ಬೆಳಿಗ್ಗೆ ಬೆಳಿಗ್ಗೆ ಪೇಪರ್ ಓದುವುದೆಂದರೆ
ಟಿ. ವಿ. ನೋಡುವುದೆಂದರೆ
ಮೈಮೇಲೆ ಕೆಂಪಿರುವೆಗಳನ್ನು ಬಿಟ್ಟುಕೊಂಡಂತೆ
ಪೇಪರ್ ಪುಟಗಳು ತೆಗೆದರೆ
ಟಿ.ವಿ. ಚಾನೆಲ್‌ಗಳು ಒತ್ತಿದರೆ ಸಾಕು-
ಘನಂದಾರಿ ಕೆಲಸ ಮಾಡುತ್ತೇನೆನ್ನುವವರ
ಆರೋಪ ಪ್ರತ್ಯಾರೋಪ ಕೂಗಾಟ.
ಕಸ, ನೆಲ, ನೀರಿಗೆ ತಿಪ್ಪೆಸಾರಿಸುವಾಟ
ಜಾತಿಮತಗಳೊಳಗೆ ಬೆಂಕಿ ಬಂದೂಕಗಳ ಸದ್ದು
ಹೊಸಕಿಹಾಕಿದ ಹೆಣ್ಣುಗಳ ಒಡಲಾಳದ ಉರಿ
ಮೋಸದಮಾತು ಮಂತ್ರದೊಳಗೆ ತಂತ್ರ
ನೇಣು-ರಸ್ತೆ ತುಂಬ ರಕ್ತ
ಹಣವಂತನ ಮೋಸದ ಹೂಡಿಕೆಯಾಟ
ಕೊನೆಗೊಂದಷ್ಟು ಆಟಕ್ಕುಂಟು ಲೆಕ್ಕಕ್ಕಿಲ್ಲ.
ಹೀಗೆ ಬೆಳಗಿನ ಎಳೆಬಿಸಿಲು ಬಿರುಸಾಗಿ
ತಣ್ಣನೆಯ ಗಾಳಿ ಗಬ್ಬೆದ್ದು
ತಲೆ ತುರಿಕಿಗೆ ಹುಣ್ಣುಗಳು ಹುಟ್ಟುತೊಡಗಿ
ನೆಮ್ಮದಿಯೇ ದಿಕ್ಕಾಪಾಲು ಮಾಡುವ
ಪತ್ರಿಕೆಗಳು ಬೆಳಿಗ್ಗೆ ಬೆಳಿಗ್ಗೆ ಓದಲೇಬಾರದು.
ಟಿ.ವಿ. ಯಂತೂ ನೋಡಲೇಬಾರದು.
ಆದರೂ ಕಣ್ಣಾಡಿಸಲೇ ಬೇಕೆಂದಾದರೆ
ಓದಿ ನೋಡಿ-
ಕೆಂಪಿರುವೆಗಳ ಕಚ್ಚಾಟಕೆ ವಿಷಬೊಬ್ಬೆಗಳೆದ್ದು
ಕೋಮಾದೆಡೆಗೆ ಇಳಿಯತೊಡಗಿದರೆ
ತಕ್ಷಣ ಸ್ನಾನದ ಮನೆಗೆ ನಡೆದು ಬಿಡಿ;
ಇಲ್ಲವೆ ರಾತ್ರಿ ಕೊನೆಯ ಘಳಿಗೆಗೆ ಓದಿ
ಸುಮ್ಮನೆ ಚದ್ದರ ಹೊದ್ದು ಮಲಗಿದರಾಯ್ತು.
*****