ಪೇಪರಿನ ಬಾಣಬತ್ತಳಿಕೆಗಳ ಹಿಡಿದು
ಒಬ್ಬರನ್ನೊಬ್ಬರು ಗುರಿಯಿಟ್ಟು ಕೊಲ್ಲಲು
ಪುರಾವೆ ಪತ್ರಗಳ ಹಿಡಿದು
ದೇವರಿಗೆ ಹೊರಟಿವೆ ರಾಜಕೀಯ ಪಾತ್ರಧಾರಿಗಳು*
ಬಣ್ಣಬಣ್ಣದ ಹುಲಿವೇಷದವುಗಳು.
ಆಣೆ ಪ್ರಮಾಣ ಪ್ರತಿಜ್ಞೆಗಳಿಗೆ
ಎಚ್ಚರಿದ್ದಂತೆಯೇ ಇದ್ದ ದೇವರು
ಇಬ್ಬದಿಯ ಗಂಟುಮುಖಗಳ ನಡುವೆ
ಗುಮ್ಮಾಗಿ ನಗುವುದಾ ಕಂಡೆ.
ಕಂಡೆಕಂಡೆ ತುಕ್ಕುಹಿಡಿದ ಖಾಲಿಕೊಡಗಳ
ಬುಡಬುಡಿಕೆ ಭರ್‍ಚಿ ಗುರಾಣಿ ಎಸೆದಾಟ
ದೇವರು ಕಾಣಿಸಿಯೇ ಕಾಣುವನೆಂಬ
ಭರವಸೆ ಹೊತ್ತು ಕಣ್ಣುಮುಚ್ಚಿ ತುಟಿಬಿಚ್ಚಿ
ಪಿಟಿಪಿಟಿಸುವ ಸಮಯಸಾಧಕರ.
ತಣ್ಣನೆಯ ಬೆಳಕಿನಾ ನಡುವೆ
ಕಿವುಡ ಮೂಕ ಹೆಳವನಾಗಿ ಕಲ್ಲಿನೊಳಗೆ
ಕಣ್ಣು ಪಿಳಿಕಿಸದೆ ಕತ್ತಲೆ ಕೋಣೆಯಲಿ
ಇವರಂಥವರೇ ತೊಡಿಸಿದ ಮುಖವಾಡದೊಳಗೆ
ಉಸಿರು ಬಿಗಿಹಿಡಿದು ಇವರಂತೆಯೇ
ಮೇಲೆ ನಗುಮುಖ ಹೊಂದಿರುವ ದೇವರು ನಗುವುದಾ ಕಂಡೆ.
ಜರತಾರಿ ಪಂಚೆ ಉಟ್ಟ ಪಾತ್ರಧಾರಿಗಳು
ಹತ್ತೂ ಬೆರಳ ಹರಳಿನ ನಕ್ಷತ್ರಕರು
ಕುಂಕುಮ ಶ್ರೀಗಂಧ ಪೂಸಿತರು
ದೇವರನು ಮಾತನಾಡಿಸಿಯೇ ಬಂದಂತೆ
ಕಚ್ಚಾಡಿದ್ದೇ ಕಚ್ಚಾಡಿ ನಂಜೇರಿಸಿಕೊಂಡು
ಸುರಿವ ಮಳೆಯೊಳಗೆ ಭಾಷಣ ಬಿಗಿದದ್ದು ನೋಡಿ
ದೇವರು ನಕ್ಕ.
ಮಂತ್ರಿಗಳಂತೆ ಇವು ಅಲ್ಲಲ್ಲ ತಂತ್ರಿಗಳು.
ಕಂಡೆ ಕಂಡೆ ಮತ್ತೊಮ್ಮೆ ಇನ್ನೊಮ್ಮೆ
ದೇವರು ನಗುವುದಾ ಕಂಡೆ.
ರಾತ್ರಿಗೆ ಸುಸ್ತಾದ ದೇವನ ಹೂಹಾರ
ಮುಖವಾಡ ತೆಗೆದಿಟ್ಟು ಪೂಜಾರಿ
ಹಗುರಾಗಿ ಹಣ್ಣು ಹಂಪಲ ಹೊತ್ತುಕೊಂಡು ಹೋದದ್ದೇ-
ಬೆತ್ತಲೆ ದೇವರು ಸುಸ್ತಾಗಿ
ಗಡದ್ದಾಗಿ ನಿದ್ದೆಗೆ ಜಾರಿದಾಗಲೂ
ಈ ಯಂತ್ರ ಮಂತ್ರ ತಂತ್ರದವರ
ಕಂಬಿ ಕಟಕಟೆಯ ಶಿಕ್ಷೆ ನೋಡಿ
ಕೈಯಲೊಂದು ಏಕತಾರಿ ಕೊಡಬೇಕಿವಕೆನ್ನುತ
ದೇವರು ಗಹಗಹಿಸಿ ನಗುವುದಾ ಕಂಡೆ
ದೇವರು ಬಿದ್ದು ಬಿದ್ದು ನಗುವುದ ಕಂಡೆ.
* [ಮಾಜಿ ಮಂತ್ರಿಗಳು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ – ಧರ್ಮಸ್ಥಳದ ಮಂಜುನಾಥನ ಎದುರು. ಮಂತ್ರಿ ಕಿಮ್ಮನೆ ರತ್ನಾಕರ – ಮಾರಿಕಾಂಬ ದೇವಸ್ಥಾನದಲ್ಲಿ.]
*****