“Creative reading contributing to creative writing” ಈ ಮಾತು ಬರುವುದು ಎಮರಸನ್‌ನ “The American scholar”ಎಂಬ ಪ್ರಬಂಧದಲ್ಲಿ. ಪ್ರಾಜ್ಞನಾಗಬೇಕೆಂದಲ್ಲಿ ಪುಸ್ತಕ ಕೈಯಲ್ಲಿದ್ರೆ ಸಾಲದು. `Continuous and Cautious’ ಆಗಿರತಕ್ಕದ್ದು. ಆದಾಗ್ಯೂ ಆತ ಜ್ಞಾನ ಸಾಗರ ಒಂದು ಬಿಂದುವಿನಷ್ಠೇ ಕುಡಿಯಬಲ್ಲ. ತನ್ನತನವಿಲ್ಲದ ಯಾವ ಸಾಮರ್ಥ್ಯವೂ ಶೋಭೆಯಲ್ಲ. ಓದು ಜ್ಞಾನದ ಒರೆಕೋರೆಗಳನ್ನು ತಿದ್ದಬಹುದೇ ಹೊರತು ಸ್ವಯಂಸ್ಪೂರಣದ ಚೈತನ್ಯವನ್ನಲ್ಲ. ಇದನ್ನು ತನ್ನ ಪ್ರಬಂಧದಲ್ಲಿ ಸವಿಸ್ತಾರವಾಗಿ ಒದಗಿಸಿಕೊಟ್ಟಿದ್ದಾನೆ ಅಮೇರಿಕಾದ ಮೂಲಕರ್ತರಲ್ಲಿ ಒಬ್ಬನಾದ ಎಮರಸನ್.
`Sage of Concord’ ಎಂದೇ ಪ್ರಸಿದ್ದನಾದ Ralph Waldo Emerson ಟ್ರಾನ್ಸಡೆಂಟಲಿಸಂನ ಗುಂಪಿನ ಪ್ರಮುಖರಲ್ಲಿ ಒಬ್ಬ. ಅದರಂತೆ ಅಮರಿಕತ್ವವನ್ನು ಎತ್ತಿಹಿಡಿದ ಪ್ರಮುಖ ಕೂಡ. ಅಮೇರಿಕಾ ಹಾಗೂ ಇಂಗ್ಲೆಂಡ ಸಾಹಿತ್ಯಗಳೆರಡೂ ಆಂಗ್ಲಭಾಷೆಯಲ್ಲಿಯೇ ಇದ್ದು ಆಂಗ್ಲಭಾಷಿಕ ಜನಾಂಗಕ್ಕೆ ಸೇರಿದ್ದವು ಎಲ್ಲಿಯವರೆಗೆ ಆಂಗ್ಲ ಭಾಷಿಕ ಜನಾಂಗ ಬ್ರೀಟಿಷ ನಡುಗಡ್ಡೆಯಲ್ಲಿ ವಾಸವಾಗಿತ್ತೋ ಬ್ರೀಟಿಷ ಬದುಕು ಆಂಗ್ಲಸಾಹಿತ್ಯದಲ್ಲಿ ಬಹುಚರ್ಚಿತ ವಿಷಯವಾಗಿತ್ತು. ಅಮೇರಿಕಾ ಖಂಡದ ಶೋಧನೆಯೊಂದಿಗೆ ಆಂಗ್ಲರ ಒಂದು ಗುಂಪು ಅಮೇರಿಕಾದಲ್ಲಿ ತಳವೂರಿತು. ೧೭೭೬ರ ಜುಲೈ ೪ರಂದು ಅಮೇರಿಕಾ ಬ್ರಿಟಿಷ ಸಾಮ್ರಾಜ್ಯದಿಂದ ಹೊರಬಂದು ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹಂತಹಂತವಾಗಿ ಅಮೇರಿಕಾ ತನ್ನದೇ ಆದ ವ್ಯವಸ್ಥೆಗಳನ್ನು ಹೊಂದುತ್ತ ಅಭಿವೃದ್ಧಿಯ ರಥವೇರಿ ಹಿಂದೆ ನೋಡದೇ ಮುಂದೆ ಸಾಗುತ್ತ ಸಾಹಿತ್ಯದಲ್ಲೂ ೧೮ನ ಶತಮಾನದಿಂದ ಬ್ರೀಟಿಷ ಸಂಪ್ರದಾಯಕ್ಕೆ ಹೊರತಾದ, ಹೊಸ, ಭಿನ್ನವಾದ ಕೃತಿಗಳು ಅದ್ವಿತೀಯ ಬದುಕಿನ ಸಾರವನ್ನು ಒಳಗೊಂಡು ಅಮೇರಿಕಾ ಸಾಹಿತ್ಯವನ್ನು ಶ್ರೀಮಂತಗೊಳಿಸಲಾರಂಭಿಸಿದವು. ಯುನೈಟೆಡ್ ಸ್ಟೇಟ್ಸ್ ನ ಹೊಸ ನಾಡಿನ ಹೊಸ ಬದುಕಿನ American self reliance, the new man ಪ್ರಿಕಲ್ಪನೆಯೊಂದಿಗೆ Benjamin Frankling, vashington Erving Cooper, Longfellow Emerson ಹೀಗೆ ಅನೇಕರು ಅಮೇರಿಕಾ ಸಾಹಿತ್ಯ ಗಂಗೆಯ ಮೂಲ ಬೇರುಗಳಾದರು.
‘ದಿ ಅಮೇರಿಕನ್ ಸ್ಕಾಲರ’ ಅಥವಾ ‘ಮ್ಯಾನ್ ಥಿಂಕಿಂಗ್’ ಎಂದು ಕರೆಯಲ್ಪಡುವ ಈ ಪ್ರಬಂಧ ೧೮೩೭ ರಂದು Cambridgeನಲ್ಲಿ ನೀಡಿದ ಉಪನ್ಯಾಸದ ಲಿಖಿತ ರೂಪ. ಪೂರ್ಣಪ್ರಮಾಣದಲ್ಲಿ ಅಮೇರಿಕಾದ ದಿ ನ್ಯೂ ಮ್ಯಾನ್ ಪರಿಕಲ್ಪನೆಯನ್ನು ಎಮರಸನ್ ಇಲ್ಲಿ ಬಿಂಬಿಸಿದ್ದಾನೆ. ಅದರಲ್ಲಿ ಎಮರಸನ್ ಒಬ್ಬ ವಿದ್ವಾಂಸನಾಗಲು ಮೂರು ಸಂಗತಿಗಳನ್ನು ಪರಿಗಣಿಸಬೇಕು ಎಂದಿದ್ದಾನೆ-ನಿಸರ್ಗ, ಹಳೆಯ ಪುಸ್ತಕಗಳ ಓದು, ಹಾಗೂ ಪ್ರಚಲಿತ ವಿದ್ಯಮಾನಗಳ ಅರಿವು. ನಿಸರ್ಗದ ಬಹುಮುಖ ಅಸ್ತಿತ್ವದ ಹಾಗೂ ಅಗಮ್ಯವಾದ ರಹಸ್ಯಗಳ ಅರಿಯಲು ಅದರ ಆಳವಾದ ಅಧ್ಯಯನ ಅಗತ್ಯ. ವಿದ್ವಾಂಸ ಒಬ್ಬ ಶಾಲಾ ಬಾಲಕನಾಗಬೇಕು. ತನ್ನ ಜ್ಞಾನದ ಭಂಡಾರ ತುಂಬುತ್ತಾ ನಿಸರ್ಗವನ್ನು ಅರಿಯುತ್ತ ಕ್ರಮೇಣ ತನ್ನನ್ನು ತಾನು ಅರಿಯುವಂತಾಗುವನು.
