದವನಲ್ಲ. ಆದರೆ ಕೊನೆಯಲ್ಲಿ ವಿವಾಹದ ನಿರ್ಧಾರ ಕೈಗೊಂಡು ಆಕೆಗೆ ತನ್ನಿಂದ ದೂರವಾಗಲು ಹೇಳಿದಾಗ ಆಕೆ ಕುಸಿದುಹೋಗುತ್ತಾಳೆ. ಬದುಕನ್ನು ಕೊನೆಗಣಿಸಿಕೊಳ್ಳಲು ನಿರ್ಧರಿಸಿ ಆತ್ಮಹತ್ಯೆಗೈಯುತ್ತಾಳೆ.
ಇದಕ್ಕೆ ವಿಭಿನ್ನವೆನ್ನುವಂತೆ ಚಿತ್ರಿಸಿದ ಇನ್ನೊಂದು ಜೋಡಿಗಳು ಕಿಟ್ಟಿ ಮತ್ತು ಲೆವಿನ್. ವ್ರೋನ್ಸ್ಕಕಿಯನ್ನು ವಿವಾಹವಾಗುವಂತೆ ತಾಯಿ ಪ್ರಚೋದಿಸಿದರೂ ಕೊನೆಯಲ್ಲಿ ಕಿಟ್ಟಿ ತನ್ನನ್ನು ಆರಾಧಿಸುತ್ತಿದ್ದ ಲೆವಿನ್ನನ್ನೆ ವಿವಾಹವಾಗಿ ಸುಂದರ ಬದುಕು ಪಡೆಯುತ್ತಾಳೆ. ಡಾಲಿ ಮತ್ತು ಒಬ್ಲೊನೊಸ್ಕಿಯ ಸಂಸಾರದಲ್ಲಿ ಡಾಲಿಯ ತ್ಯಾಗ ಹಾಗೂ ಹೊಂದಾಣಿಕೆ ಬದುಕನ್ನು ಸಸಾರಗೊಳಿಸುತ್ತದೆ. ಆದರೆ ಪತಿಯನ್ನು ತ್ಯಜಿಸಿ ಪ್ರಿಯಕರನ ಹಿಂಬಾಲಿಸಿ ಬಂದ ಅನ್ನಾಳ ಬದುಕು ಮಾತ್ರ ಪಟಬಿಚ್ಚಿದ ಹಾಯಿದೋಣಿಯಂತೆ ಅತಂತ್ರವಾಗಿ ಕೊನೆಯಲ್ಲಿ ಮುಳುಗಿಹೋಗುತ್ತದೆ.
ಕಾದಂಬರಿಯ ತಂತ್ರಗಾರಿಕೆ ಎಂದರೆ ವೈರುಧ್ಯಗಳ ಹೆಣೆಯುವುದರಲ್ಲಿ. ಸಾಂಪ್ರದಾಯಿಕ ಮೌಲ್ಯಗಳ ಸಾದರ ಪಡಿಸುವ ಮಾಸ್ಕೋ ಹಾಗೂ ಆಧುನಿಕ ಪಾಶ್ಚಿಮಾತ್ಯ ಜೀವನ ಶೈಲಿಯ ಹೊಂದಿಸಿಕೊಂಡ ಪೀಟರ್‍ಸಬರ್ಗ, ಹಾಗೆ ಮದುವೆ, ಸುಖದಾಂಪತ್ಯ, ಹೊಲ ಆರೋಗ್ಯಕರ ಮನಸ್ಸು ಅರ್ಥಪೂರ್ಣ ಬದುಕಿಗೆ ಸಾಕ್ಷಿಯಾಗಿ ನಿಲ್ಲುವ ಲೆವಿನ್, ಅದಕ್ಕೆ ವಿರುಧ್ಧವಾಗಿ ಯೋಧನಾಗಿ ಖ್ಯಾತಿ ಹೊಂದಿದ್ದರೂ, ವಿನಾಶಕಾರಿ ಮೋಹ, ನಗರ ಬದುಕಿನ ವ್ಯಾಮೋಹದ, ಶ್ರೀಮಂತ ದುರ್ನಿತಿಯ ಜೀವನ ನಡೆಸುವ ವ್ರೋನ್ಸ್ಕಿ, ಅದರಂತೆ ಅನ್ನಾ, ವ್ರೋನ್ಸ್ಕಿ ಮತ್ತು ಲೆವಿನ್ರಲ್ಲಿ ಇರುವ ಜೀವನ ಪ್ರೀತಿಗೆ ಬೇರೆಯಾಗಿ ವ್ಯಾವಹಾರಿಕವಾಗಿ ಬದುಕುವ ಕರೆನಿನ್ ಇವೆಲ್ಲವುಗಳನ್ನು ಹೆಣೆಯುವುದರಲ್ಲಿ ಟಾಲ್ ಸ್ಟಾಯ್ ಅದ್ವಿತೀಯತೆ ಮೆರೆದಿದ್ದಾರೆ.
