ಜನ್ಮ ಜನ್ಮಾಂತರದ ಶಾಪ ನಿಮಗಂಟಿದೆ
ಬೇಡವೆ ನಿಮಗೆ ಪರಿಹಾರ?
ನೋಡಿಲ್ಲಿ ನೋಡಲ್ಲಿ ಮೃತ್ಯುವಿನ ದೂತ
ಕಾಯುತಿರುವ ನಿಮ್ಮ ಮನೆಯ
ಮುಂಬಾಗಿಲು ಹಿಂಬಾಗಿಲು-
ಶಕುನ ಜಾತಕ ಜ್ಯೋತಿಷಿಗಳು
ಕಾಲಜ್ಞಾನಿ ಸಂಖ್ಯಾಶಾಸ್ತ್ರ ವಾಸ್ತುದವರು
ದಿನ ಬೆಳಗಾದರೆ ಗಂಟಲು ಕಿರುಚಿ ಹೇಳಿ ಹೇಳಿ
ಹೆದರಿಸಿ ಎದೆಯೊಡೆಸಿ ಸಾಯಿಸುತಿಹರು ಮುಗ್ಧರ-
ಮತ್ತೆ ಪರಿಹಾರಕೆ ಅವರೇ ದಾಳಗಳನೆಸೆದು
ಕತ್ತಲೆಕೋಣೆಗೆ ಹೊಗೆಹಾಕಿ ದೇವರೆ ಬಂದಿಹನಿಲ್ಲಿ
ಮಾತನಾಡುವನು ನಿಮ್ಮೊಂದಿಗೆ ಭಯ ಬೀಳದಿರಿ
ನೋಡಿ ನೋಡಿ ಕೇಳಿ ಭಕ್ತರೆ ಭಕ್ತಿ ಇರಲಿ…
ಮುಖವಾಡ ಸ್ವಾಮಿಗಳ
ಒಳಗೊಳಗೇ ನಗು ಹಣದ ಚೀಲ ಝಣಝಣ.
ಮಾಟಮಂತ್ರ ವಶೀಕರಣ ನರಬಲಿ ಪ್ರಾಣಿಬಲಿ
ಹರಕೆ ಮಡೆಸ್ನಾನ ಪಂಕ್ತಿಭೇದ ದೇವದಾಸಿ
ಬೆತ್ತಲಸೇವೆ ಪಾದಪೂಜೆ ಅಡ್ಡಪಲ್ಲಕ್ಕಿ
ಆಹಾ! ಒಂದೇಽ ಎರಡೇಽ ಇವರ
ನಂಬಿಕೆ ಬಿಂಬಿಸುವ ಹುನ್ನಾರ.
ಅಯ್ಯೋ ದುರ್‍ಭಾಗ್ಯ ದೇಶವೆ
ಎಷ್ಟೊಂದು ನರಳುವಿಕೆ ಅಂಧಕಾರ
ಹುಣ್ಣಿಮೆಯ ಬೆಳಕಿನಲ್ಲೂ ಅಮವಾಸ್ಯೆ ಕತ್ತಲೆಯೆನುತ
ಭೂತಪ್ರೇತಗಳೆಂದು ಅರಿಷಿಣ ಕುಂಕುಮ ಎರಚುವವರು-
ರಾಜಕೀಯ ಖುರ್ಚಿಗೂ ಬಲಿ; ಉರುಳಿಸಲೂ ಬಲಿ
ಕುರಿ ಕೋಳಿ ಹಸು ಕಾಡೆಮ್ಮೆ ಸಾಕಿಲ್ಲ ಇವಕೆ
ಹಸುಗೂಸು ಕಂದಮ್ಮಗಳು ಬೇಕಿವಕೆ
ತಪ್ಪಿದರೆ ಕಂಠಕೆ ಬೆಚ್ಚಿಬೀಳಿಸುವ ಹುನ್ನಾರ.
ಗೂಬೆ ಗೂಗೂ ಅಂದರೊಂದು ಕಾಗೆ ಕಾಕಾ ಅಂದರೊಂದು
ಹಲ್ಲಿ ಲೊಚಗುಟ್ಟಿದರೊಂದು ಬೆಕ್ಕು ದಾಟಿದರೊಂದು
ಅಪಶಕುನದ ಮಾತೆತ್ತಿ ಸಾಯಿಸುವ ಪಾತಕಿಗಳು.
ಬಣ್ಣದ ವೇಷಗಳ ಭಯಂಕರ ಮುಖವಾಡಗಳು
ಕಳಚಿ ಬೀಳಲಿ ಮಾನವೀಯತೆ ಮೆರೆಯಲಿ…
ಚಿಂತನ ಮಂಥನಗಳಿಗೆ ಹೆದ್ದಾರಿಯಾಗಲಿ…
ಮನುಜರಾಗಲಿ ವಿಶ್ವಾಸಬೆಳೆಸಲಿ.
*****
೧. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದ ವಿಷಯ: ಇದರ ಬಗೆಗೆಯೇ ಒಂದು ಕರಡು ರಚನಾ ಸಮಿತಿ ಮಾಡಬೇಕೆನ್ನುವ ಒತ್ತಾಯ-೨೫ ನವೆಂಬರ್ ೨೦೧೩
೨. ಮೂಢನಂಬಿಕೆಯವರು ವಿಚಾರವಾದಿಗಳಾದ ಮಹಾರಾಷ್ಟ್ರದ ನರೇಂದ್ರ ದಾಬೋಲಕರ್, ಗುಲ್ಬರ್ಗದ ಲಿಂಗಣ್ಣ ಸತ್ಯಂಪೇಟೆ, ಧಾರವಾಡದ ಡಾ. ಎಂ. ಎಂ. ಕಲಬುರ್ಗಿ ಅವರನ್ನು ಕೊಂದರು.
೩ ಸರಕಾರಕ್ಕೆ ಮಾಡಬೇಕಾದಂತಹ ಅನೇಕ ಕೆಲಸಗಳಿವೆ: ಕೃಷಿಸಮಸ್ಯೆ, ನೆಲ, ಜಲ, ಮಹಿಳೆ, ಮಕ್ಕಳು, ಶಿಕ್ಷಣ, ಯುವಕರಿಗೆ ಉದ್ಯೋಗ, ವೃದ್ಧರ ಸಮಸ್ಯೆ ಮುಂತಾದವುಗಳು. ಸುಮ್ಮನೆ ಎಲ್ಲರ ಸಮಯ ಹಾಳು + ದುಡ್ಡುದಂಡ.