ಅದರಂತೆ ವಿದ್ವಾಂಸ ನಿರಂತರ ಓದುಗನಾಗಿರಬೇಕು. ಇತಿಹಾಸದ ಪುಟಗಳು ಪ್ರಶ್ತುತತೆಗೆ ಪಾಠಕಲಿಸುತ್ತವೆ. ಪುಸ್ತಕಗಳು ನಮಗೆ ಗತಿಸಿದ ಘಟನೆಗಳ ಮಾಹಿತಿ ನೀಡುವುದರ ಜೊತೆಗೆ ಆನಂದವನ್ನು ನೀಡುತ್ತವೆ. ಬೌದ್ಧಿಕ ಪರಿಧಿಯನ್ನು ವಿಸ್ತರಿಸುತ್ತವೆ. ಉತ್ತಮ ಅಭಿರುಚಿಯ ಪುಸ್ತಕಗಳು ವ್ಯಕ್ತಿಯ ಬೌದ್ದಿಕ ಸಾಮರ್ಥ್ಯವನ್ನು ಬೆಳಗುತ್ತವೆ. ವಿದ್ವಾಂಸನಾಗ ಹೊರಟವನು ತನ್ನ ಪುಸ್ತಕಗಳ ಆಯ್ಕೆಯಲ್ಲಿ ಜಾಗರೂಕನಾಗಿರತಕ್ಕದ್ದು. ಕಾಲವು ಪುಸ್ತಕದಂತೆ ಬಹಳ ಮೌಲ್ಯಯುತ. ಹಾಗಾಗಿ ಓದುವಿಕೆ ಕೂಡ ನಿರಂತರ ಮತ್ತು ಅವಧಾನದ ಓದುವಿಕೆಯಾಗಿರಬೇಕು. ಅರೇಬಿಯನ್ ಗಾದೆಯಂತೆ “A fig tree, looking on a fig tree, becomes fruitful”
ವಿದ್ವಾಂಸ ಗಮನಿಸಬೇಕಾದ ಮೂರನೇ ಸಂಗತಿ ಕ್ರಿಯೆ ಅಥವಾ ಘಟನೆ. ಎಂದರೆ ತನ್ನ ಸುತ್ತಲ ಜಗತ್ತಿನ ಪ್ರಚಲಿತ ಘಟನೆಗಳ ಅವಲೋಕನ. ಸುತ್ತಲಿನ ಘಟನೆಗಳು ನನ್ನೊಳಗಿನ ವಿಚಾರಗಳನ್ನು ಹೊರತೆಗೆಯುವ ಕೀಲಿಕೈ ಇದ್ದಂತೆ. ಅವು ನಾನು ನನ್ನನ್ನು ಇನ್ನೂ ಚೆನ್ನಾಗಿ ಅರಿಯುವಂತೆ ಮಾಡುತ್ತವೆ ಎನ್ನುತ್ತಾನೆ ಎಮರಸನ್. ಕ್ರೀಯಾಹೀನತೆ ಹೇಡಿತನ. ಬರಹಗಾರ ತನ್ನ ಸಮಾಜದ ಗತಕಾಲದ ಕ್ರಿಯೆಗಳಿಂದ ತನ್ನ ಜ್ಞಾನವನ್ನು ಪುನರರಚಿಸುತ್ತಾನೆ.
