ನಾನು ಭೂಮಿ; ಭೂಮಿ ಕಾಯುವುದಿಲ್ಲ
ನೀನು ಮಳೆ. ನೀನು ಕಾಯುತ್ತೀಯೆ, ಕಾಯಬೇಕು
ನೀನು ಮುಗಿಲು ನಾನು ನೆಲ ಎಂದು ಒಂದು ಗಂಡು
ಹಾಡಿದಂತಲ್ಲ ನಮ್ಮಿಬ್ಬರ ಯುಗಯುಗಗಳ ಈ ಬಂಧ
ನಾನು ಭೂಮಿ, ಭೂಮಿಯೇ ಹಾಡಬೇಕು
ನಾನು ಭೂಮಿ, ನಾನು ಬರೀ ನೆಲವಲ್ಲ.
ನಾನು ತಿರುಗುತ್ತಿರುವೆ, ನೀನು ನಿಂತಿರುವೆ ನಿಶ್ಚಲ
ನಾನು ಕಾಯುವೆ, ನಿನ್ನನ್ನೇ ಕರಗಿಸುವೆ, ಕರಗಿಸಿ ಹರಿಸುವೆ
ನನ್ನೆಡೆಗೆ, ಈ ನನ್ನ ಎದೆಯ ಜಲದಿಂದಲೇ ನೀ ಉಗಿ ಮೋಡ
ವಾದೆ ಕಡೆಗೆ ನನ್ನೆಡೆಗೇ ಹರಿದೆ. ಮೋಡ ಕಟ್ಟಬೇಕು
ಕಟ್ಟುವವರೆಗೆ ಕಾಯೇ ಎಂದೆ ನೀನು. ನಾನು ಕಾಯಲಾರೆ
ನನಗೆ ನೀನಲ್ಲದಿದ್ದರಿನ್ನೊಬ್ಬ, ನಿನ್ನಂಥವನಿನ್ನೊಬ್ಬ
ಎಷ್ಟು ಮಂದಿ ಗೆಳೆಯರು ಗೊತ್ತೆ ನನಗೆ?
ನಾನು ಭೂಮಿ ನಾನು ಬರೀ ನೆಲವಲ್ಲ.
ನನ್ನೆದೆಯೊಳಗೇ ಲಾವಾ ಅಡಗಿಸಿ ಹೊರಗೆಲ್ಲಾ ಹಸಿರ ಚೆಲ್ಲುವೆ
ನನಗೆ ಮೇಲೆರೆವ ಜೀವ ಜಲವಾಗಿ ನೀನು ಬರುವೆ.
ನೀನು ನನ್ನದೇ ಅಂಗ, ನನ್ನಿಂದಲೇ ನೀನು. ಇದರ ಅರಿ
ವಿದೆ ನನಗೆ, ಅದರಿಂದಲೇ ಇಟ್ಟಿರುವ ನಿನ್ನ ಹೊರಗೆ
ಅಷ್ಟು, ದೂರ ಆಗಸದ ತುದಿಗೆ, ನಿನ್ನ ಒಲವೇ ನನ್ನ ಬಲ
ಎಂದು ಹಾಡಿದ ಕವಿಗಿಲ್ಲ ಇದರರಿವು
ನಾನು ಭೂಮಿ ನಾನು ಬರೀ ನೆಲವಲ್ಲ.
ಸಸ್ಯ ಶ್ಯಾಮಲೆ ನಾನು ನನ್ನ ಅಸ್ತಿತ್ವವೇ ಅದು
ಈ ನನ್ನ ಹಸಿರಿನ ಪರಿ ಬೀಜವೃಕ್ಷ ನ್ಯಾಯದ ಪರಿ
ನನ್ನೆದೆಯ ನೀರ ಆವಿಯಾಗಿಸಿ ಮೋಡವಾಗಿಸಿ
ಗಟ್ಟಿಗೊಳಿಸಲು ಆ ನನ್ನ ಹಳೇ ಗಂಡ ಸೂರ್‍ಯನ
ತಯಾರಿ, ನಡೆದಿದ ಹಗಲಿರುಳು ಅವನ ಸವಾರಿ
ಆ ತುಂಟ ಕುದುರೆಯ ಕುಂಟ ಸಾರಥಿಯ ದಾರಿ
ನಾನು ಭೂಮಿ ನಾನು ಬರೀ ನೆಲವಲ್ಲ.
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ
ಎಂದರಲ್ಲ ಅವರು ನೋಡಿದ್ದು ಕೇವಲ ಮಳೆಗಾಲ
ಮಲೆನಾಡು ಶಿವಮೊಗ್ಗ ಸಹ್ಯಾದ್ರಿ ಇದರ
ಹೊರತು ಬೇರೇನಿಲ್ಲವೇ ನನ್ನೊಡಲಿನ ರಾಜಸ್ಥಾನ
ಥಾರ್ ಮರುಭೂಮಿ, ಆಫ್ಗನ್ ಕಣಿವೆ ಕೆಂಪು ಸಮುದ್ರ-
ಎಲ್ಲೆಲ್ಲೂ ಹಸಿರುಕ್ಕಿಸಿಲ್ಲವೇ ನಾನು
ಬೇಸಗೆ ಚಳಿ ಮಳೆಗಳ ಧಾಳಿಯ ನಟ್ಟ ನಡುವೆ
ನಾನು ಭೂಮಿ ನಾನು ಬರೀ ನೆಲವಲ್ಲ.
ನಾನು ಕರೆವೆ ನೀನು ಬೆರೆವೆ ನೀನು ಹೊಳೆವೆ
ನಾನು ಬೆಳೆವ ಇದು ಸ್ವಲ್ಪ ಸರಿ ಏಕೆನ್ನುವಿಯೋ
ನಾನು ಕಾದು ಕಾದು ಕರೆದಾಗಲ್ಲವೇ
ನೀನು ಧಾರೆ ಧಾರ ಸುರಿವುದು.
ಗುಡುಗು ಮಿಂಚು ಹೊಳೆದಾಗಲ್ಲವೇ.
ನಾನು ನೀರು ತುಂಬಿ ಗದ್ದೆಯಾಗಿ ಭತ್ತವಾಗಿ
ಕಬ್ಬಾಗಿ ಗೋಧಿಯಾಗಿ, ಜೋಳವಾಗಿ, ಇನ್ನೂ
ಹಣ್ಣು ಹಂಪಲು ಗಡ್ಡೆ ಗೆಣಸು ಗಿಡ ಮರ ಹೂ ಹುಲ್ಲು
ಏನೆಲ್ಲ ಆಗಿ ಮೆರೆವುದು. ಇದೀಗ ಸಸ್ಯ ಶ್ಯಾಮಲಾ
ಮಾತರಂ ಎಂದು ಆ ದೇಶ ಭಕ್ತರೂ ಹಾಡುವುದು.
ಆದರೆ ಈ ವೈವಿಧ್ಯ ನನ್ನದು ನಿನ್ನದಲ್ಲ ನೆನಪಿರಲಿ
ನನ್ನೊಳಗಿರುವ ನಿನ್ನ ಬೀಜದ ಗುಣ ಮಾತ್ರ ಆರದಿರಲಿ
ನೀನು ಕೇವಲ ಪೋಷಕ ಮಾತ್ರ ಅರಿವಿರಲಿ
ನಮ್ಮಿಬ್ಬರ ಸಂಬಂಧ ಮಾತ್ರ ಹೀಗೇ ಮುರಿಯದಿರಲಿ
*****
-ಸಂಕಲನ