ಆ ಕಾಲದ ಸಾಮಾಜಿಕ ಸಿದ್ಧಾಂತಗಳ ಮೇಲೆ ಕಾದಂಬರಿಯ ಪಾತ್ರಗಳು ಹಾಗೂ ಪ್ರತಿಕ್ರಿಯೆ ಬೆಳಕು ಚೆಲ್ಲುತ್ತದೆ. ಅನೈತಿಕತೆಯ ವಿಷಯವಸ್ತುವನ್ನು ಪ್ರಸ್ತುತ ಪಡಿಸುವ ಇತರ ಕಾದಂಬರಿಗಳಿಗಿಂತ ಈ ಕಾದಂಬರಿ ಭಿನ್ನವಾಗಿ ನಿಲ್ಲುತ್ತದೆ. ಕಾರಣ ಅನ್ನಾ ಮತ್ತು ವ್ರೋನ್ಸ್ಕಿಯ ಅನೈತಿಕ ಸಂಬಂಧ ಮಾನವ ಸಹಜ ಗುಣವನ್ನು ಪ್ರತಿಪಾದಿಸುವುದು ಹಾಗಾಗೆ ಅದಕ್ಕಿರುವ ಸಾಮಾಜಿಕ ನೈತಿಕ ಮುಖಗಳು ಕೊನೆಯಿಲ್ಲದಂತಹ ಸಾಧ್ಯತೆಗಳನ್ನು ಪ್ರಚುರಪಡಿಸುತ್ತವೆ. ಡೋಲಿ ಮತ್ತು ಒಬ್ಲೊನ್ಸ್ಕಿ ಕಿಟ್ಟಿ ಹಾಗೂ ಲೆವಿನ್, ಅನ್ನಾ ಮತ್ತು ಕರೆನಿನ್. ಕಾದಂಬರಿಯಲ್ಲಿ ಬರುವ ಈ ಮೂರು ಕುಟುಂಬಗಳು ವಿಭಿನ್ನವಾಗಿ ತೆರೆದುಕೊಳ್ಳುತ್ತವೆ.
ಅನ್ನಾ ಮತ್ತು ವ್ರೋನ್ಸ್ಕಿಯ ಸಂಬಂಧ ಪರಿಶುಧ್ಧ ಪ್ರೇಮದ ಮೇಲೆ ನಿಂತ ಸಂಬಂಧವಲ್ಲ. ಅಲ್ಲಿರುವುದು ದೈಹಿಕ ಆಕರ್ಷಣೆ, ಮೋಹಭರಿತ ವಿವೇಚನಾ ರಹಿತ ನಿರ್ಧಾರಳು ಆಕೆಯ ಬದುಕನ್ನು ಬಲಿತೆಗೆದುಕೊಳ್ಳುತ್ತವೆ. ವ್ರೋನ್ಸ್ಕಿ ಮೂಲತಃ ಸ್ತ್ರೀಮೋಹಿ. ಸಾಂಸಾರಿಕ ಬದುಕಿನ ಬಗ್ಗೆ ವ್ರೋನ್ಸ್ಕಿ ಹಾಗೂ ಲೆವಿನ್ ಪರಸ್ಪರ ವೈರುಧ್ಯಮಯವಾಗಿ ಕಾಣುತ್ತಾರೆ. ವ್ರೋನ್ಸ್ಕಿಗೆ ಕುಟುಂಬ ಜೀವನದಲ್ಲಿ ಆಸಕ್ತಿ ಇಲ್ಲ. ಸಾಂಸಾರಿಕ ಬದುಕು ಆತನಿಗೆ ಜಿಗುಪ್ಸೆ ಹುಟ್ಟಿಸುತ್ತದೆ. ಅದಕ್ಕೆ ವಿರುದ್ಧವಾಗಿ ಲೆವಿನ್ ಸಚ್ಚಾರಿತ್ರ್ಯ ಶೀಲನಾಗಿ ಕೌಟುಂಬಿಕ ಜವಾಬ್ದಾರಿ ಹೊರಬಲ್ಲ ಪ್ರಬುದ್ಧ ವ್ಯಕ್ತಿಯಾಗಿ ಚಿತ್ರಿಸಿದ್ದಾನೆ ಟಾಲ್ಸ್ಟಾಯ್. ಹೀಗೆ ಕಾದಂಬರಿ ಉದ್ದಕ್ಕೂ ಹತ್ತು ಹಲವು ವಿಚಾರಗಳು ಆಕಾಲದ ರಷ್ಯಾದ ಸಾಮಾಜಿಕ, ಸಾಂಸ್ಕೃತಿಕ ಮೈಲಿಗಲ್ಲುಗಳನ್ನು ವಿಶದಪಡಿಸುತ್ತವೆ.
ಆಗರ್‍ಭ ಶ್ರೀಮಂತ ಕುಟುಂಬದಲ್ಲಿ ೧೮೨೮ರಲ್ಲಿ ಜನಿಸಿದ ರಷ್ಯಾ ದೇಶದ ಕೌಂಟ್ ಲಿಯೋ ಟಾಲ್ ಸ್ಟಾಯ್ ಸಾಹಿತ್ಯ ಜಗತ್ತಿನಲ್ಲಿ ಅಪ್ರತಿಮ ಹೆಸರು. ಯೋಧ, ಚಿಂತಕ, ಮಹಾನ್‌ದಾರ್ಶನಿಕ, ಸಮಾಜ ಸುಧಾರಕ, ತತ್ವಜ್ಞಾನಿಯಾದ ಇವರು ವಾರ್ ಎಂಡ್ ಪೀಸ್, ಅನ್ನಾ ಕರೆನಿನ್, ರಿಸರೆಕ್ಷನ್ ಎಂಬ ಜಗತ್ಪ್ರಸಿದ್ಧ ಕಾದಂಬರಿಗಳನ್ನು ನೀಡಿದ್ದಾರೆ. ಬದುಕಿನ ಎಲ್ಲ ಸುಖ ಖ್ಯಾತಿಗಳನ್ನು ಅನುಭೋಗಿಸಿದ ಟಾಲ್ಸ್‌ಟಾಯ್ ನಡುವಯಸ್ಸಿಗೆ ಆಸ್ತಿ ಮನುಕುಲದ ಕ್ಷೇಮಕ್ಕೆ ಎದುರದ ಮೊದಲ ಕುತ್ತು ಎಂಬ ದೋರಣೆಯನ್ನು ತಾಳಿ ತನ್ನೆಲ್ಲ ಆಸ್ತಿಯನ್ನು ತೊರೆದು ಸರಳ ಜೀವನಕ್ಕೆ ತೆರೆದುಕೊಂಡರು. ಆದರೆ ಸಾಯುವ ಕೊನೆಯ ಕ್ಷಣದಲ್ಲಿ ತಾವೇ ನೆಟ್ಟು ಬೆಳೆಸಿದ ಭೂರ್ಜವೃಕ್ಷಗಳ ಬಗ್ಗೆ ಇರುವ ಅಮಿತ ಮೋಹದಿಂದ ತಮ್ಮ ಬೋಧನೆಗೂ ಅನುಷ್ಟಾನಕ್ಕೂ ನಡುವಿನ ಸಂಘರ್ಷದಿಂದ ಜರ್ಜರಿತರಾಗಿ ಪತ್ನಿ ಸೋಫಿಯಾಗೂ ಹೇಳದೆ ಮನೆ ಬಿಟ್ಟು ಹೊರಟ ಮಹಾನ್ ದಾರ್ಶನಿಕ ತಮ್ಮ ಕಾದಂಬರಿಯ ಅನ್ನಾಳಂತೆ ರೈಲ್ವೆ ಸ್ಟೇಷನ್ ನಲ್ಲಿ ಕೊನೆಯುಸಿರೆಳೆದರು.
*****