ಕಡಲಬಸಿರು ನೋಡುವ ಆಸೆಕಣ್ಗಳು-
ತನ್ನವೇ ಐದಾರು ಬಸಿರು
ನೆಲಕ್ಕುರುಳಿ ಬೆಳೆದು ನೀರಿಗಿಳಿದು
ಜಾಲರಿ ತುಂಬಿ ತುಂಬಿ ಮೀನುಗಳ
ತರುವ ಮಕ್ಕಳ ನೋಡಿ ನಕ್ಕಾಕೆ…
ಬೆಂಕಿಯ ನಾಲಿಗೆಗೆ ಸಿಕ್ಕು
ಸುಟ್ಟ ಮೀನುಗಳಿಗೆ ಅತ್ತಾಕೆ….
ಕತ್ತಲಕಾಯಕಕೆ ಬೆತ್ತಲಾಗಿ
ಹಗಲು ಹಣೆಬರಹಕೆ ಬಣ್ಣತುಂಬಿ
ಮನದೊಳಗೆ ಉಬ್ಬರ ಪಟ್ಟಾಕೆ…
ಮಳೆ ಮಳೆ ಮಳೆ ಹುಚ್ಚೆದ್ದ ಆಕಾಶ
ಮಳೆಸುರಿಸಿ ಹೊಳೆಹಳ್ಳ ತುಂಬಿ ಹರಿದು
ಕಡಲತಾಯಿ ಗರ್‍ಭವತಿ
ಕುಲುಕಾಟ ನೂರಾರು ಜೀವರಾಶಿಗಳೊಡಲು
ಬಣ್ಣ ಭಾವನೆಗಳ ಭಾರ ಹೊಯ್ದಾಟ.
ಬಿಟ್ಟೂಬಿಡದ ಉರಿಯನಾಲಿಗೆಗೆ ಸಿಕ್ಕು
ಒಳಗೊಳಗೆ ಬೆಂದು ನೋವುಂಡು
ನೆರಳಿ ಹೊರಳಿ ತೆವಳುತ ನಿಂತ ಕಡಲಗರ್‍ಭ
ಹಗಲೊಮ್ಮೆ ರಾತ್ರಿಯೊಮ್ಮೆ
ಕಡಲಗರ್‍ಭ ಕಂಡು ವಿಸ್ಮಯ
ಆಳ ಅಗಾಧತೆಗೆ ತನ್ನದೇ ಹೊಟ್ಟೆ ಸವರಿ
ಮಗದೊಮ್ಮೆ ಕಡಲಿನುಬ್ಬರಕೆ ದೃಷ್ಟಿ ಸರಿಸಿ
ಮೌನಿಯಾಗಿ ನಕ್ಕಾಕೆ.
ಕಡಲು ರಾಜನೆ? ಅವನಿಗದೆಂತಹ ಬಸಿರು!
ಕಡಲು ರಾಣಿಯೆ? ಅವಳಿಗದೆಲ್ಲಿಯ ನೆಮ್ಮದಿ!!
ಅದು ಬೆಸ್ತನರಮನೆ ಒಳಗೆ
ಹೆಂಡತಿಯ ದುಃಖದುಮ್ಮಾನಗಳಬ್ಬರ
ತಾಕಲಾಟದ ಗರ್‍ಭ
*****