ಬರಹಗಾರನಾದವನು ವಿಚಾರಶೀಲತೆ, ಸನ್ನಡತೆ ಹಾಗೂ ನೈತಿಕತೆಗಳ ಆಗರವಾಗಿರಬೇಕು. ಅದಲ್ಲದೇ ಬುದ್ಧಿವಂತಿಕೆಗಿಂತ ಶೀಲಕ್ಕೆ ಹೆಚ್ಚು ಪ್ರಾಶಸ್ತ್ಯವಿರುವುದು ಬರಹಗಾರ ಅನುಸರಿಸಬೇಕಾದ ಉಪಕ್ರಮಗಳು ಕರ್ತವ್ಯಗಳನ್ನು ಎಮರಸನ್ ಪಟ್ಟಿಮಾಡುತ್ತಾನೆ. ವಿದ್ವಾಂಸ ಎಲ್ಲ ಕಾಲದ ಸಂಗತಿಗಳ ಪರಿಜ್ಞಾನ ಹೊಂದಿರತಕ್ಕದ್ದು. ಗತಕಾಲದ ಕೊಡುಗೆಗಳ ಅರಿವು, ಭವಿಷ್ಯದ ಆಶಯಗಳ ಕುರಿತು ನಿರ್ದಿಷ್ಟ ನಿಲುವು ಹೊಂದಿರತಕ್ಕದ್ದೆಂದು ಹೇಳುತ್ತಾನೆ. ಓದಿದ ಎಲ್ಲ ಪಾಠಗಳು ಹಿತವಾಗಲಾರವು. ಇಲ್ಲಿರುವವರೆಲ್ಲ ನಮ್ಮ ನಿಮ್ಮಂತೆ ಮನುಷ್ಯರು, ಆದರೆ ತನ್ನನ್ನು ತಾನು ಅರಿತುಕೊಂಡವ ಮಾತ್ರ ಜಗತ್ತನ್ನು ಸತ್ಯವನ್ನು ಸರಿಯಾಗಿ ತಿಳಿಯಬಲ್ಲ. ವಿದ್ವಾಂಸ ಸದಾ ಶಾಶ್ವತ ಸತ್ಯದ ಕಡೆಗೆ ತುಡಿಯುತ್ತಾನೆ. ಈ ದಾರಿಯಲ್ಲಿಯ ಯಾವುದೇ ಅಡೆತಡೆಗಳು, ನಿರ್ಲಕ್ಷ್ಯಗಳು, ಬಡತನ, ಸಾಮಾಜಿಕ ವಿಘ್ನಗಳು, ಅವನನ್ನು ತಡೆಯಲಾರವು ಎನ್ನುತ್ತಾನೆ ಎಮರಸನ್. ಆದರೆ ಬಹಳ ಸಲ ಬರಹಗಾರರು ಹಣ ಮತ್ತು ಅಧಿಕಾರಕ್ಕಾಗಿ ಹಾತೊರೆಯುವವರೇ ಅಧಿಕ. ಜ್ಞಾನದ ಬದುಕನ್ನು ಆಶಿಸುವವರು ಬಹಳ ವಿರಳ.
ಎಮರಸನ್‌ನ ಇನ್ನೊಂದು ಪ್ರಮುಖ ಪ್ರಬಂಧ ಸೆಲ್ಪ ರಿಲಾಯನ್ಸ. ಎಲ್ಲ ಬಾಂಧವ್ಯಗಳಿಂದ ದಾಸ್ಯದಿಂದ, ಇತರರ ಮೇಲಿನ ಅವಲಂಬನೆಯಿಂದ, ಇತರರ ಅನುಕರಣೆಯಿಂದ ಹೊರಬರಬೇಕಾದ ಅಗತ್ಯತೆಯನ್ನು ಅರಹುತ್ತಾನೆ. ಸ್ವಯಂ ಶಾಲಿ ಆತ್ಮಬಲ ಕುರಿತು ಮಾತನಾಡುತ್ತಾನೆ ಎಮರಸನ್. ಪ್ರಬಂಧ ಎಕಕಾಲಕ್ಕೆ ಸಾಮಾಜಿಕ, ರಾಜಕೀಯ, ತಾತ್ವಿಕ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಎಲ್ಲ ಸ್ತರಗಳಲ್ಲಿ ಸ್ವಾವಲಂಬನೆ, ಸ್ವ ಅಸ್ತಿತ್ವ, ಸ್ವಸಾಮರ್ಥ್ಯ, ಸ್ವನಂಬಿಕೆ, ಆತ್ಮಶೋಧನೆ ಇತ್ಯಾದಿ ವಿಚಾರಗಳು ಓದುಗನ ಮೇಲೆ ಮಾಂತ್ರಿಕ ಪರಿಣಾಮವನ್ನು ಉಂಟುಮಾಡುತ್ತವೆ. ಸ್ವಾತಂತ್ರ್ಯಕ್ಕಿರುವ ಬಲ, ಸಮಾಜ ಮತ್ತು ನಿಸರ್ಗವನ್ನು ಬದಿಗಿರಿಸಿ ಮಾನವ ಕೇಂದ್ರಿತ ವಿಚಾರವನ್ನು ತರ್ಕಿಸುತ್ತಾನೆ. ನಿನಗೆ ಸತ್ಯವೆನಿಸಿದ್ದನ್ನು ನಂಬು, ನಿನ್ನಲ್ಲಿ ಮೊದಲು ನಂಬಿಕೆ ಇಡು. ಇಡಿ ಸಮುದಾಯ ಅದನ್ನು ನಂಬುತ್ತದೆ. ಜಗತ್ತಿನಲ್ಲಿ ಅದ್ವಿತೀಯರಾದ ಶ್ರೇಷ್ಠರೆಲ್ಲ ಅನುಸರಿಸಿದ ವಿಧಾನವೇ ಇದು ಎನ್ನುತ್ತಾನೆ. “Nothing can bring you peace but yourself. Nothing can bring you peace but the triumph of principles” ಇದು ಸೆಲ್ಫ ರಿಲಾಯನ್ಸ ಪ್ರಬಂಧದ ಮುಕ್ತಾಯದ ಸಾಲುಗಳು.
ಯುನೈಟೆಡ್ ಸ್ಟೆಟ್ಸ್ ನ ಬೊಸ್ಟನ್ ನಲ್ಲಿ ೧೮೦೩ರಲ್ಲಿ ಜನಿಸಿದ ಎಮರಸನ್ ೮ ವರ್ಷದವನಾಗಿದ್ದಾಗಲೇ ತಂದೆ ಪ್ಯಾಸ್ಟರ ರೆವರೆಂಡ ವಿಲಿಯಮ್ ಎಮರಸನ್ ತೀರಿಹೋದ. ಹಾಗಾಗಿ ಬಾಲ್ಯ ಮತ್ತು ತಾರುಣ್ಯದ ದಿನಗಳು ಕಷ್ಟದ ದಿನಗಳಾಗಿದ್ದವು. ತನ್ನ ಜೀವನದ್ದದ್ದಕ್ಕೂ ಜ್ಞಾನದಾಹಿಯಾಗಿದ್ದ ಎಮರಸನ್ ತನ್ನ ಪರಿಕಲ್ಪನೆಯ ಅಮೇರಿಕನ್ ಸ್ಕಾಲರ ತದ್ರೂಪದಂತೆ ಬೆಳಗಿದ. ಒಬ್ಬ ಒಳ್ಳೆಯ ಪ್ರಜೆ, ಕರ್ತವ್ಯನಿಷ್ಠ, ಶ್ರಮ ಸಂಸ್ಕೃತಿಯನ್ನು ಬೆಂಬಲಿಸುತ್ತಿದ್ದ, ಜೀತದಾಳು ಪದ್ಧತಿಯನ್ನು ಅಷ್ಟೇ ವಿರೋಧಿಸುತ್ತಿದ್ದ ಎಮರಸನ್ ಎಪ್ರಿಲ್ ೨೭, ೧೮೮೨ರಲ್ಲಿ ತನ್ನ ಕೊನೆಯುಸಿರೆಳೆದ. ಆತನ ಭೋದನೆಗಳು ಜೀವನಾದರ್ಶಗಳು ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರತಿಭೆಗಳಿಗೆ ಪ್ರೇರಕಗಳಾಗಿದ್ದವು. ಅಂತಹುದರಲ್ಲಿ ನಮ್ಮ ಮಹಾತ್ಮ ಗಾಂಧಿಜಿ ಎಮರಸನ್ ನ ತತ್ವ ಆದರ್ಶಗಳಿಂದ ಸ್ಪೂರ್ತಿಗೊಂಡಿದ್ದರು.
*****