ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ.
-ಜಾನಪದ ಗೀತೆ
೧
ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ
ಇವಳಿಗಾಗಿ ಇವನೋ ಇವನಿಗಾಗಿ ಇವಳೋ
ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ
ಇವನಿಗಾಗಿ ಕಾದು ಕಾದು ಕಾಯುತ್ತಿರುವ ಇವಳೇ ಇಳೆ.
ಇಳಾ ಎಂದರು ಧರಿತ್ರೀ ಎಂದರು.
ಸುಳ್ಳು ಸುಳ್ಳೇ ಕ್ಷಮಯಾ
ಧರಿತ್ರಿ ಎಂದೂ ಅಂದುಕೊಂಡಿದ್ದರು. ಇವನ ಹೆಸರು
ಗಳೋ ಅಪರಿಮಿತ ಸ್ವಾತಿ, ಉತ್ತರಾ,
ಧನಿಷ್ಠಾ, ಮುಂಗಾರೇ ಇವನ ಮೊದಲ ರೂಪ, ಉಳಿದುದೆಲ್ಲಾ ಇವನದೇ ಬೇರೆ
ಬೇರೆ ಕೋಪ ತಾಪ.
ಇವನಾರ್‍ಭಟಕೆ ನಡುಗಿದರೂ
ಸಡಗರಗೊಂಡು ಮೆರೆಯುವ
ಇವಳು ತಪಿಸಿದ್ದಳು ತಾಪಿಸಿದ್ದಳು. ತನ್ನ ಸುತ್ತಮುತ್ತ
ಬಿರುಕು ಬಿಟ್ಟಿದ್ದಳು. ಮಕ್ಕಳ ತಲೆಗೂದಲ ಎಲೆ ಎಲೆ
ಉದುರಿಸಿದ್ದಳು. ಬಿಳಿ ಸೀರೆ ಉಡಿಸಿದ್ದಳು.
ಬೋಳು ಬೋಳಾಗಿಸಿದ್ದಳು
ಅಳಿಸಿದ್ದಳು. ಕಾಡಿಸಿದ್ದಳು ಹಾಗೇ ಕಾಯಿಸಿದ್ದಳು.
೨
ಕಾದಿದ್ದ ಇವಳನು ಕಂಡ ಅವನು ಬಂದೇ ಬಂದ.
ಇಂಚಿಂಚು ನೆಲದಲ್ಲಿ ತನ್ನ ಬೇರಿಳಿಸಿ ರಸ್ತೆ ರಸ್ತೆ ಹರಿದು
ಹೊಂಡವಾಗಿಸಿ ಸುಮ್ಮನೇ ಸುರಿದು
ಸುರಿದ, ಅಂತರ್‍ಜಲವಾಗಿ
ನೀರಾಗಿ ಕೊಚ್ಚೆಯಾಗಿ ರಾಡಿಯಾಗಿ ಅಲಿಕಲ್ಲಾಗಿ ಹಿಮ
ಪಾತವಾಗಿ ಮೆರೆದ ತನ್ನ ಎರಡೂ ಮುಖ ತೋರಿದ.
೩
ಕಾದಿದ್ದ ಕೆಂಡವಾಗಿದ್ದ ಜ್ವರವೇರಿದ್ದ
ಅವಳನು ತಣಿಸಲೋ
ದಣಿಸಲೋ ದಂಡಿಸಲೋ ಎಂಬಂತೆ ಒಂದೇ
ಸಮನೇ ಸುರಿದ.
ಒನಕೆ ಮಳೆ ಜಡಿತ, ಆ ಕ್ಷಣಕೆ ಸಂತೃಪ್ತಿ.
ತೇಗಿ ತೇವವಾದ
ಅವಳು ಕಣ್ಣೆವೆ ತೆರೆಯುವಷ್ಟರಲ್ಲಿ
ಮತ್ತೆ ಒಣಗಿ ಬಾಯಾ
ರಿದಳು ಇವಳ ಹಣೆಬರಹ ಇವಳದು ಇದೇ ಗೋಳು.
೪
ತಣಿಸಿದರೆ ಸಾಯುವ ಮತ್ತೆ ಹುಟ್ಟುವ
ಇವಳ ಈ ದಾಹ ಇಂಗದ ಬಾಯ ತುಂಬಲು
ಋತು ಋತುವಿಗೂ ಬರುವ ಮಳೆರಾಯ
ಬಾರೋ ಬಾರೋ ನೀರಿಲ್ಲ ನೀರಿಲ್ಲ
ಕಾದಿದ ಧರೆಯಲ್ಲಾ
*****
-ಪ್ರಜಾವಾಣಿ ದೀಪಾವಳಿ ವಿಶೇಷಾಂಕ