ಭವ್ಯ ಭಾರತದ ಎರಡನೆಯ ಪ್ರಧಾನ ಮಂತ್ರಿಯಾಗಿ ೧೯೬೪ ರಲ್ಲಿ ಶಾಸ್ತ್ರಿಯವರು… ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು! ಇದೇ ಸಮಯದಲ್ಲಿ ನೆರೆಯ ರಾಷ್ಟ್ರ ಚೀನಾ ದೇಶವು ಕಾಲು ಕೆದರಿ ಜಗಳ ತೆಗೆದು ಯುದ್ಧ ಮಾಡಲು ಶುರುವಾಯಿತು….!
ಅನಿವಾರ್‍ಯವಾಗಿ ಯುದ್ಧ ಮಾಡಲು ಭಾರತ ಮುಂದಾಯಿತು. ಹೊಸದಾಗಿ ಅಧಿಕಾರ ಸ್ವೀಕರಿಸಿದ ಶಾಸ್ತ್ರೀಜಿಯವರು ಇಡೀ ಸೈನ್ಯವೇನು ಇಡೀ ದೇಶವನ್ನೇ ಹುರಿದುಂಬಿಸಿದರು.
ಇದೇ ಸಮಯದಲ್ಲಿ- ಸುದ್ದಿ ಮಾಧ್ಯಮದವರು ಗಣ್ಯರು ಪ್ರಮುಖರು ಎಲ್ಲರೂ ಪ್ರಧಾನಿಯವರನ್ನು ಮುತ್ತಿ “ನಿಮ್ಮ ಮುಂದಿನ ಸವಾಲ್ ಯಾವುದು?” ಎಂದು ಎಲ್ಲರೂ ಕೇಳಿದರು.
ಲಾಲ್‌ಬಹದ್ದೂರ್ ಶಾಸ್ತ್ರಿಯವರು ಕ್ಷಣ ಹೊತ್ತು ಗಂಭೀರವಾಗಿ ಚಿಂತಿಸಿದರು. ಅವರೇ ಮಾತಿಗೆ ತೊಡಗಿದರು…
“ನನ್ನ ಮುಂದಿರುವ ಸವಾಲು ಎಂದರೆ… ನಮ್ಮ ದೇಶವನ್ನು ಬಲಿಷ್ಠವನ್ನಾಗಿಸುವುದು” ಎಂದರು.
ಅಲ್ಲಿದ್ದವರೆಲ್ಲ ಅವಕ್ಕಾಗಿ ಕುಳಿತರು.
ತುಸು ಹೊತ್ತು ಗಂಭೀರತೆಯಿಂದ ಚಿಂತಿಸಿದ ಸುದ್ದಿ ಮಾಧ್ಯಮದವರೆಲ್ಲ “ಸಾರ್, ಒಂದೋ ಎರಡೋ ಮೂರೋ ಸಮಸ್ಯೆಗಳಿದ್ದರೆ ನೀವು ಎದುರಿಸುವಿರೆಂದು ಭಾವಿಸಬಹುದಾಗಿತ್ತು! ಆದರೆ…. ಬಲಿಷ್ಠ ಶತ್ರು ರಾಷ್ಟ್ರ ಚೀನಾ ಆಕ್ರಮಣದ ಜೊತೆಗೆ ದೇಶ, ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆಯಲ್ಲಾ? ಹೇಗೆ ಮುನ್ನಡೆಸುವಿರಿ?” ಎಂದು ಮತ್ತೊಂದು ಪ್ರಶ್ನೆ ಎಸೆದರು.
ಆಗ ಯೋಚಿಸುವ ಮೌನ ವಹಿಸುವ ಗೋಜಿಗೇ ಹೋಗದೆ ಥಟ್ಟನೆ- “ನಾನು ನನ್ನ ಜನರನ್ನು ನಂಬಿದ್ದೇನೆ. ಅವರ ಬಲವನ್ನು ಅರಿತಿದ್ದೇನೆ. ಜೈಜವಾನ್, ಜೈಕಿಸಾನ್ ಎಂದು ರೈತಣ್ಣವನ್ನು ಬಡಿದೆಬ್ಬಿಸುತ್ತೇನೆ. ಇಡೀ ದೇಶವಾಸಿಯು ಪ್ರತಿ ಸೋಮವಾರ ರಾತ್ರಿ ಒಂದು ಊಟ ದೇಶಕ್ಕಾಗಿ ಬಿಡಲು ವಿನಂತಿಸುತ್ತೇನೆ. ಭಾರತೀಯ ಸೇನೆಯಲ್ಲಿ ಒಂದು ರಾಷ್ಟ್ರೀಯತೆ ಐಕ್ಯಮಂತ್ರ ರಾಷ್ಟ್ರ ಪ್ರೇಮ ದೇಶಭಕ್ತಿ ಮೆರೆಯಲು ಕರೆ ಕೊಡುವೆ… ದೇಶದ ಅತ್ಯುನ್ನತ ಸೇವಕನಾಗಿ ನಾನೂ ರಾತ್ರಿ ಊಟ ತ್ಯಜಿಸಿರುವೆ. ಅದನ್ನು ಅಭ್ಯಾಸ ಮಾಡಿ ಎಲ್ಲರಿಗೆ ವಿನಂತಿಸಿರುವೆ. ನನ್ನ ಜನ ನನ್ನ ಮಾತುಗಳನ್ನು ದೇಶವನ್ನು ಮರೆಯಲಾಗದು… ವಿಜಯಪಥ, ಜಯಪಥ, ಪ್ರಗತಿಪಥ ನಮ್ಮದು. ಬರೀ ಒಂದು ಚೀನಾವಲ್ಲ ಅಂಥಾ ನೂರು ಚೀನಾ ದೇಶಗಳು ದಾಳಿ ಮಾಡಿದರೂ ನಮ್ಮ ಸೈನ್ಯ ಬಲವನ್ನು ಎದುರಿಸಲಾರವು” ಎಂದು ಶಾಸ್ತ್ರೀಜಿಯವರು ಅಂದರು.
ಅಲ್ಲಿದ್ದವರೆಲ್ಲ ದಂಗುಬಡಿದು ಹೋದರು. “ಸಾರ್….. ನಿಮ್ಮ ಮಾತು ಕೃತಿ ಆದರ್ಶ ಸರಳ ಸಜ್ಜನಿಕೆ ಖಂಡಿತ ದೇಶವನ್ನು ಮುನ್ನಡೆಸುವವು.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ನಿಮ್ಮ ಜೊತೆಗೆ ನಾವೊಂದೇ ಇಲ್ಲ! ಇಡೀ ದೇಶದ ಜನತೆಯೇ ಇದೆ…” ಎಂದು ಹೃದಯ ತುಂಬಿ ಅಂದರಲ್ಲದೆ, ನಮಸ್ಕರಿಸಿ, ಹರ್ಷದಿ ಹೊರಟುಹೋದರು.
*****