ಆತ ಮೆಡಿಟರೇನಿಯನ್ ಪೆಗಾನಿಸಂ[ವಿಗ್ರಹ ಆರಾಧನೆ ತತ್ವ ಮುಖ್ಯವಾಗಿ ನಿಸರ್ಗ]ನಿಂದ ಪ್ರಭಾವಿತನಾಗಿದ್ದ. ಅದರೊಂದಿಗೆ ಗಂಡು ಹೆಣ್ಣು ಸಂತೋಷದಿಂದ ಬದುಕಲು ನಿಸರ್ಗದೊಂದಿಗಿನ ಸಂಪರ್ಕ ಅಗತ್ಯವೆಂಬುದನ್ನು ಪ್ರತಿಪಾದಿಸ ಬಯಸಿದ. ಏಕಾಂಗಿತನದ ಸಫಲತೆಗಿಂತ ಪ್ರಕೃತಿಯೊಂದಿಗಿನ ಮೈತ್ರಿ ಹಿತಕರ. ಉತ್ಪ್ರೇಕ್ಷೆಯಿಂದ ಕೂಡಿದ ಕಲ್ಪನೆ ನೈಜತೆಯ ಪ್ರಜ್ಞೆಯನ್ನು ಮೊಟಕುಗೊಳಿಸುತ್ತದೆ. ಇದನ್ನೆ ತನ್ನ ಮೊದಲ ಕಾದಂಬರಿ ದಿ ಲಾಂಗೆಸ್ಟ ಜರ್ನಿಯಲ್ಲಿ ನಿರೂಪಿಸಿದ.
ಈ ಸಂವೇದನೆ ಆತನ “Howard Eng”ನಲ್ಲೂ ಮುಂದುವರೆಯಿತು. ಮಹತ್ವಾಂಕಾಕ್ಷೆಯ ಈ ಕೃತಿ ಆತನಿಗೆ ಸಾಹಿತ್ಯ ಲೋಕದಲ್ಲಿ ಮಹತ್ವದ ಸ್ಥಾನ ತಂದುಕೊಟ್ಟಿತು. ಸಮಾನ ಸ್ವಾತಂತ್ರ್ಯದ ಕಲ್ಪನೆಗಳಲ್ಲಿ ಒಲವುಳ್ಳ ಸ್ಕ್ಲೇಗಲ್ ಸಹೋದರಿಯರಾದ ಮಾರ್ಗರೆಟ್ ಮತ್ತು ಹೆಲನ್ ಹಾಗೂ ಶತಮಾನಗಳಿಂದ ಪ್ರಕೃತಿಗೆ ಮುಖ ತೆರೆಯದ ಮನೆ ಹಾವರ್ಡ ಎಂಡ್‌ನ ಮಾಲೀಕ ರುತ್ ವಿಲ್‌ಕಾಕ್ಸ್ ನಡುವಿನ ಮೈತ್ರಿ, ಬದುಕಿನಲ್ಲಿ ಬರೀಯ ಹಣವೇ ಸರ್ವಸ್ವವೆಂದು ತಿಳಿದ ಹೆನ್ರಿ ವಿಲ್ ಕಾಕ್ಸ್ ಹಾಗೂ ಆತನ ಮಕ್ಕಳ ಮೌಲ್ಯಗಳಿಗೆ ವ್ಯತಿರಿಕ್ತವಾಗಿ ಇವರು ಸಂಬಂಧಗಳನ್ನು ಆಧ್ಯಾತ್ಮಿಕವಾಗಿ ಗುರುತಿಸುತ್ತಾರೆ. ಆದರೆ ಕೊನೆಯಲ್ಲಿ ಮಾರ್ಗರೆಟ್ ಹೆನ್ರಿ ವಿಲ್ ಕಾಕ್ಸನನ್ನು ವಿವಾಹವಾಗುವ ಮೂಲಕ ಆತ ಹಾವರ್ಡ ಎಂಡ ಮನೆಗೆ ವಾಪಸ್ಸಾಗುತ್ತಾನೆ. ಪ್ರಕೃತಿ ಮತ್ತು ಕಲ್ಪನೆಗಳ ನಡುವಿನ ಬಂಧ ಪುನಃ ಸ್ಥಾಪನೆಯಾಗುತ್ತದೆ.
