ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ
ಎಷ್ಟು ಹುಡುಕಿದರೂ ಸಿಕ್ಕಲಿಲ್ಲ
ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ
“ನಾನು ಕಾಣೆಯಾಗಿದ್ದೇನೆ ಓ ನಾನೇ
ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ
ಬೇಗನೇ ಬಾ”
ನಾನು ಸಿಗಲಿಲ್ಲ
ಮನೆಯಲ್ಲಷ್ಟೇ ಹುಡುಕಿದ್ದನಷ್ಟೆ
ಬೇರೆ ಕಡೆಗೂ ಹುಡುಕೋಣ ಹುಡುಕಿದರೆ
ನಾನು ಸಿಕ್ಕಬಹುದು ಎಂದು ಹುಡುಕಿದೆ
ಜೂನು ತಿಂಗಳ ಮಳೆಯೂ ರಣರಣ ಹಗಲು
ನಾನು ಆಲೆ-ಅಲೆದಾಡಿದೆ ನನ್ನನ್ನು ಸಿಗಲು
ಕಾಲೇಜು ಲೈಬ್ರರಿಯ ಪುಸ್ತಕದಲ್ಲಿ ಎಲ್ಲಾದರೂ
ನಾನು ಬಿದ್ದಿರಬಹುದೇ?
ಅಥವ ಯಾರಾದರೂ ನನ್ನ ಕದ್ದಿರಬಹುದೇ ?
ಇಲ್ಲ-ಹೀಗೂ ಇದ್ದಿರಬಹುದೇ ?
ಒಂದು ದಿನ ಮಳೆಯಲ್ಲಿ ತೋಯುತ್ತ ಬಂದಾಗ
ಜಾರಿ ಹೋಗಿರಬಹುದೇ ?
ಕಿಸೆಯೊಳಗೆ ಐಡೆಂಟಿಟೀ ಕಾರ್ಡು
ಅಲ್ಲಾದರೂ ನಾನು ಸಿಕ್ಕಬಹುದೇ ?
ಹ್ಞಾಂ-
ಅಂದಂತೆ
ಯಾವಾಗಲಾದರೂ ಈ ಮನೆಯಲ್ಲಿ ನಾನು ಇದ್ದೆನೇ
ಇದ್ದದ್ದು ಹೋದದ್ದೆಲ್ಲಿಗೆ ? ಹೋದದ್ದು ಬಂದೀತು ಯಾವಾಗ ?
ಓ ನಾನೇ ನಾನೇ ನನ್ನ ಜೀನೇ
ನೀನು ಸತ್ತೇ ಹೋದೆಯೇನೇ
ಶಂಕರಾಚಾರ್ಯರಿಗೆ ನಾನು ಯಾರು ಎಂಬುದು ಪ್ರಶ್ನೆ
ನಾನು ಶಂಕೆಯಾಚಾಯ೯
ನನಗೋ-ನಾನು ಎಲ್ಲಿದ್ದೇನೆ
ಎಂಬ ಹುಡುಕಾಟ
ಈ ಹುಡುಕಾಟವೆಲ್ಲ ಹುಡುಗಾಟವಾದೀತೇ ?
ಅಯ್ಯೋ-ನಾನು ಸಿಕ್ಕದೇ ಹೋದರೆ
ನಾನು ಹೇಗೆ ಉಳಿದೇನು ?
ಇಷ್ಟಾದರೂ ನನ್ನ ಹುಡುಕಿ ಫಲವೇನು ?
ನಾನು ಇದ್ದರೂ ಇರದೆ
ಇದ್ದರೂ ಬಿದ್ದರೂ
ಬೇರೆ ಯಾರೂ ನನ್ನ ಹುಡುಕಾಡಲೊಲ್ಲರು
ಹಾಗೆಂದು ನನಗೆ ನಾನು ಬೇಡವೇ
ಏನಿದು ಅನರ್ಥ ?
ಕನ್ನಡಿಯ ಎದುರುಗಡೆ ನಾನಿಲ್ಲ
ಅಂಗಿ ಪ್ಯಾಂಟಿನ ಒಳಗೆ ನಾನಿಲ್ಲ
ಸಭೆಯೊಳಗೆ ನಿಂತವನು ನಾನಲ್ಲ
ಈ ಪದ್ಯ ಬರೆದವನೂ ನಾನಲ್ಲ
ನಾನು ಉಂಟು ನಾನು ಇಲ್ಲ
ನಾನು ಕಾಣೆ ನಾನು ಹುಡುಕುವವ
ನನ್ನನ್ನ ನಾನೇ ಹುಡುಕಿ
ನಾನು ಸಿಗಲಿಲ್ಲ
ಎಂದರೆ ಸರಿ ಅಲ್ಲ
ಅಂದರೂ ಸಿಗದೆ ಇದ್ದದ್ದು ಸುಳ್ಳಲ್ಲ
ಈ ಮಣ್ಣಿನಾಳ ಪಾತಾಳದೊಳಗಡೆಗೆ
ನಾನು ಹೂತಿರಬಹುದೇ
ಇರಲಾರೆ-ಇರಲಾರೆ
ನಿನ್ನೆ ಕಂಡಿದ್ದ ಆ ಸುಮದ ನಗೆಯರಳಲ್ಲಿ
ನಾನು ಚೆಲ್ಲಿ ಹೋಗಿರಬಹುದೇ ?
ಇರಲಾರೆ-ಇರಲಾರೆ
ದೇವರೆದರುಗಡೆ ಕಣ್ಮುಚ್ಚಿ ಕುಳಿತಾಗ
ಹರಿದ ಭಕ್ತಿಯ ಕಡಲ
ನೀರಾಗಿ ಸಾಯುಜ್ಯ ಹೊಂದಿರಲುಬಹುದೇ ?
ಇರಲಾರೆ-ಇರಲಾರೆ
ಹಾಗಿದ್ದಲ್ಲಿ
ನಾನೆಂದೂ ತಿರುಗಿ ಬರಲಾರೆ
ಒಂದು ದಿನ ನಡುರಾತ್ರಿ
ಹೆಂಡತಿ ಮಕ್ಕಳು ರಾಜ್ಯ
ಎಲ್ಲವನ್ನೂ ತೊರೆದು
ಬುದ್ಧ ಓಡಿದ ಹಾಗೆ
ನನ್ನೊಳಗಿನಿಂದ ಈ ನಾನು ಓಡಿರಬಹುದೇ ?
ಒಂದು ಹುಣ್ಣಿಮೆ ರಾತ್ರಿ
ಕಾವಿ ಬಟ್ಟೆಯನುಟ್ಟು
ನಾನು ನನ್ನೊಳಗಡೆಗೆ ಹಿಂತಿರುಗಬಹುದೇ ?
ಹೌದಲ್ಲ
ನನ್ನದಾಗಿದ್ದಲ್ಲಿ ನನಗೆ ಸಿಗಲೇಬೇಕು
ಆದರೂ ಅಲ್ಲಿಯವರೆಗೆ ಹುಡುಕಾಡಬೇಕು
ಹುಡುಕೀ ಹುಡುಕೀ ನಾನು
ನನ್ನನ್ನು ಪಡೆದು
ನನ್ನಲ್ಲಿ ನನ್ನನ್ನು ನನ್ನ ಜಾಗದ ಮೇಲೆ
ಕೂರಿಸಿದರೆ ಮಾತ್ರ ಉಳಿದೀತು
ನನ್ನ ನನ್ನತನ
ಇಲ್ಲ-ಇದೇ ಸಣ್ಣತನ.
*****