ಈ ಕೃತಿಗಳ ಲೇಖಕ E.M.Forster ಎಂಬ ಬ್ರೀಟಿಷ ಕಾದಂಬರಿಕಾರ. ಲಂಡನ್ನಿನಲ್ಲಿ ಜನವರಿ ೧, ೧೮೭೯ರಂದು ಜನಿಸಿದ. ಮಗುವಾಗಿದ್ದಾಲೇ ತಂದೆಯನ್ನು ಕಳೆದುಕೊಂಡ ಫಾರ್‍ಸ್ಟರ್ ಪ್ರಾರಂಭಿಕ ಶಿಕ್ಷಣ ಕೆಂಟ್‌ನಲ್ಲಿ ಮುಗಿಸಿದ. ಕ್ಯಾಂಬ್ರೀಜ್ ನ ಕಿಂಗ್ಸ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿದ. ಇಲ್ಲಿಯೇ ಆತನ ಸೃಜನಶೀಲತೆ ಮೂರ್ತರೂಪ ಪಡೆಯಿತು. ತಂದೆ-ತಾಯಿಯ ಆದರ್ಶಗಳು ಬದುಕಿನ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿದವು. ಕ್ಯಾಂಬ್ರೀಜ್ ಬಿಟ್ಟ ಮೇಲೆ ತನ್ನ ಬದುಕನ್ನು ಬರವಣಿಗೆಗೆ ಮೀಸಲಿಟ್ಟ.
ಕೊಂಚ ಭಿನ್ನ ವಿಷಯವಸ್ತುವಿನ “A Passage to India” ಎಂಬ ಕಾದಂಬರಿಯಲ್ಲಿ ತನ್ನದೇ ಆದ ನಿಗೂಢ ಆಚರಣೆಗಳು, ಭ್ರಮೆಗಳು ಸಂಪ್ರದಾಯಗಳನ್ನು ಹೊಂದಿದ ನಾಡು ಭಾರತವನ್ನು, ಇಲ್ಲಿಯ ಜನರ ಸ್ವಭಾವವನ್ನು ಹಾಗೂ ಬ್ರಿಟಿಷ್‌ರ ಕುತಂತ್ರಗಳಿಗೆ ಬಲಿಯಾಗುವ ಇಲ್ಲಿಯ ಮುಗ್ಧರ ಪಾಡನ್ನು ತನ್ನ ಪಕ್ವತೆಯ ಪರಿಧಿಯಲ್ಲಿ ವಿಸ್ತೃತಪಡಿಸಿದ ಫಾರ್‍ಸ್ಟರ್. ಬಳಸಿದ ಹಲವಾರು ಸಂಗತಿಗಳು ಮಸೀದಿ, ಬ್ರೀಜ್ ಪಾರ್ಟಿ, ಮಲಬಾರ್ ಗುಹೆಗಳು, ಗೋಕುಲಾಷ್ಟಮಿ ಇತ್ಯಾದಿ ಸಂದರ್ಭUಳು ಬ್ರಿಟಿಷರ ಹಾಗೂ ಭಾರತೀಯರ ನಡುವೆ ಸ್ನೇಹ ಬೆಸುಗೆ ಏರ್ಪಡಿಸುತ್ತವೆ. ಮಾನವ ಸಂಬಂಧಗಳು ಬಣ್ಣ, ಅಧಿಕಾರ, ಸ್ವದೇಶಿ ವಿದೇಶಿ ಎನ್ನದೇ ಕುದುರುವ ಸಂಗತಿ. ಹಿಂದುತ್ವ ಭಾರತದ ಮುಖ್ಯ ಸಂಗತಿಯಾದರೂ ಇಸ್ಲಾಂ ಧರ್ಮ ಈ ನಾಗರಿಕತೆಯಲ್ಲಿ ಮಿಳಿತವಾಗಿರುವುದನ್ನು ಪ್ರತಿಪಾದಿಸಲೆಂಬಂತೆ ಕಾದಂಬರಿಯ ಮುಖ್ಯ ಪಾತ್ರ ಅಜೀಜ್. ಮಸೀದಿಗೆ ಆಗಮಿಸುವ ಬ್ರಿಟಿಷ್ ಮಹಿಳೆ ಮಿಸೆಸ್ ಮೂರ್‌ಳ ವ್ಯಕ್ತಿತ್ವ ಸ್ವಭಾವ ಇಷ್ಟಪಡುತ್ತಾನೆ ಅಜೀಜ್. ಮಲಬಾರ್ ಗುಹೆಗಳಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಮಿಸ್ ಕ್ವೆಸ್ಟೆಡ್ ಮೇಲೆ ಆಗುವ ಧಾಳಿಯಲ್ಲಿ ಅಪರಾಧಿ ಸ್ಥಾನದಲ್ಲಿ ಸಿಕ್ಕಿಸಲ್ಪಡುತ್ತಾನೆ ಅಜೀಜ್. ಅಜೀಜ್ ವಿರುದ್ಧ ಸಾಕ್ಷಿ ಹೇಳಲು ಇಷ್ಟಪಡದ ಮಿಸೆಸ್ ಮೂರ್ ಮಗ ರೂನಿಯೊಂದಿಗೆ ದ್ವೇಷ ಕಟ್ಟಿಕೊಳ್ಳುತ್ತಾಳೆ. ಬ್ರೀಟಿಷರನ್ನು ದ್ವೇಷಿಸುವ ಅಜೀಜ್ ತನ್ನ ಬ್ರೀಟಿಷ ಗೆಳೆಯ ಫೀಲ್ಡಿಂಗ್‌ನನ್ನು ಬಹಳ ಪ್ರೀತಿಸುತ್ತಾನೆ. ಹೀಗೆ ವಿದೇಶಿಗರಿಗೆ ಭಾರತ, ಅಲ್ಲಿಯ ಜೀವನ ವಿಧಾನ, ಜನರ ಸ್ವಭಾವ ಆಚರಣೆಗಳು, ಅರ್ಥಮಾಡಿಕೊಳ್ಳಲು ಇರುವ ಕೈಪಿಡಿಯಂತಿದೆ. ಅದರಂತೆ ಬ್ರೀಟಿಷರೆಲ್ಲ ಕ್ರೂರಿಗಳಲ್ಲ. ಕೆಲವು ಸಹೃದಯಿ ಬ್ರೀಟಿಷರ ಉದಾತ್ತ ವ್ಯಕ್ತಿತ್ವದ ಪರಿಚಯವಾಗುತ್ತದೆ. ಹೀಗೆ ಭಾರತವನ್ನು ಸದೃಶವಾಗಿ ಅರ್ಥಮಾಡಿಸುವ ಆಂಗ್ಲೋ ಇಂಡಿಯನ್ ಕಾದಂಬರಿಯಾಗಿ ಕಾಣುತ್ತದೆ “A Passage to India”
ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಯುದ್ಧ ಕಾಲದ ಮೂರು ವರ್ಷಗಳನ್ನು ಅಲೆಕ್ಸಾಂಡ್ರಿಯಾ ದಲ್ಲಿ ಕಳೆದ ಫಾರ್‍ಸ್ಟರ್ ನಾಗರಿಕ ಯುದ್ಧಕೆಲಸದ ನಿಮಿತ್ತ ೧೯೧೨-೧೩ ಹಾಗೂ ೧೯೨೧ರಲ್ಲಿ ೨ ಬಾರಿ ಭಾರತಕ್ಕೆ ಬಂದಿದ್ದ. ಇದೇ ಈ ಕೃತಿಗೆ ಪ್ರೇರಣೆ.
ಮೊದಮೊದಲ ಕೃತಿಗಳು ಸಾಮಾಜಿಕ ವಿಡಂಬನೆ, ಅದೂ ಮುಖ್ಯವಾಗಿ ಮಧ್ಯಮ ವರ್ಗದ ಬದುಕನ್ನು ಪ್ರತಿನಿಧಿಸಿದ್ದವು. ೨೦ನೇ ಶತಮಾನದ ಮಧ್ಯಭಾಗದಲ್ಲಿ ಆತ ಸಾಹಿತ್ಯ ಲೋಕದ ಶ್ರೇಷ್ಠ ಎನಿಸಿಕೊಂಡ. ತುಂಬಾ ಸರಳ ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತಗಳ ಕಟ್ಟುಪಾಡುಗಳ ಬಲೆಯಲ್ಲಿ ಮುದುಡಿಕೊಳ್ಳದ ಇತನ ಕಾದಂಬರಿಗಳು ಮಾನವೀಯ ಗುಣಗಳು, ಆದರ್ಶಗಳ ಪ್ರತಿರೂಪದಂತಿವೆ. ರೋಮ್ಯಾಂಟಿಸಿಸಂನ ಪ್ರಕೃತಿ ಹಾಗೂ ಕಲ್ಪನೆಯ ಸಾಕಾರ ಚಿತ್ರಣಗಳಾಗಿವೆ.
*****